More

    ಹಸಿದ ಚಾಲಕರಿಗೆ ಸೇವಾ ಭಾರತಿ ತುತ್ತು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಹ್ವಾಯ್ ಊಟ ತೆಕ್ಕಾಣಿ.. ನೀರಿನ ಬಾಟ್ಲಿ ತೆಕ್ಕಾಬನ್ನಿ.. ಹೆದ್ರಿಕಂಬೂದ್ ಬ್ಯಾಡ್ದೆ. ಊಟ ಕೊಡೂಕೆ ಅಡ್ಹಾಕಿತು.. ತೆಕ್ಕಾಣಿ ಉಣಿ, ಆ ಬದಿಯಿಂದ ಎರಡು ಲಾರೀ ಬತ್ತೀತು.. ಊಟ ಕೊಡಿನೀ ಮಾರ‌್ರೇ..

    ತೆಕ್ಕಟ್ಟೆ ಹಾಗೂ ಕೋಟೇಶ್ವರ ಬೈಪಾಸ್ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕೇಳಿ ಬರುತ್ತಿರುವ ಸೇವಾ ಭಾರತಿ ಸ್ವಯಂಸೇವಕ ಯುವಕರ ಮಾತಿನ ವರಸೆ ಇದು.
    ಕರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಾಕ್‌ಡೌನ್ ಆದೇಶದ ನಂತರ ಕೋಟೇಶ್ವರ ಸೇವಾಭಾರತಿ ತಂಡ ಫಲಾಪೇಕ್ಷೆ ಇಲ್ಲದೆ ಪ್ರತಿದಿನ 350ರಷ್ಟು ಊಟ ವಾಹನ ಚಾಲಕರಿಗೆ ಉಚಿತವಾಗಿ ನೀಡುತ್ತಿದೆ. ಊಟ ಸಿದ್ಧಪಡಿಸುವುದರಿಂದ ಹಿಡಿದು ಪ್ಯಾಕ್ ಮಾಡಿ ಹೈವೇಯಲ್ಲಿ ನಿಂತು ಊಟಾ… ಅಂತ ಕೂಗಿ ಲಾರಿ ನಿಲ್ಲಿಸಿ, ಸೌಜನ್ಯದಿಂದ ವಿಚಾರಿಸಿ ಅನ್ನ ನೀಡುವ ಮೂಲಕ ‘ಸೇವೆ ಅಂದರೆ ಇದು’ ಎನ್ನುವುದನ್ನು ರುಜುವಾತು ಮಾಡಿದ್ದಾರೆ.

    ಕರೊನಾ ನಿಯಂತ್ರಿಸುವ ಪ್ರಯತ್ನದಲ್ಲಿ ಸರ್ಕಾರದ ಜತೆಗೆ ಸಂಕಷ್ಟ ಕಾಲದಲ್ಲಿ ಬದುಕಲು ಅವಶ್ಯಕವಾದ ಆಹಾರ ಕೊರತೆಯಿಂದ ಯಾರೂ ಸಂಕಿಷ್ಟ ಪಡಬಾರದು ಎನ್ನುವುದೇ ಸೇವಾ ಭಾರತಿ ಉದ್ದೇಶ. ಒಂದಿಷ್ಟು ಯುವಕರು ಮತ್ತು ಮಧ್ಯ ವಯಸ್ಕರು ಸೇವಾಭಾರತಿ ತಂಡ ಕಟ್ಟಿಕೊಂಡು ಕಳೆದ 16 ದಿನದಿಂದ ಬೆಳಗ್ಗೆ 11ರಿಂದ ಮಧ್ಯಾಹ್ನ ಊಟ ಖಾಲಿಯಾಗುವ ತನಕ ದಾಸೋಹ ನಡೆಯುತ್ತದೆ. ರಾಷ್ಟ್ರಿಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಚಾಲಕರಿಗಷ್ಟೇ ಅಲ್ಲದೆ ಪ್ರಯಾಣಿಕರಿಗೆ, ಆಹಾರ ವಂಚಿತರಿಗೆ, ನಿರಾಶ್ರಿತರಿಗೆ, ನಿರ್ಗತಿಕರಿಗೆ ಊಟ, ನೀರು ನೀಡಲಾಗುತ್ತಿದೆ. ಕೋಟೇಶ್ವರ ಹಾಗೂ ತೆಕ್ಕಟ್ಟೆಯಲ್ಲಿ 2 ತಂಡಗಳಾಗಿ ಕಾರ್ಯ ನಿರ್ವಹಿಸಲಾಗುತ್ತದೆ.

    ಶಿಸ್ತುಬದ್ಧವಾಗಿ ನಡೆಯುತ್ತಿದೆ ಸೇವಾ ಕಾರ್ಯ: ಸೇವಾ ಭಾರತಿಯ 30ರಷ್ಟು ಯುವಕರು ಊಟದ ವ್ಯವಸ್ಥೆ ಹಿಂದೆ ಇದ್ದಾರೆ. ಎರಡು ತಂಡವಾಗಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ತೆಕ್ಕಟ್ಟೆ ನವಶಕ್ತಿ ಸಭಾಭವನ ಮತ್ತು ಕೋಟೇಶ್ವರ ಸತ್ಯನಾರಾಯಣ ಮಂಜರ ಮನೆಯಲ್ಲಿ ಊಟ ಸಿದ್ಧವಾಗಿ ಅಲ್ಲೇ ಪ್ಯಾಕ್ ಮಾಡಿ ವಿತರಣೆ ಸ್ಥಳ ತಲುಪುತ್ತದೆ. ವಿತರಣೆ ಕರೊನಾ ನಿಯಮದಂತೆ ನಡೆಯುತ್ತಿದ್ದು, ಹತ್ತು ಜನಕ್ಕೆ ಹೆಚ್ಚಿನ ಸದಸ್ಯರು ಇರೋದಿಲ್ಲ. ಪ್ರತಿದಿನ ಆಹಾರ ವಿತರಣೆ ಸದಸ್ಯರು ಬದಲಾಗುತ್ತಾರೆ. ಮೆನು ಕೂಡ ಬದಲಾಗುತ್ತಿರುತ್ತದೆ. ಪ್ರತಿದಿನ ಊಟಕ್ಕಾಗಿ 8,750 ರೂ. ಖರ್ಚಾಗುತ್ತಿದೆ. ನೀರಿನ ಖರ್ಚು ಬೇರೆ. ಈವರೆಗೆ ದಾನಿಗಳ ಸಹಕಾರದಲ್ಲಿ ಊಟಕ್ಕೆ ಖರ್ಚು ಮಾಡಿದ ಮೊತ್ತ 1,40,000 ರೂ. ಊಟ ಕೂಡ ಶುದ್ಧ ದೇಸಿ ಪದ್ಧತಿಯಲ್ಲಿರುತ್ತದೆ.

    ತಂಡದ ಸದಸ್ಯರು ಏನಂತಾರೆ..?: ಪಲಾವ್, ಚಿತ್ರಾನ್ನ, ಪುಳಿಯೋಗರೆ, ರೈಸ್‌ಬಾತ್, ಮೊಸರನ್ನ.. ಹೀಗೆ ಮೆನು ಬದಲಾಗುತ್ತಿದೆ. ಪ್ರತಿ ಪ್ಯಾಕ್‌ನಲ್ಲೂ ಒಂದು ಬನ್ ಇರುತ್ತದೆ. ನೀರಿನ ಬಾಟಲಿ ಕೊಡಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ತೆಕ್ಕಟ್ಟೆಯಲ್ಲಿ ಊಟ ವಿತರಣೆ ಅರಂಭಿಸಿ, ಅಲ್ಲಿ ಊಟ ಖಾಲಿ ಆದ ನಂತರ ಕೋಟೇಶ್ವರ ಬೈಪಾಸ್ ಬಳಿ ವಿತರಣೆ ಆರಂಭಿಸುತ್ತೇವೆ. ತೆಕ್ಕಟ್ಟೆಯಲ್ಲಿ ಪ್ರತಿದಿನ ನೂರಕ್ಕೂ ಮಿಕ್ಕಿ ಊಟ ವಿತರಣೆಯಾದರೆ, ಕೋಟೇಶ್ವರ ಬೈಪಾಸ್ ಬಳಿ 300ರಷ್ಟು ಊಟ ಕೊಡುತ್ತಿದ್ದೇವೆ. ಇದು ಲಾಕ್‌ಡೌನ್ ಮುಗಿದ ನಂತರ ವಾಹನ ಚಾಲಕರಿಗೆ ಸರಿಯಾಗಿ ಊಟ ಸಿಗುವ ತನಕ ಮುಂದುವರಿಯಲಿದೆ ಎನ್ನುತ್ತಾರೆ ಸೇವಾ ಆಭರತಿ ಸದಸ್ಯರು.

    ಸೇವಾ ಕಾರ್ಯ ಹಲವು: ಸೇವಾ ಭಾರತಿ 9 ಪ್ರಾಥಮಿಕ ಕೇಂದ್ರಗಳಲ್ಲಿ ಲಸಿಕೆ ವಿತರಣೆ, ಶವ ಸಂಸ್ಕಾರ, ಚಿಕಿತ್ಸೆ ಹೀಗೆ ಹಲವು ಸೇವಾ ಕಾರ್ಯಗಳಲ್ಲಿ ಬೇರೆ ಬೇರೆ ತಂಡ ತೊಡಗಿಸಿಕೊಂಡಿವೆ. ಹೋಮ್ ಕ್ವಾರಂಟೈನ್‌ನಲ್ಲಿದ್ದು, ಮನೆಯಿಂದ ಹೊರ ಬರಲಾಗವರಿಗೂ ಊಟ ಕೊಡುತ್ತಿದ್ದೇವೆ. ಹಣ ಕೊಟ್ಟರೆ ಪಡೆಯುತ್ತಿದ್ದು, ಬಡವರಿಗೆ ಉಚಿತ ಊಟ ನೀಡುತ್ತೇವೆ. ಈ ಎಲ್ಲ ಕಾರ‌್ಯ ದಾನಿಗಳ ಸಹಕಾರದಲ್ಲಿ ನಡೆಯುತ್ತಿದೆ ಎಂದು ಸೇವಾ ಭಾರತಿ ಸದಸ್ಯರು ವಿಜಯವಾಣಿಗೆ ತಿಳಿಸಿದ್ದಾರೆ. ಅಗತ್ಯವುಳ್ಳವರು ಸೇವಾ ಭಾರತಿಯ 98447 83053 ಮೊಬೈಲ್ ಸಂಖ್ಯೆ ಸಂಪರ್ಕ ಮಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts