More

    ಇಂದು ಪುಣೆಯಲ್ಲಿ ಭಾರತ-ಇಂಗ್ಲೆಂಡ್ ಮೊದಲ ಏಕದಿನ ಹಣಾಹಣಿ

    ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಮತ್ತು ಟಿ20 ಸರಣಿಗಳಲ್ಲಿ ಆರಂಭಿಕ ಹಿನ್ನಡೆ ಕಂಡರೂ ದಿಟ್ಟ ತಿರುಗೇಟು ನೀಡುವ ಮೂಲಕ ಬೀಗಿರುವ ಭಾರತ ತಂಡ, ಏಕದಿನ ಸರಣಿಯಲ್ಲಾದರೂ ಆರಂಭದಿಂದಲೇ ಮೇಲುಗೈ ಸಾಧಿಸುವ ಹಂಬಲದಲ್ಲಿದೆ. ಭಾರತ-ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮಂಗಳವಾರದಿಂದ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಪಿಎಲ್ 14ನೇ ಆವೃತ್ತಿಗೆ ಮುನ್ನ ಟೀಮ್ ಇಂಡಿಯಾ ಆಡುತ್ತಿರುವ ಕೊನೆಯ ಸರಣಿ ಇದಾಗಿದ್ದು, ಕಳೆದ 5 ತಿಂಗಳ ಬಿಡುವಿಲ್ಲದ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗೆ ಗೆಲುವಿನ ವಿರಾಮ ಹಾಕುವ ಗುರಿಯಲ್ಲಿದೆ.

    ಇಂಗ್ಲೆಂಡ್ ತಂಡ ಏಕದಿನ ವಿಶ್ವಕಪ್ ಚಾಂಪಿಯನ್ ತಂಡವಾಗಿರುವುದರಿಂದ ಭಾರತಕ್ಕೆ ಕಳೆದೆರಡು ಕ್ರಿಕೆಟ್ ಪ್ರಕಾರಗಳಿಗಿಂತ ತಲಾ 50 ಓವರ್‌ಗಳ ಈ ಸರಣಿಯಲ್ಲೇ ಅತ್ಯಂತ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರುವ ದೃಷ್ಟಿಯಿಂದ ಟೆಸ್ಟ್ ಸರಣಿ ಪ್ರಮುಖವಾಗಿದ್ದರೆ, ಟಿ20 ವಿಶ್ವಕಪ್ ಸಿದ್ಧತೆಯ ದೃಷ್ಟಿಯಿಂದ ಚುಟುಕು ಕ್ರಿಕೆಟ್ ಸರಣಿ ಮಹತ್ವದ್ದಾಗಿತ್ತು. ಏಕದಿನ ಸರಣಿ 2023ರ ಏಕದಿನ ವಿಶ್ವಕಪ್ ಅರ್ಹತಾ ಮಾನದಂಡವಾಗಿರುವ ಐಸಿಸಿ ಸೂಪರ್ ಲೀಗ್‌ನ ಭಾಗವಾಗಿದ್ದರೂ, ಆತಿಥೇಯ ತಂಡವಾಗಿ ಭಾರತ ಈಗಾಗಲೆ ಅರ್ಹತೆ ಪಡೆದಿರುವುದರಿಂದ ಈ ಸರಣಿಯ ಲಿತಾಂಶ ಹೆಚ್ಚಿನ ಪರಿಣಾಮ ಬೀರದು. ಅಲ್ಲದೆ, ಐಪಿಎಲ್ ಹತ್ತಿರವಾಗುತ್ತಿರುವುದರಿಂದ ಭಾರತೀಯ ಆಟಗಾರರ ಗಮನ ಅದರತ್ತಲೇ ಹೆಚ್ಚು ತಿರುಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

    ಇದನ್ನೂ ಓದಿ: ಆರತಕ್ಷತೆ ಚಿತ್ರದಿಂದಾಗಿ ಕೆಂಗಣ್ಣಿಗೆ ಗುರಿಯಾದ ಜಸ್‌ಪ್ರೀತ್ ಬುಮ್ರಾ!

    ಕರೊನಾ ವೈರಸ್ ಹಾವಳಿಯಿಂದಾಗಿ ಸರಣಿಯ ಎಲ್ಲ ಪಂದ್ಯಗಳಿಗೆ ಈಗಾಗಲೆ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿದ್ದು, ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಉಭಯ ತಂಡಗಳು ಕೊನೇ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದು, 1-2ರಿಂದ ಸೋಲು ಕಂಡಿವೆ. ಈ ಬಾರಿ ಒಂದು ತಂಡಕ್ಕೆ ಗೆಲುವಿನ ಹಾದಿಗೆ ಮರಳುವ ಅವಕಾಶ ಸಿಗಲಿದೆ.

    ಧವನ್ ಪಾಲಿಗೆ ನಿರ್ಣಾಯಕ ಸರಣಿ
    ಅಹಮದಾಬಾದ್‌ನಲ್ಲಿ ಆಡಿದ ಮೊದಲ ಟಿ20 ಪಂದ್ಯದಲ್ಲಿ ವೈಫಲ್ಯ ಕಂಡ ಬಳಿಕ ಸರಣಿಯ ಇತರ ಪಂದ್ಯಗಳಿಂದ ಹೊರಬಿದ್ದಿದ್ದ ಎಡಗೈ ಆರಂಭಿಕ ಶಿಖರ್ ಧವನ್‌ಗೆ ಏಕದಿನ ಕ್ರಿಕೆಟ್‌ನಲ್ಲಾದರೂ ಸಾಮರ್ಥ್ಯ ನಿರೂಪಿಸಲು ಇದು ನಿರ್ಣಾಯಕ ಸರಣಿಯಾಗಿದೆ. 35 ವರ್ಷದ ಧವನ್ ಈ ಬಾರಿ ಮಿಂಚದಿದ್ದರೆ ಭಾರತ ತಂಡದಿಂದಲೇ ಹೊರಬೀಳುವ ಅಪಾಯದಲ್ಲಿದ್ದಾರೆ. ಯಾಕೆಂದರೆ ಶುಭಮಾನ್ ಗಿಲ್, ಪೃಥ್ವಿ ಷಾ ಮತ್ತು ಕನ್ನಡಿಗ ದೇವದತ್ ಪಡಿಕಲ್ ಅವರಂಥ ಯುವ ಆರಂಭಿಕರು ನಿಕಟ ಪೈಪೋಟಿ ಒಡ್ಡುತ್ತಿದ್ದಾರೆ. ರೋಹಿತ್ ಶರ್ಮ ಜತೆಗೆ ಅನುಭವಿ ಬ್ಯಾಟ್ಸ್‌ಮನ್ ಧವನ್ ಅವರೇ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ನಾಯಕ ಕೊಹ್ಲಿ ಪಂದ್ಯಕ್ಕೆ ಮುನ್ನಾದಿನವೇ ಖಚಿತಪಡಿಸಿದ್ದಾರೆ. ಇದರಲ್ಲಿ ಯಾವ ರೀತಿಯ ನಿರ್ವಹಣೆ ತೋರುವರು ಎಂಬುದರ ಮೇಲೆ ಧವನ್ ಭವಿಷ್ಯ ಅಡಗಿದೆ.

    ಕೆಎಲ್ ರಾಹುಲ್ ಪಾತ್ರ ಬದಲಾವಣೆ?
    ಟಿ20 ಸರಣಿಯಲ್ಲಿ ಸಿಕ್ಕ 4 ಅವಕಾಶಗಳನ್ನು ಕೈಚೆಲ್ಲಿ ಅಂತಿಮ ಪಂದ್ಯದ ವೇಳೆ ತಂಡದಿಂದಲೇ ಹೊರಬಿದ್ದಿದ್ದರೂ ಕನ್ನಡಿಗ ಕೆಎಲ್ ರಾಹುಲ್‌ಗೆ ಏಕದಿನ ತಂಡದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆ. ಇತ್ತೀಚೆಗಿನ ಕೆಲ ಏಕದಿನ ಸರಣಿಗಳಲ್ಲಿ ರಾಹುಲ್ ಅವರೇ ವಿಕೆಟ್ ಕೀಪರ್ ಆಗಿದ್ದರು. ಆದರೆ ಇದೀಗ ರಿಷಭ್ ಪಂತ್ ಸೀಮಿತ ಓವರ್ ತಂಡದಲ್ಲೂ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ. ಇದರ ನಡುವೆಯೂ ರಾಹುಲ್ ಮಧ್ಯಮ ಸರದಿಯ ಆಟಗಾರರಾಗಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ 6ನೇ ಬೌಲಿಂಗ್ ಆಯ್ಕೆ ಬೇಕೆನಿಸಿದರೆ ಕೃನಾಲ್ ಪಾಂಡ್ಯ ಅಥವಾ ವಾಷಿಂಗ್ಟನ್ ಸುಂದರ್ ಅವಕಾಶ ಪಡೆಯಬಹುದು. ಮಧ್ಯಮ ಸರದಿಯ ಮತ್ತೋರ್ವ ಬ್ಯಾಟ್ಸ್‌ಮನ್ ಸ್ಥಾನಕ್ಕೆ ಮುಂಬೈ ಬ್ಯಾಟ್ಸ್‌ಮನ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು ಟಿ20 ಸರಣಿಯಲ್ಲಿ ಮಿಂಚಿದ ಸೂರ್ಯಕುಮಾರ್ ಯಾದವ್ ನಡುವೆ ಸ್ಪರ್ಧೆ ಇದೆ.

    ಪ್ರಸಿದ್ಧಕೃಷ್ಣ ಪದಾರ್ಪಣೆ ನಿರೀಕ್ಷೆ
    ದೇಶೀಯ ಕ್ರಿಕೆಟ್‌ನಲ್ಲಿ ತೋರಿದ ಉತ್ತಮ ನಿರ್ವಹಣೆಯ ಬಲದಿಂದ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಕರೆ ಪಡೆದಿರುವ ಕನ್ನಡಿಗ ಪ್ರಸಿದ್ಧಕೃಷ್ಣ, ಏಕದಿನ ಸರಣಿಯಲ್ಲಿ ಪದಾರ್ಪಣೆ ಅವಕಾಶ ಪಡೆಯುವ ನಿರೀಕ್ಷೆ ಇದೆ. ನಾಯಕ ವಿರಾಟ್ ಕೊಹ್ಲಿ ಅವರ ಗಮನ ಸೆಳೆದಿರುವ ಯುವ ವೇಗಿ ಪ್ರಸಿದ್ಧಕೃಷ್ಣ, ಕಳೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದರು.

    ಏಕದಿನ ಸರಣಿ ವೇಳಾಪಟ್ಟಿ
    ಪಂದ್ಯ, ದಿನಾಂಕ
    1, ಮಾರ್ಚ್ 23
    2, ಮಾರ್ಚ್ 26
    3, ಮಾರ್ಚ್. 28
    *ಆರಂಭ: ಮಧ್ಯಾಹ್ನ 1.30
    *ಎಲ್ಲಿ: ಎಂಸಿಎ ಕ್ರೀಡಾಂಗಣ, ಪುಣೆ
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    *ಮುಖಾಮುಖಿ: 100
    ಭಾರತ: 53
    ಇಂಗ್ಲೆಂಡ್: 42
    ಟೈ: 2
    ರದ್ದು: 3
    *ಭಾರತದಲ್ಲಿ: 48
    ಭಾರತ: 31
    ಇಂಗ್ಲೆಂಡ್: 16
    ಟೈ: 1
    *ಪುಣೆಯಲ್ಲಿ: 1
    ಭಾರತ: 1
    ಇಂಗ್ಲೆಂಡ್: 0

    ಭಾರತ:
    ಐಸಿಸಿ ರ‌್ಯಾಂಕ್: 2
    ಸಂಭಾವ್ಯ ತಂಡ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್/ಸೂರ್ಯಕುಮಾರ್, ರಿಷಭ್ ಪಂತ್ (ವಿ.ಕೀ), ಕೆಎಲ್ ರಾಹುಲ್/ಕೃನಾಲ್ ಪಾಂಡ್ಯ/ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್/ಪ್ರಸಿದ್ಧಕೃಷ್ಣ, ಯಜುವೇಂದ್ರ ಚಾಹಲ್/ಕುಲದೀಪ್, ಟಿ. ನಟರಾಜನ್.

    ಇಂಗ್ಲೆಂಡ್:
    ಐಸಿಸಿ ರ‌್ಯಾಂಕ್: 1
    ಸಂಭಾವ್ಯ ತಂಡ: ಜೇಸನ್ ರಾಯ್, ಜಾನಿ ಬೇರ್‌ಸ್ಟೋ, ಬೆನ್ ಸ್ಟೋಕ್ಸ್, ಇವೊಯಿನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್ (ವಿ.ಕೀ), ಸ್ಯಾಮ್ ಬಿಲ್ಲಿಂಗ್ಸ್, ಮೊಯಿನ್ ಅಲಿ/ಲಿವಿಂಗ್‌ಸ್ಟೋನ್, ಸ್ಯಾಮ್ ಕರ‌್ರನ್/ಟಾಮ್ ಕರ‌್ರನ್, ಆದಿಲ್ ರಶೀದ್, ರೀಸ್ ಟಾಪ್ಲೆ, ಮಾರ್ಕ್ ವುಡ್.

    ಆಂಗ್ಲರಿಗೆ ಪ್ರಮುಖರ ಗೈರಿನ ಹಿನ್ನಡೆ
    ಪ್ರವಾಸದಲ್ಲಿ ಒಂದು ಸರಣಿಯಲ್ಲಾದರೂ ಗೆಲ್ಲಬೇಕೆಂಬ ಛಲದಲ್ಲಿರುವ ಆಂಗ್ಲರಿಗೆ ಪ್ರಮುಖ ಆಟಗಾರರ ಗೈರಿನ ಹಿನ್ನಡೆ ಇದೆ. ಜೋ ರೂಟ್ ಮತ್ತು ಕ್ರಿಸ್ ವೋಕ್ಸ್‌ಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದರೆ, ಜೋಫ್ರಾ ಆರ್ಚರ್ ಗಾಯದಿಂದಾಗಿ ತವರಿಗೆ ಮರಳಿದ್ದಾರೆ. 2019ರ ಏಕದಿನ ವಿಶ್ವಕಪ್ ಬಳಿಕ ಮೊದಲ ಏಕದಿನ ಪಂದ್ಯ ಆಡಲಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್ ಒನ್‌ಡೌನ್ ಬ್ಯಾಟ್ಸ್‌ಮನ್ ಆಗಿ ಬಡ್ತಿ ಪಡೆಯುವ ನಿರೀಕ್ಷೆ ಇದ್ದು, ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ಏಕದಿನ ಪದಾರ್ಪಣೆಯ ಅವಕಾಶವೂ ಸಿಗಬಹುದು. ಸ್ಯಾಮ್ ಬಿಲ್ಲಿಂಗ್ಸ್‌ಗೆ ಪ್ರವಾಸದ ಮೊದಲ ಪಂದ್ಯ ಆಡುವ ಅವಕಾಶ ಸಿಗಬಹುದು.

    ನಂ. 1 ಪಟ್ಟಕ್ಕೆ ಫೈಟ್​
    ಟಿ20ಯಂತೆ ಏಕದಿನ ಸರಣಿಯೂ ಐಸಿಸಿ ರ‌್ಯಾಂಕಿಂಗ್‌ನ ಅಗ್ರ 2 ತಂಡಗಳ ನಡುವಿನ ಸಮರವಾಗಿದೆ. ಸದ್ಯ ಇಂಗ್ಲೆಂಡ್ 123 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 117 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಭಾರತ 3-0 ಕ್ಲೀನ್‌ಸ್ವೀಪ್ ಸಾಧಿಸಿದರೆ, 3 ಅಂಕ ಕಲೆಹಾಕಿ ಅಗ್ರಸ್ಥಾನಕ್ಕೇರಲಿದ್ದು, ಇಂಗ್ಲೆಂಡ್ 4 ಅಂಕ ನಷ್ಟದೊಂದಿಗೆ 2ನೇ ಸ್ಥಾನಕ್ಕಿಳಿಯಲಿದೆ. ಆದರೆ ಭಾರತ ಸರಣಿಯಲ್ಲಿ ಒಂದು ಪಂದ್ಯ ಸೋತರೂ 2ನೇ ಸ್ಥಾನದಲ್ಲೇ ಉಳಿಯಲಿದೆ. ಭಾರತ ಸರಣಿ ಸೋತರೆ 3ನೇ ಸ್ಥಾನಕ್ಕಿಳಿಯಲಿದ್ದು, ನ್ಯೂಜಿಲೆಂಡ್ 2ನೇ ಸ್ಥಾನಕ್ಕೇರಲಿದೆ.

    *222: ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸದೆ 1 ವರ್ಷ, 222 ದಿನಗಳು ಕಳೆದಿವೆ. 2019ರ ಮಾರ್ಚ್‌ನಲ್ಲಿ ರಾಂಚಿಯಲ್ಲಿ ಆಸೀಸ್ ವಿರುದ್ಧ ಅವರ ಕೊನೇ ಏಕದಿನ ಶತಕ ಸಿಡಿದಿತ್ತು.

    *20: ವಿರಾಟ್ ಕೊಹ್ಲಿ ಇನ್ನೊಂದು ಶತಕ ಸಿಡಿಸಿದರೆ, ತವರಿನಲ್ಲಿ ಅತ್ಯಧಿಕ ಶತಕ ಸಿಡಿಸಿದ ಸಚಿನ್ ತೆಂಡುಲ್ಕರ್ (20) ದಾಖಲೆ ಸರಿಗಟ್ಟಲಿದ್ದಾರೆ.

    *42: ಕೊಹ್ಲಿ ಇನ್ನೊಂದು ಶತಕ ಸಿಡಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ಶತಕ ಸಿಡಿಸಿದ ನಾಯಕ ಎನಿಸಲಿದ್ದಾರೆ. ಸದ್ಯ ಅವರು ರಿಕಿ ಪಾಂಟಿಂಗ್ (41) ಜತೆ ಗೌರವ ಹಂಚಿಕೊಂಡಿದ್ದಾರೆ.

    ಪಿಚ್ ರಿಪೋರ್ಟ್
    ಎಂಸಿಎ ಕ್ರೀಡಾಂಗಣದ ಪಿಚ್ ಸಾಂಪ್ರದಾಯಿಕವಾಗಿ ಬ್ಯಾಟಿಂಗ್ ಸ್ನೇಹಿ. ಇಲ್ಲಿ ಇದುವರೆಗೆ ನಡೆದಿರುವ 4 ಏಕದಿನಗಳ ಪೈಕಿ 3ರಲ್ಲಿ 300 ಪ್ಲಸ್ ರನ್ ದಾಖಲಾಗಿದೆ. 2017ರಲ್ಲಿ ಉಭಯ ತಂಡಗಳು ಇಲ್ಲಿ ಮುಖಾಮುಖಿಯಾದಾಗ ಇಂಗ್ಲೆಂಡ್‌ನ 351 ರನ್ ಸವಾಲನ್ನು ಭಾರತ ತಂಡ ವಿರಾಟ್ ಕೊಹ್ಲಿ (122), ಕೇದಾರ್ ಜಾಧವ್ (120) ಶತಕದ ಬಲದಿಂದ ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದಿತ್ತು.

    ವೈಟ್‌ವಾಷ್ ಭೀತಿಯಲ್ಲಿ ಮಹಿಳೆಯರು
    ಲಖನೌ: ಏಕದಿನ ಸರಣಿಯ ಬಳಿಕ ಟಿ20 ಸರಣಿಯಲ್ಲೂ ಸೋಲು ಕಂಡಿರುವ ಭಾರತದ ಮಹಿಳಾ ಕ್ರಿಕೆಟ್ ತಂಡ ಇದೀಗ ವೈಟ್‌ವಾಷ್ ತಪ್ಪಿಸಿಕೊಳ್ಳುವ ಗುರಿಯಲ್ಲಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮಹಿಳಾ ಟಿ20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯ ಮಂಗಳವಾರ ನಡೆಯಲಿದ್ದು, ಭಾರತ ತಂಡ ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿದೆ. ಏಕದಿನ ಸರಣಿಯಲ್ಲಿ 1-4ರಿಂದ ಸೋತ ಭಾರತ ಮಹಿಳಾ ತಂಡ, ಟಿ20ಯಲ್ಲೂ ಬೌಲಿಂಗ್ ವಿಭಾಗದ ಕಳಪೆ ನಿರ್ವಹಣೆಯಿಂದಾಗಿ ಮುಗ್ಗರಿಸಿದೆ. ಪ್ರಮುಖವಾಗಿ ಸ್ಪಿನ್ನರ್‌ಗಳ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಫೀಲ್ಡಿಂಗ್ ವಿಭಾಗದ ಕೆಟ್ಟ ನಿರ್ವಹಣೆಯೂ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಬ್ಯಾಟುಗಾರ್ತಿಯರ ನಿರ್ವಹಣೆಯೂ ಸಾಧಾರಣವೆನಿಸಿದೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್ ಕೂಡ ಗಾಯದಿಂದಾಗಿ ಅಲಭ್ಯರಾಗಿದ್ದಾರೆ. ಅಂತಿಮ ಪಂದ್ಯದಲ್ಲಾದರೂ ಭಾರತೀಯರಿಂದ ಸುಧಾರಿತ ಆಟದ ನಿರೀಕ್ಷೆ ಇಡಲಾಗಿದೆ.
    *ಪಂದ್ಯ ಆರಂಭ: ರಾತ್ರಿ 7.00
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್2

    ಫೋಟೋಶೂಟ್​ನಲ್ಲಿ ಮಹಿಳಾ ಕ್ರಿಕೆಟರ್ ಜೂಲನ್​​ಗೆ ಅವಮಾನ ಮಾಡಿದರೇ ಬಾಲಿವುಡ್​ ನಟಿ ಅಹನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts