More

    ಘಟ್ಟದ ಮಳೆಯಿಂದ ಪ್ರವಾಹ ಭೀತಿ

    ಮಂಗಳೂರು/ಉಪ್ಪಿನಂಗಡಿ/ಸುಬ್ರಹ್ಮಣ್ಯ: ದ.ಕ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ ತಾಲೂಕು ವ್ಯಾಪ್ತಿಗೆ ಹೊಂದಿಕೊಂಡಂತಿರುವ ಘಟ್ಟ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ಪ್ರವಾಹ ಭೀತಿ ಮುಂದುವರಿದಿದೆ.

    ಧರ್ಮಸ್ಥಳದ ಸ್ನಾನಘಟ್ಟದ ಮೇಲ್ಭಾಗದವರೆಗೆ ನೀರು ಬಂದು ಮುಳುಗುವ ಭೀತಿ ಎದುರಾಗಿತ್ತಾದರೂ, ಬಳಿಕ ಪ್ರವಾಹ ಕಡಿಮೆಯಾಗಿದೆ. ಉಪ್ಪಿನಂಗಡಿ ಭಾಗದಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಪಾತ್ರದ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದು, ಕೃಷಿಭೂಮಿ ನೆರೆನೀರಿನಲ್ಲಿ ಸಿಲುಕಿದೆ.

    ಬುಧವಾರ ರಾತ್ರಿಯಿಂದ ನದಿಯಲ್ಲಿನ ನೀರಿನ ಹರಿವು ಏರುಗತಿಯಲ್ಲೇ ಇದ್ದು, ಗುರುವಾರ ಮಧ್ಯಾಹ್ನ ನಂತರ ಅಲ್ಪಪ್ರಮಾಣದ ಇಳಿಕೆ ಕಂಡುಬಂತು. ಗುರುವಾರ ಸಾಯಂಕಾಲ ನದಿ ನೀರಿನ ಮಟ್ಟ 28.5 ಮೀ. (ಅಪಾಯದ ಮಟ್ಟ 30 ಮೀ.) ಇತ್ತು. ಘಟ್ಟಪ್ರದೇಶದಲ್ಲಿ ಮಳೆ ಹೆಚ್ಚಾದರೆ ನದಿನೀರು ಅಪಾಯದ ಮಟ್ಟಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
    ಉಪ್ಪಿನಂಗಡಿಯ ಕೊಪ್ಪಳ ಎಂಬಲ್ಲಿ ನಾರಾಯಣ ಪೂಜಾರಿ ಅವರ ಮನೆಗೆ ತೆಂಗಿನಮರ ಬಿದ್ದು ಮನೆ ಹಾನಿಯಾಗಿದ್ದು, ಸುಶೀಲಾ ಎಂಬವರು ಗಾಯಗೊಂಡಿದ್ದಾರೆ.

    ಸ್ನಾನಘಟ್ಟ ಜಲಾವೃತ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ಸ್ನಾನಘಟ್ಟ ಐದು ದಿನಗಳಿಂದ ಸಂಪೂರ್ಣ ಜಲಾವೃತಗೊಂಡ ಸ್ಥಿತಿಯಲ್ಲಿ ಮುಂದುವರಿದಿದೆ. ಕುಮಾರಧಾರಾ ಹಳೆಯ ಸೇತುವೆ ಬುಧವಾರ ರಾತ್ರಿ ಮುಳುಗಡೆಯಾಯಿತು. ದರ್ಪಣ ತೀರ್ಥ ನದಿಯಲ್ಲಿಯೂ ಪ್ರವಾಹ ಅಧಿಕವಾಗಿ ಸುಬ್ರಹ್ಮಣ್ಯ- ಪುತ್ತೂರು ರಸ್ತೆಯ ದರ್ಪಣ ತೀರ್ಥ ಸೇತುವೆಯು ಅಪಾಯದ ಮಟ್ಟ ತಲುಪಿತು.

    ಇತರೆಡೆ ಮಳೆ ಕಡಿಮೆ: ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಇತರ ಭಾಗಗಳಲ್ಲಿ ಗುರುವಾರ ಮಳೆಯಬ್ಬರ ಸ್ವಲ್ಪ ಕಡಿಮೆಯಾಗಿದೆ. ಆದರೆ ಬಲವಾಗಿ ಬೀಸುವ ಗಾಳಿ ಜನರಲ್ಲಿ ಆತಂಕಕ್ಕೆ ತಳ್ಳುತ್ತಿದೆ. ಕರಾವಳಿಯಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ರೆಡ್ ಅಲರ್ಟ್, ಬಳಿಕ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
    ಗುರುವಾರ ಬೆಳಗ್ಗಿನಿಂದ ಸಾಯಂಕಾಲದವರೆಗೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲುವಿನಲ್ಲಿ 77.5 ಮತ್ತು ನಡ ಗ್ರಾಮದಲ್ಲಿ 65.5 ಮಿ.ಮೀ ಅತ್ಯಧಿಕ ಮಳೆ ಸುರಿದಿದೆ. ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬಂಟ್ವಾಳ 36.6, ಬೆಳ್ತಂಗಡಿ 78.4, ಮಂಗಳೂರು 23.1, ಪುತ್ತೂರು 66.5, ಸುಳ್ಯ 77.9 ಮಿ.ಮೀ. ಸಹಿತ ದ.ಕ ಜಿಲ್ಲೆಯಲ್ಲಿ 56.5 ಮಿ.ಮೀ. ಮಳೆಯಾಗಿದೆ.

    ಮುಂದುವರಿದ ಕಡಲಬ್ಬರ: ಸಮುದ್ರದಲ್ಲಿ ಗಾಳಿ ಅಬ್ಬರ ಹೆಚ್ಚಿರುವುದರಿಂದ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಗಂಟೆಗೆ 50-60 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುತ್ತಿದೆ. ಮಂಗಳೂರಿನ ಉಚ್ಚಿಲ ಬೆಟ್ಟಂಪಾಡಿ ರಸ್ತೆ ಅಲೆಗಳ ಹೊಡೆತಕ್ಕೆ ಸಿಲುಕಿ ಮತ್ತಷ್ಟು ಹಾನಿಯಾಗಿದೆ. ಸುಮಾರು 20 ಮನೆಗಳು, 10ಕ್ಕೂ ಅಧಿಕ ಗೆಸ್ಟ್‌ಹೌಸ್‌ಗಳು ಸಮುದ್ರ ಪಾಲಾಗುವ ಭೀತಿಯಲ್ಲಿವೆ. ತೀರ ಪ್ರದೇಶದಲ್ಲಿದ್ದ 20ಕ್ಕೂ ಅಧಿಕ ತೆಂಗಿನ ಮರಗಳು ಬುಡ ಸಹಿತ ಉರುಳಿ ಬಿದ್ದು ಸಮುದ್ರ ಪಾಲಾಗಿವೆ. ಕುಂದಾಪುರದ ಎಂ.ಕೋಡಿಯಲ್ಲಿ ವಿದ್ಯುತ್ ಕಂಬಗಳು ಸಮುದ್ರಪಾಲಾಗುವ ಭೀತಿಯಲ್ಲಿವೆ. ಕೋಡಿ ಸಂಪರ್ಕ ರಸ್ತೆ ಕೂಡ ಅಪಾಯಕ್ಕೆ ಸಿಲುಕಿದೆ.

    ಉಡುಪಿಯಲ್ಲಿ ಧಾರಾಕಾರ ಮಳೆ
    ಉಡುಪಿ: ಜಿಲ್ಲೆಯಾದ್ಯಂತ ಗುರುವಾರ ಧಾರಾಕಾರ ಮಳೆಯಾಗಿದೆ. ಉಡುಪಿ, ಕಾಪು, ಪಡುಬಿದ್ರಿ, ಕಾರ್ಕಳ, ಹಿರಿಯಡ್ಕ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕುಂದಾಪುರ, ಶಿರೂರಿನ ಕೆಲವು ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದವು. ಬಿರುಸಿನ ಗಾಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕುಂದಾಪುರ, ಬ್ರಹ್ಮಾವರ ತಾಲೂಕುಗಳಲ್ಲಿ ಗಾಳಿಗೆ ಹಲವು ಮನೆ, ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಅಪಾರ ಪ್ರಮಾಣದಲ್ಲಿ ಕೃಷಿಹಾನಿಯೂ ಸಂಭವಿಸಿದೆ. ಉಡುಪಿ ತಾಲೂಕಿನಲ್ಲಿ 37.66, ಕುಂದಾಪುರ 38.0, ಕಾರ್ಕಳ 74 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ ಮಳೆ 50 ಮಿ.ಮೀ. ದಾಖಲಾಗಿದೆ.

    ಶಿರಾಡಿ ಘಾಟ್‌ನಲ್ಲಿ ಸಂಚಾರ ಅಸ್ತವ್ಯಸ್ತ: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ಶಿರಾಡಿ ಘಾಟ್ ಪ್ರದೇಶದ ಮಾರ್ನಹಳ್ಳಿ ಎಂಬಲ್ಲಿ ಟ್ಯಾಂಕರ್ ಕೆಟ್ಟು ನಿಂತ ಪರಿಣಾಮ ಬುಧವಾರ ಮಧ್ಯರಾತ್ರಿ 1ರಿಂದ ವಾಹನ ಸಂಚಾರ ತಡೆ ಹಿಡಿಯಲ್ಪಟ್ಟಿತ್ತು. ಸುಮಾರು 4 ಗಂಟೆಗಳ ಬಳಿಕ ವಾಹನ ದುರಸ್ತಿಗೊಂಡು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

    ಬಿಸಿಲೆ ಘಾಟ್‌ನಲ್ಲಿ ಗುಡ್ಡ ಜರಿತ:  ಬಿಸಿಲೆ ಘಾಟ್‌ನಲ್ಲಿ ಕೆಲವು ಕಡೆ ಗುಡ್ಡ ಜರಿತ ಆರಂಭಗೊಂಡಿದ್ದು, ಗುರುವಾರ ಗಡಿ ಚೌಡಮ್ಮ ದೇವಳದ ಸಮೀಪ ರಸ್ತೆಗೆ ಮರ ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ತಡೆಯಾಯಿತು. ಅಲ್ಲಲ್ಲಿ ಗುಡ್ಡ ಜರಿದು ರಸ್ತೆಗೆ ಕಲ್ಲು ಮತ್ತು ಮಣ್ಣು ಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts