More

    ಹೂವು-ಹಣ್ಣು ಖರೀದಿ ಜೋರು

    ಹಾವೇರಿ: ಶ್ರಾವಣ ಮಾಸದಲ್ಲಿ ಆಚರಿಸುವ ವರಮಹಾಲಕ್ಷ್ಮೀ ಹಬ್ಬದ ಮುನ್ನಾದಿನ ಗುರುವಾರ ನಗರದ ಮಾರುಕಟ್ಟೆಯಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು.

    ಪಂಚಮಿ ಹಬ್ಬದ ಬಳಿಕ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮೀ ಹಬ್ಬಕ್ಕಾಗಿ ನಗರದ ಮಾರುಕಟ್ಟೆಯಲ್ಲಿ ಜನರು ಬಾಳೆಕಂಬ, ಹಣ್ಣುಗಳನ್ನು ಖರೀದಿದಲು ಮುಗಿಬಿದ್ದಿದ್ದರು. ಗುರುವಾರ ವಾರದ ಸಂತೆ ದಿನವಾದ್ದರಿಂದ ಪೂಜೆಗಾಗಿ ಅಗತ್ಯ ವಸ್ತುಗಳ ಖರೀದಿಯ ಜತೆಗೆ ವಾರದ ಸಂತೆಯಲ್ಲೂ ಜನ ಸೇರಿದ್ದರು. ಹೂವು, ಹಣ್ಣು, ಬಾಳೆಕಂಬ, ತರಕಾರಿ, ಸಿಹಿ ತಿಂಡಿಗಳು ಹಾಗೂ ಹೊಸ ಬಟ್ಟೆಗಳ ಖರೀದಿ ಜೋರಾಗಿತ್ತು. ಹಣ್ಣು, ಹೂವು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೂ, ಮಾರಾಟ ಭರ್ಜರಿಯಾಗಿ ನಡೆಯಿತು.

    ವರಮಹಾಲಕ್ಷ್ಮೀ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸೀರೆ ಸೇರಿದಂತೆ ಅಲಂಕಾರಿಕ ವಸ್ತುಗಳ ಅಂಗಡಿಯ ಎದುರು ಜನದಟ್ಟಣೆ ಎಂದಿಗಿಂತ ಹೆಚ್ಚಾಗಿತ್ತು.

    ದರವೂ ದುಬಾರಿ: ಸಾಮಾನ್ಯ ದಿನಗಳಿಗಿಂತ ವಸ್ತುಗಳ ಬೆಲೆ ಸ್ವಲ್ಪ ದುಬಾರಿಯಾಗಿತ್ತು. ಬಾಳೆ ಹಣ್ಣು ಡಜನ್​ಗೆ 40ರಿಂದ 60 ರೂ., ಸೇಬು ಕೆಜಿಗೆ 150ರಿಂದ 200 ರೂ., ಮೊಸಂಬಿ ಕೆಜಿಗೆ 100ರಿಂದ 120 ರೂ., ದಾಳಿಂಬೆ ಕೆಜಿಗೆ 150ರಿಂದ 160 ರೂ., ಕಿತ್ತಳೆ 200ರಿಂದ 220 ರೂ., ಚಿಕ್ಕುಹಣ್ಣು ಕೆಜಿಗೆ 80 ರೂ., ದ್ರಾಕ್ಷಿ ಕೆಜಿಗೆ 150 ರೂ., ಸೀತಾಫಲ ಕೆಜಿಗೆ 120 ರೂ. ಹಾಗೂ ಕೆಲವರು ಪೂಜೆಗೆ ಅವಶ್ಯವಾಗಿರುವ ಐದು ತರಹದ ಹಣ್ಣುಗಳಿಗೆ ಕೆಜಿಗೆ 150ರಿಂದ 180 ರೂ., ಗುಲಾಬಿ ಹೂ ಕೆಜಿಗೆ 150ರಿಂದ 200 ರೂ., ಸುಗಂಧರಾಜ ಹೂ ಕೆಜಿಗೆ 200ರಿಂದ 250 ರೂ., ಸೇವಂತಿ 180ರಿಂದ 200 ರೂ., ಕಾಕಡಾ ಮಲ್ಲಿಗೆ ಒಂದು ಮಾರಿಗೆ 60ರಿಂದ 80 ರೂ., ಚೆಂಡು ಹೂ ಕೆಜಿಗೆ 30ರಿಂದ 50 ರೂ., ಬಾಳೆಕಂಬ ಒಂದು ಜೊತೆಗೆ 40ರಿಂದ 80 ರೂ.ಗೆ ಮಾರಾಟವಾದವು. ಬೆಲೆ ಏರಿಕೆಯಾಗಿದ್ದರಿಂದ ಸಾರ್ವಜನಿಕರು ವ್ಯಾಪಾರಿಗಳೊಂದಿಗೆ ಚೌಕಾಸಿ ನಡೆಸಿ ಖರೀದಿಸುವ ದೃಶ್ಯ ಕಂಡು ಬಂತು.

    ವರ ಮಹಾಲಕ್ಷ್ಮೀ ಹಬ್ಬದ ಮುನ್ನಾದಿನವೇ ಜನರು ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಆಗಮಿಸಿದ್ದರಿಂದ ನಗರದ ಎಂ.ಜಿ. ರೋಡ್, ಎಲ್​ಬಿಎಸ್ ಮಾರುಕಟ್ಟೆಯಲ್ಲಿ ವಾಹನಗಳ ಸಂಚಾರ ಹೆಚ್ಚಳವಾಗಿತ್ತು. ಬಾಳೆಕಂಬಗಳನ್ನು ನಗರದ ಗಲ್ಲಿಗಲ್ಲಿಗಳಿಗೆ ಹೋಗಿ ಹಳ್ಳಿಯಿಂದ ಬಂದ ವ್ಯಾಪಾರಸ್ಥರು ಮಾರಾಟ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts