More

    ಮೂಲಸೌಕರ್ಯಕ್ಕೆ ಜನಾಗ್ರಹ

    ಸಂತೋಷ ವೈದ್ಯ ಹುಬ್ಬಳ್ಳಿ
    ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಮಹಾನಗರ ಪಾಲಿಕೆ ಚುನಾವಣೆಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಮುಖ ಪಕ್ಷಗಳ ಚಿಹ್ನೆಯಡಿ ಸ್ಪರ್ಧಿಸಲು ತೀವ್ರ ಪೈಪೋಟಿ ಕಾಣಿಸಿಕೊಂಡಿದೆ.
    ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ಈ ಬಾರಿ ಆಮ್ ಆದ್ಮಿ ಪಕ್ಷ, ಬಿಎಸ್​ಪಿ ಹಾಗೂ ಎಐಎಂಐಎಂ ಪಕ್ಷಗಳು ಚುನಾವಣೆ ಕಣವನ್ನು ಹಿಗ್ಗಿಸಿವೆ. 2013ರ ಬಳಿಕ ಹು-ಧಾ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುತ್ತಿದೆ. ಕಳೆದ 29 ತಿಂಗಳುಗಳಿಂದ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವೇ ಇರಲಿಲ್ಲ. ಈಗ ಜನಪ್ರತಿನಿಧಿಗಳ ಆಯ್ಕೆಗೆ ವೇದಿಕೆ ಸಜ್ಜಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಆಯ್ಕೆಯಾದರೆ ತಮ್ಮ ಪ್ರದೇಶದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರೂ ಇದ್ದಾರೆ.
    ಆಮ್ ಆದ್ಮಿ ಪಕ್ಷ ಹೊರತು ಪಡಿಸಿ ಉಳಿದ ಯಾವ ಪಕ್ಷಗಳು ಮಂಗಳವಾರದವರೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್-ಬಿಜೆಪಿ ಮುಖಂಡರು ಟಿಕೆಟ್ ಹಂಚಿಕೆಗೆ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಆಕಾಂಕ್ಷಿಗಳು ಟಿಕೆಟ್​ಗಾಗಿ ಬೆವರು ಹರಿಸುತ್ತಿದ್ದಾರೆ.
    ವಾರ್ಡ್ ನಂ. 31ರಲ್ಲಿ ಕಾಂಗ್ರೆಸ್ಸಿನಿಂದ ಶಂಕರ ಮಾದರ, ಬಿಜೆಪಿಯಿಂದ ಹನುಮಂತಪ್ಪ ಹರಿವಾಣ, ಬಿಎಸ್​ಪಿಯಿಂದ ಪ್ರೇಮನಾಥ ಚಿಕ್ಕತುಂಬಳ ಆಕಾಂಕ್ಷಿಗಳಾಗಿದ್ದಾರೆ. 32ನೇ ವಾರ್ಡ್​ನಿಂದ ಮಾಜಿ ಕಾಪೋರೇಟರ್ ಸತೀಶ ಹಾನಗಲ್ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್ಸಿನಿಂದ ರವಿ ವಿಜಯಪುರ, ಆಮ್ ಆದ್ಮಿ ಪಕ್ಷದಿಂದ ಕುಮಾರ ನೂಲ್ವಿ ಹಾಗೂ ರಮೇಶ ಬಾಕಳೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. 33ನೇ ವಾರ್ಡ್​ನಲ್ಲಿ ಕಾಂಗ್ರೆಸ್ಸಿನಲ್ಲಿಯೇ ಟಿಕೆಟ್​ಗಾಗಿ ಜಿದ್ದಾಜಿದ್ದಿನ ಪೈಪೋಟಿ ಕಾಣಿಸಿಕೊಂಡಿದೆ. ಮಾಜಿ ಕಾಪೋರೇಟರ್ ದೀಪಾ ಗೌರಿ ಹಾಗೂ ಹು-ಧಾ ಮಹಾನಗರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್ ಎಲಿಗಾರ ಮುಂಚೂಣಿಯಲ್ಲಿದ್ದಾರೆ. ಬಿಜೆಪಿಯಿಂದ ಮುರುಗೇಶ ಹೊರಡಿ ಹಾಗೂ ಮಹೇಶ ಚಂದರಗಿ ಹೆಸರು ಚಾಲ್ತಿಯಲ್ಲಿದೆ. ಜೆಡಿಎಸ್​ನಿಂದ ರಮೇಶ ಕಾತುನವರ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
    ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿರುವ ವಾರ್ಡ್ 34ರಿಂದ ಸ್ಪರ್ಧಿಸಲು ಕಸ್ತೂರಿ ಮುರಗೋಡ ಎಂಬುವವರಿಗೆ ಆಮ್ ಆದ್ಮಿ ಪಕ್ಷ ಟಿಕೆಟ್ ನೀಡಿದೆ. ಇಲ್ಲಿ ಬಿಜೆಪಿಯಿಂದ ಪೂಜಾ ಪಾಠಕ್ ಹಾಗೂ ಕಾಂಗ್ರೆಸ್ಸಿನಿಂದ ಸಾರಾ ಫಾರೂಕ್ ಅಬ್ಬೂನವರ ಟಿಕೆಟ್ ಕೇಳಿದ್ದಾರೆ.
    ಹೆಚ್ಚುವರಿಯಾಗಿ ಸೃಷ್ಟಿಯಾಗಿರುವ ವಾರ್ಡ್ ನಂ. 35ರಲ್ಲಿ ಬಿಜೆಪಿಯಿಂದ ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ರಾಮಚಂದ್ರ ಹೊಸಗಲ್, ಕಾಂಗ್ರೆಸ್​ನಿಂದ ವೀರಣ್ಣ ನೀರಲಗಿ, ಬಸವರಾಜ ಬೆಲ್ಲದ (ಮಾಯಕಾರ), ಮಂಜುನಾಥ ಗುಂಡಪ್ಪನವರ (ಬಾರಕೇರ), ಜೆಡಿಎಸ್​ನಿಂದ ಲಕ್ಷ್ಮಣ ರೋಕಾ ಟಿಕೆಟ್ ಕೇಳಿದ್ದಾರೆ. 2013ರಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡಿದ್ದ ಗುಂಡೂರ ಅವರು ಜೆಡಿಎಸ್​ನ ರಾಜಣ್ಣ ಕೊರವಿ ಎದುರು ಸೋತಿದ್ದರು. ಈ ಬಾರಿ ರಾಜಣ್ಣ ಕೊರವಿ 36ನೇ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತ. ಕಾಂಗ್ರೆಸ್ಸಿನಿಂದ ಆಸೀಫ್ ಟಿ. ಎಂಬುವವರು ಟಿಕೆಟ್ ಕೇಳಿದ್ದಾರೆ. ಮಲ್ಲಿಕಾರ್ಜುನಯ್ಯ ಹಿರೇಮಠ ಎಂಬುವವರಿಗೆ ಆಪ್ ಟಿಕೆಟ್ ಘೊಷಣೆಯಾಗಿದೆ. ವಾರ್ಡ್ ನಂ. 37ರಲ್ಲಿ ಮಾಜಿ ಕಾಪೋರೇಟರ್ ಉಮೇಶಗೌಡ ಕೌಜಗೇರಿ ಅವರಿಗೆ ಬಿಜೆಪಿ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ. ಕಾಂಗ್ರೆಸ್​ನಲ್ಲಿ ರಫೀಕ್ ದೊಡಮನಿ ಹಾಗೂ ಗಂಗಾಧರ ದೊಡವಾಡ ಅವರ ಹೆಸರು ಕೇಳಿಬಂದಿದೆ. ತಾರಿಹಾಳ, ಗೋಕುಲ ರಸ್ತೆಯ ಗಾಂಧಿನಗರ, ಭೈರಿದೇವರ ಕೊಪ್ಪ , ಉಣಕಲ್, ಲಿಂಗರಾಜ ನಗರ ಮೊದಲಾದ ಪ್ರಮುಖ ಪ್ರದೇಶಗಳನ್ನು ಈ ವಾರ್ಡ್​ಗಳು ಒಳಗೊಂಡಿವೆ.
    ಸಮಸ್ಯೆಗಳು ಕಂಡಿಲ್ಲ ಪರಿಹಾರ: ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 31ರಿಂದ 37ರವರೆಗಿನ ಹಲವು ಬಡಾವಣೆಗಳು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಸ್ಮಾರ್ಟ್ ಸಿಟಿ ಹಾಗೂ ಸಿಆರ್​ಎಫ್ ಅನುದಾನದಲ್ಲಿ ರಸ್ತೆ, ಗಟಾರ ಸೇರಿದಂತೆ ವಿವಿಧ ಸೌಕರ್ಯಗಳು ನಿರ್ವಣಗೊಂಡರೂ ಕೆಲವು ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ. 31ರ ವ್ಯಾಪ್ತಿಯ ತಾರಿಹಾಳ, ವಾಜಪೇಯಿ ನಗರ ನಿವಾಸಿಗಳು ಇಂದಿಗೂ ಶೌಚಕ್ಕೆ ಬಯಲು ಪ್ರದೇಶವನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇದೆ. ವಾಜಪೇಯಿನಗರ, ಜಗದೀಶನಗರ ಆಶ್ರಯ ಬಡಾವಣೆಗಳ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಗಳ ಸ್ಥಿತಿ ಅಯೋಮಯ. ಸುಮಾರು 20 ವರ್ಷಗಳಿಂದ ವಾಸಿಸುತ್ತಿದ್ದರೂ ಆಶ್ರಯ ನಿವಾಸಿಗಳ ಮೂಲ ಫಲಾನುಭವಿಗಳ ಹೆಸರಿಗೆ ಮನೆ ನೋಂದಣಿಯಾಗಿಲ್ಲ. ಹುಬ್ಬಳ್ಳಿ ನಗರದ ಕಟ್ಟಕಡೆಯ ವಾರ್ಡ್ ಇದು. ಹೇಳಿಕೊಳ್ಳಲು ವಿಮಾನ ನಿಲ್ದಾಣ, ಇನ್ಪೋಸಿಸ್, ದೇಶಪಾಂಡೆ ಫೌಂಡೇಷನ್ ದೊಡ್ಡ ದೊಡ್ಡ ಸಂಸ್ಥೆಗಳಿವೆ. ಜಗದೀಶ ನಗರ ಆಶ್ರಯ ಬಡಾವಣೆಯಲ್ಲಿ ರಸ್ತೆ, ಬೀದಿ ದಿಪದ ವ್ಯವಸ್ಥೆ ಇಲ್ಲ. 14 ವರ್ಷಗಳ ಬಳಿಕ ಒಳಚರಂಡಿ ಕೊಳವೆ ಮಾರ್ಗ ಅಳವಡಿಸಿದರೂ ಅದಿನ್ನೂ ಪೂರ್ಣಗೊಂಡಿಲ್ಲ. ವಾರ್ಡ್ ಸಂಖ್ಯೆ 35ರ ವ್ಯಾಪ್ತಿಯ ಭೈರಿದೇವರಕೊಪ್ಪದ ರೇಣುಕಾನಗರದಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ವಣಗೊಂಡರೂ ಗಟಾರ್ ವ್ಯವಸ್ಥೆ ಇಲ್ಲ. ಭೈರಿದೇವರಕೊಪ್ಪದಿಂದ ಸಂಗೊಳ್ಳಿ ರಾಯಣ್ಣನಗರಕ್ಕೆ ಹೋಗುವ ರಸ್ತೆಯಲ್ಲಿ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಮಾರ್ಗದ ಸುತ್ತಮುತ್ತಲಿನ ಬಡಾವಣೆಗಳ ಒಳಚರಂಡಿ ನೀರು ತೆರೆದ ಕಚ್ಚಾ ಗಟಾರದಲ್ಲಿ ನದಿಯಂತೆ ಹರಿಯುತ್ತದೆ.

    ಗೋಕುಲ ರಸ್ತೆ ಜಗದೀಶನಗರ ಆಶ್ರಯ ಬಡಾವಣೆಯಲ್ಲಿ ಕಳೆದ 14 ವರ್ಷಗಳಲ್ಲಿ ಒಳಚರಂಡಿ ಕೊಳವೆ ಮಾರ್ಗ ಕಾಮಗಾರಿ ನಡೆಸಿದ್ದು ಬಿಟ್ಟು ಬೇರೆ ಏನೂ ಕೆಲಸವಾಗಿಲ್ಲ. ಅದನ್ನು ಸಹ ಪೂರ್ಣಗೊಳಿಸಿಲ್ಲ.
    | ವೆಂಕಟೇಶ ದೇಸಾಯಿ ನಾಗರಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts