More

    ಕಾರ್ಮಿಕರ ಫುಡ್‌ಕಿಟ್‌ನಲ್ಲಿ ರಾಜಕೀಯ; ಕಾರ್ಮಿಕರ ಬೆವರಹನಿ ಸೆಸ್ ನಿಧಿ ಬಳಕೆ ; ಶಾಸಕರ ಹೆಸರಲ್ಲಿ ವಿತರಣೆಗೆ ಆಕ್ಷೇಪ 

    ತುಮಕೂರು : ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ವಿತರಿಸುವ ಕಾರ್ಯವು ರಾಜಕೀಯ ಹಸ್ತಕ್ಷೇಪದಿಂದ ವಿಳಂಬವಾಗಿದೆ. ಶಾಸಕರ ಸಮ್ಮುಖದಲ್ಲಿ ಕಿಟ್ ಹಂಚುವುದಕ್ಕೆ ಕಾರ್ಮಿಕ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು ಕಾರ್ಮಿಕರ ಬೆವರಹನಿ ಭಾಗದ ಸೆಸ್ ಸಂಗ್ರಹದಲ್ಲಿ ನೀಡಲಾಗುವ ಆಹಾರ ಕಿಟ್‌ಗೆ ರಾಜಕೀಯ ಹಂಗು ಬೇಡವೆಂಬ ವಾದ ಕಾರ್ಮಿಕರದ್ದಾಗಿದೆ.

    ಕರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಿಂದಾಗಿ ಕಳೆದೆರಡು ತಿಂಗಳಿನಿಂದ ಸಂಕಷ್ಟಕ್ಕೆ ಸಿಲುಕಿದ್ದ ಅಸಂಘಟಿತ ವಲಯದ ಕಾರ್ಮಿಕರ ನೆರವಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆ ಈಗ ಧಾವಿಸಿದೆ. ಕೆಲಸವಿಲ್ಲದೆ ತೀವ್ರ ತೊಂದರೆಗೆ ಸಿಲುಕಿದ್ದ ಕಾರ್ಮಿಕರಿಗೆ ಫುಡ್ ಕಿಟ್ ವಿತರಿಸುವ ಮನಸನ್ನೂ ಇಲಾಖೆ ಈಗ ಮಾಡಿದೆ. 60 ಸಾವಿರ ಕಿಟ್: ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ 60 ಸಾವಿರ ಆಹಾರ ಕಿಟ್ ಅನ್ನು ಕಾರ್ಮಿಕ ಇಲಾಖೆ ವಿತರಿಸಲಿದೆ.

    ಕಟ್ಟಡ ಕಾರ್ಮಿಕರಿಂದ ಸಂಗ್ರಹಿಸಿರುವ ಶೇ.1 ಸೆಸ್‌ನಲ್ಲಿ ಫುಡ್‌ಕಿಟ್ ಅನ್ನು ಕಾರ್ಮಿಕರಿಗೆ ಹಂಚಲಾಗುತ್ತಿದೆ. ಇದರಲ್ಲಿ ಸರ್ಕಾರದ ನಯಾಪೈಸೆ ನೆರವಿಲ್ಲ. ಹಾಗಾಗಿ, ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನೈಜ ಕಾರ್ಮಿಕರಿಗೆ ಕಿಟ್ ಹಂಚಿಸಬೇಕೆಂಬ ಪ್ರಬಲ ಕೂಗು ಎದ್ದಿದೆ. ಎಐಟಿಸಿಯು, ಸಿಐಟಿಯು ಹಾಗೂ ಐಎನ್‌ಟಿಯುಸಿ ಕಾರ್ಮಿಕ ಸಂಘಟನೆಗಳು ಕಿಟ್ ವಿತರಣೆಯಲ್ಲಿ ಶಾಸಕರು ಕೈಯಾಡಿಸುವುದಕ್ಕೆ ಅಪಸ್ವರ ಎತ್ತಿದ್ದಾರೆ.

    11 ವಿಧಾನಸಭಾ ಕ್ಷೇತ್ರಗಳಲ್ಲಿ 62184 ಕಟ್ಟಡ ಕಾರ್ಮಿಕರು ಸೇವಾಸಿಂಧು ಪೋರ್ಟಲ್‌ನಲ್ಲಿ ಹೆಸರು ನಮೂದಿಸಿದ್ದು ಪ್ರತೀ ಕ್ಷೇತ್ರಕ್ಕೆ ತಲಾ 5 ಸಾವಿರ ಕಿಟ್‌ಗಳನ್ನು ಜಿಲ್ಲೆಯಲ್ಲಿ ಹಂಚಲು ಜಿಲ್ಲಾ ಕಾರ್ಮಿಕ ಇಲಾಖೆ ಕ್ರಮಕೈಗೊಂಡಿದೆ. ಆದರೆ, ತಾವೇ ಕಿಟ್ ಹಂಚುತ್ತೇವೆಂಬ ಶಾಸಕರ ಒತ್ತಡದಿಂದ ಇಲಾಖೆ ಈಗ ಸಂದಿಗ್ಧತೆಗೆ ಸಿಲುಕಿದೆ. ಇತ್ತಕಡೆ ಕಾರ್ಮಿಕ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಹಾಗಾಗಿ, ಫುಡ್ ಕಿಟ್ ವಿತರಣೆ ವಿಳಂಬವಾಗಿದೆ. 2-3 ದಿನಗಳಿಂದ ವಿಧಾನಸಭಾ ಕ್ಷೇತ್ರಗಳಿಗೆ ಇಲಾಖೆ ಅಧಿಕಾರಿಗಳೇ ತೆರಳಿ ಶಾಸಕರ ನೇತೃತ್ವದಲ್ಲೇ ಫುಡ್‌ಕಿಟ್ ಹಂಚುತ್ತಿದ್ದು ಕಾರ್ಮಿಕ ಸಂಘಟನೆಗಳನ್ನು ತಣ್ಣಗಾಗಿಸಲು 400-500 ಕಿಟ್‌ಗಳನ್ನು ನೀಡಿ ತಮ್ಮ ಮೂಲಕ ಹಂಚಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ.

    ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸದೇ ಸರ್ಕಾರ ಹಾಗೂ ಆಡಳಿತ ಪಕ್ಷದ ಶಾಸಕರ ಅಣತಿಯಂತೆ ಕಾರ್ಮಿಕ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂಬುದು ಕಾರ್ಮಿಕ ಮುಖಂಡರ ಗುರುತರ ಆರೋಪವಾಗಿದೆ. ಇನ್ನಾದರೂ ಗುಣಮಟ್ಟದ ಕಿಟ್‌ಗಳನ್ನು ನೈಜ ಕಾರ್ಮಿಕರಿಗೆ ತಲುಪಿಸುವ ಕೆಲಸ ಆಗಬೇಕಿದೆ.

    ಕಾರ್ಮಿಕ ಇಲಾಖೆಯಿಂದ ತುಮಕೂರು ನಗರಕ್ಕೆ ಸರಬರಾಜು ಆದ ದಿನಸಿ ಕಿಟ್‌ಗಳು ಏನಾದವು ಹಾಗೂ ಯಾರ ಪಾಲಾದವು? ನಗರಕ್ಕೆ ಒಟ್ಟು 3 ಲೋಡ್‌ಗಳಷ್ಟು ದಿನಸಿ ಕಿಟ್‌ಗಳು ಬಂದಿವೆ. ಆದರೆ, ನಿಜವಾದ ಫಲಾನುಭವಿಗಳನ್ನು ತಲುಪಿಲ್ಲ. ರಾಜಕೀಯ ಪ್ರಭಾವ ಬಳಸಿ ಬೇರೆ ರೀತಿಯಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಕಾರ್ಮಿಕ ಇಲಾಖೆ ಇದರ ಹೊಣೆ ಹೊರಬೇಕಿದೆ.
    ಇಮ್ರಾನ್ ಪಾಷಾ ಸಾಮಾಜಿಕ ಹೋರಾಟಗಾರ, ತುಮಕೂರು

    ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗೂ ಶಾಸಕರಿಗೂ ಏನು ಸಂಬಂಧ. ಕಾರ್ಮಿಕರ ಬೆವರಹನಿಯ ಶೇ.1ರ ಸೆಸ್‌ನಲ್ಲಿ ಫುಡ್ ಕಿಟ್ ನೀಡಲಾಗುತ್ತಿದ್ದು, ಇದರಲ್ಲಿ ಶಾಸಕರ ಮಧ್ಯ ಪ್ರವೇಶ ನಿಲ್ಲಿಸಬೇಕು. ಸಂಟನೆ ಮೂಲಕವೇ ಫುಡ್‌ಕಿಟ್ ವಿತರಿಸಬೇಕು. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಬೇಕಿಲ್ಲ. ಮೊದಲನೇ ಅಲೆಯ ಅವಧಿಯಲ್ಲಿ ೋಷಿಸಿರುವ ಪರಿಹಾರ ಶ್ರೀ ನೀಡಬೇಕು, ಎರಡನೇ ಅಲೆ ಪರಿಹಾರ ನೀಡಲು ಕಾರ್ಯಪ್ರವೃತ್ತರಾಗಬೇಕು.
    ಗಿರೀಶ್, ಜಿಲ್ಲಾ ಕಾರ್ಯದರ್ಶಿ, ಸಿಪಿಐ

    ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 5 ಸಾವಿರ ಫುಡ್ ಕಿಟ್‌ಗಳಂತೆ 55 ಸಾವಿರಕ್ಕೂ ಹೆಚ್ಚು ಕಿಟ್‌ಗಳನ್ನು ಕಾರ್ಮಿಕ ಇಲಾಖೆ ವತಿಯಿಂದ ವಿತರಿಸಲು ಕ್ರಮವಹಿಸಲಾಗಿದೆ. ಸೇವಾಸಿಂಧುವಿನಲ್ಲಿ ನೊಂದಾಯಿಸಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಆಯಾ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಇಲಾಖೆ ಅಧಿಕಾರಿಗಳು ಹಂಚಲಿದ್ದಾರೆ.
    ಸುಭಾಷ್ ಎಂ ಆಲದಕಟ್ಟೆ, ಜಿಲ್ಲಾ ಕಾರ್ಮಿಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts