More

    ದುಬೈನಿಂದ ಮಂಗಳೂರಿಗೆ ಇಂದು ವಿಮಾನ

    ಮಂಗಳೂರು: ವಿದೇಶದಲ್ಲಿರುವ ಭಾರತೀಯರನ್ನು ಕರೆತರುವ ಮೊದಲ ವಿಮಾನ ಸಜ್ಜಾಗಿದ್ದು, ಮೇ 12 ರಂದು ರಾತ್ರಿ 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಎಂದು ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

    ಪಾಲಿಕೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು, ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಡಿಗೆ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು.

    ದುಬೈನಿಂದ ಬರುವ ವಿಮಾನದಲ್ಲಿ 177 ಪ್ರಯಾಣಿಕರಿದ್ದು , ಕ್ವಾರಂಕೈನ್‌ಗೆ 17 ಹೋಟೆಲ್ಗಳು ಹಾಗೂ 12 ಹಾಸ್ಟೆಲ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರನ್ನು ಸ್ವೀಕರಿಸುವಲ್ಲಿ, ಹೋಟೆಲ್ ಬುಕಿಂಗ್ ವ್ಯವಸ್ಥೆ, ವಾಹನ ವ್ಯವಸ್ಥೆ, ಹೋಟೆಲ್ ಕ್ವಾರಂಟೈನ್ ವ್ಯವಸ್ಥೆ ಪ್ರತಿಯೊಂದು ವಿಭಾಗಕ್ಕೂ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಧಿಕಾರಿಗಳು ಎಲ್ಲ ಕಡೆ ಭೇಟಿ ನೀಡಿ ಮಾಹಿತಿ ನೀಡಬೇಕು ಎಂದು ರಾಹುಲ್ ಸೂಚಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ, ಪಾಲಿಕೆ ಪರಿಸರ ಇಂಜಿನಿಯರ್ ಮಧು ಮನೋಹರ್ ಉಪಸ್ಥಿತರಿದ್ದರು.

    ಪ್ರಯಾಣಿಕರಲ್ಲಿ ಎರಡು ವರ್ಗ
    ಪ್ರಯಾಣಿಕರಲ್ಲಿ ಎ ಮತ್ತು ಬಿ ಎಂದು 2 ವಿಭಾಗ ಮಾಡಲಾಗುವುದು. ಕೆಮ್ಮು, ಜ್ವರ, ನೆಗಡಿ ಇರುವವರು ‘ಎ’ ವಿಭಾಗದ ಪ್ರಯಾಣಿಕರು. ಇವರಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಿ ಅಗತ್ಯ ಚಿಕಿತ್ಸೆ ನೀಡಲಾಗುವುದು. ಬಿ ವಿಭಾಗ ಎಂದರೆ ಯಾವುದೇ ರೋಗ ಲಕ್ಷಣ ಇಲ್ಲದವರು. ಅಂಥವರನ್ನು ಹೋಟೆಲ್/ಹಾಸ್ಟೆಲ್ ಕ್ವಾರೆಂಟೈನ್‌ನಲ್ಲಿ ಇರಿಸಲಾಗುವುದು. ವಿಮಾನ ನಿಲ್ದಾಣದಲ್ಲೇ ಹೋಟೆಲ್ಗಳನ್ನು ಗುರುತಿಸಲು ಏರ್‌ಪೋರ್ಟ್‌ನಲ್ಲೇ ಆನ್‌ಲೈನ್ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಪ್ರಯಾಣಿಕರು ಗುರುತಿಸಿರುವ ಹೋಟೆಲ್ಗಳಿಗೆ ತಲುಪಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ರಾಹುಲ್ ಶಿಂಧೆ ಹೇಳಿದರು.

    ವಿಮಾನ ನಿಲ್ದಾಣಕ್ಕೆ ಪ್ರವೇಶವಿಲ್ಲ
    ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈಯಿಂದ ಮೇ 12ರಂದು ವಿಮಾನ ಬರಲಿದೆ. ಇದರಲ್ಲಿ ಬರುವ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆ ನಡೆಸಿ ಬಳಿಕ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಜಿಲ್ಲಾಡಳಿತವೇ ವಾಹನದ ಮೂಲಕ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ಸಾರ್ವಜನಿಕರು ಹಾಗೂ ಪ್ರಯಾಣಿಕರ ಕುಟುಂಬಸ್ಥರಿಗೆ ವಿಮಾನ ನಿಲ್ದಾಣಕ್ಕೆ ಬರಲು ಅವಕಾಶ ಇಲ್ಲ. ಕ್ವಾರೆಂಟೈನ್ ಕೇಂದ್ರಗಳಿಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts