More

    ಪತ್ರಕರ್ತರಿಗೆ ರಕ್ಷಣೆ ಒದಗಿಸಲು ಡಿಸಿ ಹಿರೇಮಠಗೆ ಮನವಿ

    ಬೆಳಗಾವಿ: ನಾಡಿನ ಜನತೆಗೆ ಸುದ್ದಿ ಪೂರೈಸಲು ಶ್ರಮಿಸುವ ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ಖಂಡಿಸಿ ಹಾಗೂ ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಾಧ್ಯಮ ಪ್ರತಿನಿಧಿಗಳು ಬುಧವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳ ದಾಂಧಲೆ ವೇಳೆ ಖಾಸಗಿ ಸುದ್ದಿವಾಹಿನಿ ಪ್ರತಿನಿಧಿಗಳ ಮೇಲೆ ಹಾಗೂ ಈಚೆಗೆ ಬೈಲಹೊಂಗಲ ತಾಲೂಕಿನ ಸಂಪಗಾವಿ ಗ್ರಾಮದಲ್ಲಿ ಅಕ್ರಮ ಗೋ ಸಾಗಣೆ ಮಾಡುತ್ತಿದ್ದ ಸಂದರ್ಭದಲ್ಲಿ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ಇದರಿಂದಾಗಿ ಪತ್ರಕರ್ತರು ನಿರ್ಭೀತಿಯಿಂದ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಲ್ಲೆ ಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪತ್ರಕರ್ತರುಆಗ್ರಹಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಮಾಧ್ಯಮ ಪ್ರತಿನಿಧಿಗಳು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಪ್ರತಕರ್ತರ ರಕ್ಷಣೆಗೆ ಹಾಗೂ ಹಲ್ಲೆ ಕೋರರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಬದ್ಧವಾಗಿದೆ. ಅಲ್ಲದೆ, ನಕಲಿ ಪತ್ರಕರ್ತರ ವಿರುದ್ಧ ಕಠಿಣ ಕ್ರಮ ಜರುಗಿಸುವ ನಿಟ್ಟಿನಲ್ಲಿ ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

    ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಕಾರ್ಯಾಧ್ಯಕ್ಷ ಕುಂತಿನಾಥ ಕಲಮನಿ, ಸುರೇಶ ನೇರ್ಲಿ, ಮಂಜುನಾಥ ಕೋಳಿಗುಡ್ಡ, ಜಿತೇಂದ್ರ ಕಾಂಬಳೆ, ಅರುಣ ಯಳ್ಳೂರಕರ್, ರವಿರಾಜ್, ಅನಿಲ ಕಾಜಗಾರ, ರಾಜಶೇಖರಯ್ಯ ಹಿರೇಮಠ, ಜಗದೀಶ ವಿರಕ್ತಮಠ, ಸುನೀಲ ಪಾಟೀಲ, ಹಿರಮಾಣಿ ಕಂಗ್ರಾಳಕರ, ವಿಜಯ ಮೋಹಿತೆ, ಚಂದ್ರಕಾಂತ ಸುಗಂಧಿ, ಮಹಾಂತೇಶ ಕುರಬೇಟ, ಶ್ರೀಧರ ಕೋಟಾರಗಸ್ತಿ, ಅಡಿವೇಶ ಪಾಟೀಲ, ಸುನೀಲ ಗಾವಡೆ, ಸುಬಾನಿ ಮುಲ್ಲಾ, ವಿಶ್ವನಾಥ ದೇಸಾಯಿ, ಅಶೋಕ ಮಗದುಮ್ಮ ಇದ್ದರು.

    ನಕಲಿ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಿ

    ಜಿಲ್ಲೆಯಲ್ಲಿ ಈಚೆಗೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚುತ್ತಿದೆ. ಮಾಧ್ಯಮ ಪಟ್ಟಿಯಲ್ಲಿ ಸುದ್ದಿ ಸಂಸ್ಥೆಯ ಹೆಸರು ಇಲ್ಲದಿರುವ ಅನೇಕ ಪತ್ರಿಕೆ ಹೆಸರು ಹಾಗೂ ವೆಬ್ ಚಾನಲ್, ಸೈಟ್ ಹೆಸರಿನಲ್ಲಿ ಅಧಿಕಾರಿಗಳಿಗೆ ಹಾಗೂ ಜನರಿಗೆ ವಂಚನೆ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಇದರಿಂದಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಮುಜುಗರ ಅನುಭವಿಸುವಂತಾಗಿದೆ. ಹೀಗಾಗಿ ಮಾಧ್ಯಮ ಪಟ್ಟಿಯಲ್ಲಿರುವ ಸುದ್ದಿ ಸಂಸ್ಥೆಗಳ ಪ್ರತಿನಿಧಿಗಳನ್ನು ಹೊರತುಪಡಿಸಿ, ನಕಲಿ ಪತ್ರಕರ್ತರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts