More

    ರಾಷ್ಟ್ರಧ್ವಜ ವಿಲೇವಾರಿಗೂ ಉಂಟು ಸಂಹಿತೆ; ಎಲ್ಲೆಂದರಲ್ಲಿ ಎಸೆಯುವುದು ಅಪರಾಧ

    ಕೇಶವಮೂತಿ೯ ವಿ.ಬಿ. ಹುಬ್ಬಳ್ಳಿ
    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ತ್ರಿವರ್ಣ ರಾಷ್ಟ್ರಧ್ವಜ ದೇಶದೆಲ್ಲೆಡೆ ರಾರಾಜಿಸಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ “ಹರ್​ ಘರ್ ​ ತಿರಂಗಾ’ ಅಭಿಯಾನದ ಕರೆಯ ಮೇರೆಗೆ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡಿದೆ. ಈ ನಡುವೆ ನಿಯಮಾನುಸಾರವಾಗಿ ರಾಷ್ಟ್ರಧ್ವಜ ಸಂರಕ್ಷಣೆ ಮತ್ತು ಹಾಳಾದ ಧ್ವಜ ವಿಲೇವಾರಿ ಮಾಡುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲೂ ಇದೆ.
    ರಾಷ್ಟ್ರಧ್ವಜ ಸಂಹಿತೆ 2002ರ ನಿಯಮದ ಪ್ರಕಾರ ಧ್ವಜಾರೋಹಣ ಮಾಡಲು ಹೇಗೆ ನಿಯಮಗಳು ಇವೆಯೋ, ಅದೇ ರೀತಿ ಧ್ವಜ ಸಂರಕ್ಷಣೆ ಮಾಡುವ ಮತ್ತು ಹಾಳಾಗಿರುವ ಧ್ವಜಗಳನ್ನು ವಿಲೇವಾರಿ ಮಾಡಲು ಧ್ವಜಸಂಹಿತೆ ಪ್ರಕಾರ ನಿಯಮಗಳಿವೆ. ಧ್ವಜ ಖಾದಿ ಅಥವಾ ಪಾಲಿಸ್ಟರ್​ ಬಟ್ಟೆಯದ್ದೇ ಆಗಿದ್ದರೂ ಅದನ್ನು ಧ್ವಜ ಸಂಹಿತೆ ಪ್ರಕಾರ ಅಶೋಕ ಚಕ್ರ ಮೇಲೆ ಬರುವಂತೆ ನೀಟಾಗಿ ಮಡಚಿ, ರೇಷ್ಮೆ ಸೀರೆಗಳನ್ನು ಹೇಗೆ ಸುರತವಾಗಿ ಇಡುತ್ತೇವೆಯೋ ಅದೇ ರೀತಿ ಅಲ್ಮೇರಾ ಅಥವಾ ಟ್ರಜರಿಯಲ್ಲಿ ಕಾಪಾಡಿ ಇಡಬೇಕು. ಧ್ವಜಗಳು ಯಾವುದೇ ಕಾರಣಲ್ಲೂ ಮಕ್ಕಳ ಕೈಗೆ ಸಿಗುವಂತೆ ಇಡಬಾರದು.
    ಹರಿದ, ಬಣ್ಣ ಮಾಸಿದ ಅಥವಾ ಹಾಳಾಗಿರುವ ಧ್ವಜಗಳನ್ನು ಎರಡು ರೀತಿಯಲ್ಲಿ ವಿಲೇವಾರಿ ಮಾಡಬಹುದಾಗಿದೆ. ಒಂದು ನಿಯಮಬದ್ಧವಾಗಿ ಮಣ್ಣಿನಲ್ಲಿ ಹೂಳಬೇಕು. ಇಲ್ಲವೇ ಸುಟ್ಟು ಹಾಕೇಬಕು. ಇದಕ್ಕೂ ಧ್ವಜ ಸಂಹಿತೆ ಪ್ರಕಾರ ನಿಯಮಾನುಸಾರವಾಗಿ ವಿಲೇವಾರಿ ಮಾಡಬೇಕಿದೆ.
    ಮಣ್ಣಿನಲ್ಲಿ ಹೂಳಬೇಕಾದರೆ ಗೆಜೆಟೆಡ್​ ಅಧಿಕಾರಿಯೊಬ್ಬರ ಸಮ್ಮುಖದಲ್ಲಿ ಜನ ಓಡಾಡದೇ ಇರುವ ಸ್ಥಳದಲ್ಲಿ ಗುಂಡಿ ತೋಡಿ ಮಣ್ಣಿನಲ್ಲಿ ಹೂತು ಹಾಕಬೇಕು. ನಂತರ “ಇಲ್ಲಿ ರಾಷ್ಟ್ರಧ್ವಜವನ್ನು ಹೂಳಲಾಗಿದೆ. ಇಲ್ಲಿ ಯಾರೂ ಓಡಾಡಬಾರದು’ ಎಂದು ಆ ಸ್ಥಳದಲ್ಲಿ ನಾಮಲಕ ಹಾಕಬೇಕು. ಮತ್ತೊಂದು ಪ್ರಕಾರ ಪೂಜೆ ಪುನಸ್ಕಾರ ನೆರವೇರಿಸಿ ಶ್ರೀಗಂಧದ ಕಟ್ಟಿಗೆಯಲ್ಲಿ ಧ್ವಜ ಸುಡಬಹುದು. ನಂತರ ಅದರ ಬೂದಿಯನ್ನು ಎಲ್ಲೆಂದರಲ್ಲಿ ಹಾಕದೇ ನದಿ, ಕೆರೆ, ಹಳ್ಳದಲ್ಲಿ ಗೌರವಯುತವಾಗಿ ವಿಸಜಿರ್ಸಬೇಕು ಎಂಬ ನಿಯಮವಿದೆ. ಇದು ಸಾಧ್ಯವಾಗದವರು ಮನೆಯಲ್ಲಿ ಸುರತವಾಗಿ ತೆಗೆದಿಡಬಹುದು.
    ಖಾದಿ ಗ್ರಾಮೋದ್ಯೋಗಕ್ಕೆ ಒಪ್ಪಿಸಬಹುದು
    ಧ್ವಜಸಂಹಿತೆ ಪ್ರಕಾರ ರಾಷ್ಟ್ರಧ್ವಜ ವಿಲೇವಾರಿ ಮಾಡಲು ಆಗದಿದ್ದವರು ಹುಬ್ಬಳ್ಳಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂದ ಕಚೇರಿಗೆ ತಂದು ಕೊಡಬಹುದು. ನಾವು ಅವುಗಳನ್ನು ನಿಯಮಾನುಸಾರ ವಿಲೇವಾರಿ ಮಾಡುತ್ತೇವೆ ಎನ್ನುತ್ತಾರೆ ಸಂದ ಕಾರ್ಯದಶಿರ್ ಶಿವಾನಂದ ಮಠಪತಿ.
    ಹಲವೆಡೆ ಇನ್ನೂ ಹಾರಾಡುತ್ತಿವೆ ಧ್ವಜ
    ಹರ್​ ಘರ್ ತಿರಂಗಾ ಅಭಿಯಾನದ ಅಂಗವಾಗಿ ಆ.13ರಿಂದ 15ರವರೆಗೆ ಮನೆ ಮನೆಗಳಲ್ಲಿ ತಿರಂಗಾ ಧ್ವಜಾರೋಹಣ ಮಾಡಲು ಕೇಂದ್ರ ಸರ್ಕಾರ ಕರೆ ನೀಡಿತ್ತು. ಆ ಪ್ರಕಾರ ಬಹುತೇಕ ಜನ ಮನೆ, ಅಂಗಡಿ, ಮಾಲ್​, ಕಾಂಪ್ಲೆಕ್ಸ್​ಗಳ ಮೇಲೆ ಆ.13ರಂದು ಧ್ವಜ ಹಾರಿಸಿದ್ದರು. ಆದರೆ, ಅಭಿಯಾನ ಮುಗಿದು ಮೂರು ದಿನ ಕಳೆದರೂ ಹಲವೆಡೆ ಈವರೆಗೆ ರಾಷ್ಟ್ರಧ್ವಜಗಳನ್ನು ಇಳಿಸಲಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಧ್ವಜ ಸಂಹಿತೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಈವರೆಗೆ ಧ್ವಜ ಹಾರಾಟ ಮಾಡಿರುವುದು ಅಪರಾಧವಲ್ಲ. ಹರ್​ ಘರ್ ತಿರಂಗಾ ಅಭಿಯಾನ ಈಗಾಗಲೇ ಮುಕ್ತಾಯವಾಗಿದ್ದು, ರಾಷ್ಟ್ರಧ್ವಜವನ್ನು ಎಲ್ಲರೂ ಕೆಳಗೆ ಇಳಿಸಿ ನೀಟಾಗಿ ಮಡಚಿ ಸುರತವಾಗಿ ಮನೆಯಲ್ಲೇ ಇಟ್ಟುಕೊಳ್ಳಬೇಕು. ಧ್ವಜದ ಗೌರವಕ್ಕೆ ದಕ್ಕೆ ಬಾರದಂತೆ ಕಾಪಾಡುವ ನಿಟ್ಟಿನಲ್ಲಿ ಈ ಬಗ್ಗೆ ಗಮನಿಸುವಂತೆ ಮಹಾನಗರ ಪಾಲಿಕೆ, ಗ್ರಾಮ ಪಂಚಾಯ್ತಿಗಳಿಗೆ ಸೂಚಿಸಲಾಗಿದೆ.

    ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts