More

    ನರರೋಗಕ್ಕೆ ಕೆಎಲ್‌ಇಯಲ್ಲಿ ಅತ್ಯಾಧುನಿಕ ಚಿಕಿತ್ಸೆ

    ಬೆಳಗಾವಿ: ನರಸಂಬಂಧಿ ರೋಗಿಗಳಿಗೆ ಸಮಗ್ರ, ಅತ್ಯುತ್ತಮ ಸೇವೆ ನೀಡಲು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವನ್ನು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯು ಹೊಂದಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಡಾ.ವಿ.ಎಸ್.ಸಾಧುನವರ ಹೇಳಿದರು.

    ನಗರದ ಕಾಹೆರ್, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ನರಸಂಬಂಧಿ ರೋಗಕ್ಕೆ ಆತ್ಯಾಧುನಿಕ ಚಿಕಿತ್ಸೆ ಕೊರತೆ ಎದ್ದು ಕಾಣುತಿತ್ತು. ಅದನ್ನು ಗಮನಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಅವರು 4 ವರ್ಷಗಳ ಹಿಂದೆ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ಬೈಪ್ಲೇನ್ ಕ್ಯಾಥ್‌ಲ್ಯಾಬ್ ತೆರೆದು, ನರರೋಗದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

    ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ಕಲ್ಪಿಸಲು ಕೆಎಲ್‌ಇ ಸಂಸ್ಥೆಯು ಅನೇಕ ಯೋಜನೆ ರೂಪಿಸಿದೆ. ಅದರಲ್ಲಿ ಮುಖ್ಯವಾಗಿ ಬೈಪ್ಲೇನ್ ಕ್ಯಾಥ್‌ಲ್ಯಾಬ್ ಕೂಡ ಒಂದು. ನರ ಸಂಬಂಧಿ ರೋಗಗಳಿಂದ ವ್ಯಕ್ತಿಯು ತೊಂದರೆಗೀಡಾದಾಗ ಕ್ಯಾಥ್‌ಲ್ಯಾಬ್‌ನಿಂದ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಸಹಾಯವಾಗಲಿದೆ ಎಂದರು.

    ಇಂಡಿಯನ್ ಸೊಸೈಟಿ ಆ್ ನ್ಯುರೋರೆಡಿಯಾಲಾಜಿ ಅಧ್ಯಕ್ಷ ಡಾ.ಶೈಲೇಶ ಗಾಯಕವಾಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪಾರ್ಶ್ವವಾಯು ಕುರಿತು ಅರಿವು ಕಡಿಮೆ ಇದ್ದು, ಇದರಿಂದ ಶಾಶ್ವತ ಅಂಗವೈಕಲ್ಯ ಅಥವಾ ಸಾವು ಸಂಭವಿಸುತ್ತದೆ. ಅದನ್ನು ತಡೆಗಟ್ಟಲು ಸಮಗ್ರವಾದ ಯೋಜನೆ ರೂಪಿಸಿ, ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಆಗಬೇಕು. ಪಾರ್ಶ್ವವಾಯು ಉಂಟಾದಾಗ ಜನರು ಅನೇಕ ರೀತಿ ಔಷಧೋಪಚಾರ ಮಾಡುತ್ತಿದ್ದು, ಇದರಿಂದ ಗುಣಮುಖರಾಗುವುದು ಕಡಿಮೆ. ಆದ್ದರಿಂದ ಅತ್ಯಾಧುನಿಕ ತಂತ್ರಜ್ಞಾನದಿಂದ ಪಾರ್ಶ್ವವಾಯು ರೋಗ ಗುಣಪಡಿಸಲು ಸಾಧ್ಯ ಎಂಬುದನ್ನು ತಿಳಿಸಬೇಕು ಎಂದರು. ಕಾಹೆರ್ ಉಪಕುಲಪತಿ ಡಾ.ನಿತಿನ ಗಂಗಾಣೆ, ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ವಿ.ಡಿ.ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ, ಕ್ಯಾನ್ಸರ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ಡಾ.ರಾಜೇಶ ಪವಾರ, ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಆರ್ೀ ಮಾಲ್ದಾರ, ಐಎಸ್‌ಎನ್‌ಆರ್ ಉಪಾಧ್ಯಕ್ಷೆ ಡಾ.ರೋಜ್ ಧವನ ಭರತ, ಡಾ.ವಿರೂಪಾಕ್ಷ ಹಟ್ಟಿಹೊಳಿ, ಡಾ.ನವೀನ ಮೂಲಿಮನಿ, ಡಾ. ಅಭಿನಂದನ ರೂಗೆ, ಡಾ.ಈರಣ್ಣ ಹಿತ್ತಲಮನಿ, ಡಾ.ಅಭಿಮಾನ ಬಾಲೋಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts