More

    ಶಿಕ್ಷಕರು, ಉಪನ್ಯಾಸಕರಾಗುವ ಕಡೆ ಗಮನ ನೀಡಿ

    ಚಿಕ್ಕಮಗಳೂರು: ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಆಗುತ್ತೇವೆ ಎನ್ನುವುದನ್ನು ಬಿಟ್ಟು ಶಿಕ್ಷಕರು, ಉಪನ್ಯಾಸಕರಾಗುವ ಕಡೆ ಗಮನಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ತಿಳಿಸಿದರು.
    ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಸಹ ಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ವಿದ್ಯಾರ್ಥಿಗಳೂ ತಾವು ದೊಡ್ಡ ಹುದ್ದೆಪಡೆಯುವ ಕನಸನ್ನು ಕಾಣುತ್ತಾರೆ. ಆದರೆ ಗುರುವಾಗಲು ಯಾರೂ ಒಪ್ಪುತ್ತಿಲ್ಲ. ಗುರುವಿಲ್ಲದೆ ದೊಡ್ಡ ಹುದ್ದೆ ಪಡೆಯುವುದು ಹೇಗೆ ಎಂದು ಪ್ರಶ್ನಿಸಿದರು.
    ಇಂದಿನ ಪೀಳಿಗೆ ಉಪನ್ಯಾಸಕ, ಶಿಕ್ಷಕರಾಗಲು ಮುಂದೆ ಬಾರದಿರುವುದರಿಂದ ಇಂದು ಭಾರತ ಮಾತ್ರವಲ್ಲ ಪ್ರಪಂಚವೇ ಶಿಕ್ಷಕರು, ಉಪನ್ಯಾಸಕರ ಕೊರತೆ ಎದುರಿಸುತ್ತಿದೆ. ಎಲ್ಲರೂ ಡಾಕ್ಟರ್, ಇಂಜಿನಿಯರ್, ಅಧಿಕಾರಿಗಳಾದರೆ ಮುಂದೆ ನಿಮ್ಮ ಮಕ್ಕಳಿಗೆ ವಿದ್ಯೆ ಹೇಳಿಕೊಡುವವರು ಯಾರು? ಶಿಕ್ಷಕರಿಲ್ಲದೆ ಮಕ್ಕಳು ವಿದ್ಯಾವಂತರಾಗದಿದ್ದರೆ ದೇಶದ ಭವಿಷ್ಯದ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.
    ಶಾಸಕ ಎಚ್.ಡಿ.ತಮ್ಮಯ್ಯ, ಮಕ್ಕಳಲ್ಲಿ ಹಣ ಮತ್ತು ವಿದ್ಯೆ ಇದ್ದರೆ ಸಾಲದು ಅವರಲ್ಲಿ ಉತ್ತಮ ಗುಣ, ಒಳ್ಳೆಯ ನಡತೆ ಮತ್ತು ಸಂಸ್ಕಾರವಿರಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ರಂಗಮಂದಿರ, ಶೌಚಗೃಹ ಸೇರಿದಂತೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಾಲೇಜು ಪ್ರಾಚಾರ್ಯ ಜಿ.ಬಿ.ವಿರೂಪಾಕ್ಷ ಮಾತನಾಡಿ, ಕಾಲೇಜಿಗೆ ಶೌಚಗೃಹ, ಮೈದಾನಕ್ಕೆ ಇಂಟರ್‌ಲಾಕ್, ಸ್ಮಾರ್ಟ್ ಕ್ಲಾಸ್ ಮತ್ತು ರಂಗಮಂದಿರ ನಿರ್ಮಾಣದ ಜತೆಗೆ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts