More

    ಜುಲೈ 1ರಿಂದ ಹೊಸ ವೇತನ ಸಂಹಿತೆ ಜಾರಿ?; ಪ್ರಮುಖ ಐದು ಬದಲಾವಣೆ

    ನವದೆಹಲಿ: ಕೇಂದ್ರ ಸರ್ಕಾರ ಜುಲೈ 1ರಿಂದ ಹೊಸ ವೇತನ ಸಂಹಿತೆ ಜಾರಿಗೊಳಿಸುವ ಸಾಧ್ಯತೆ ಇದೆ. ವಾರದಲ್ಲಿ ನಾಲ್ಕೇ ದಿನ ಕೆಲಸ, ವೇತನ, ಕೆಲಸದ ಅವಧಿ, ಭವಿಷ್ಯ ನಿಧಿ (ಪಿಎಫ್), ಗ್ರಾಚ್ಯುಟಿ ಬದಲಾವಣೆಯಾಗಲಿದೆ. ಆದರೆ ಸರ್ಕಾರ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಹೊಸ ವೇತನ ಸಂಹಿತೆ 2021 ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿತ್ತು. ನಂತರ ಅಕ್ಟೋಬರ್​ನಿಂದ ಜಾರಿಗೆ ಬರುವ ಸಾಧ್ಯತೆ ಇತ್ತು. ಈಗ ಜುಲೈ1ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

    1. ನಿವ್ವಳ ವೇತನದಲ್ಲಿ ಕಡಿತ: ಹೊಸ ವೇತನ ಸಂಹಿತೆ 2019ರ ಅಡಿಯಲ್ಲಿ ಟೇಕ್ ಹೋಮ್ ಸಂಬಳದಲ್ಲಿ ಕಡಿತ ಇರಲಿದೆ. ವೇಜ್ ಕೋಡ್ ಆಕ್ಟ್ 2019ರ ಪ್ರಕಾರ ಉದ್ಯೋಗಿಯ ಮೂಲ ವೇತನವು ಕಂಪನಿಯ ವೆಚ್ಚದ (ಸಿಟಿಸಿ) ಶೇ. 50ಕ್ಕಿಂತ ಕಡಿಮೆ ಇರುವಂತಿಲ್ಲ. ಪ್ರಸ್ತುತ ಹಲವು ಕಂಪನಿಗಳು ಮೂಲ ವೇತನವನ್ನು ಕಡಿಮೆ ಮಾಡಿ ಹೆಚ್ಚಿನ ಭತ್ಯೆಗಳನ್ನು ನೀಡುತ್ತಿವೆ. ಇದರಿಂದ ಕಂಪನಿಯ ಹೊರೆ ಕಡಿಮೆಯಾಗಲಿದೆ.
    2. ಪಿಎಫ್ ಹೆಚ್ಚಳ: ಪಿಎಫ್ ಲೆಕ್ಕ ಹಾಕುವಾಗ ಮೂಲವೇತನದ ಶೇಕಡಾವಾರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಮೂಲವೇತನ ಹೆಚ್ಚಳದಿಂದ ಪಿಎಫ್ ಕೂಡ ಏರಿಕೆಯಾಗಲಿದೆ.
    3. ವಾರದಲ್ಲಿ ನಾಲ್ಕು ದಿನ ಕೆಲಸ: ಹೊಸ ಸಂಹಿತೆ ಜಾರಿಗೆ ಬಂದರೆ ಉದ್ಯೋಗಿಗಳು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲು ಅವಕಾಶ ಲಭಿಸುತ್ತದೆ. ಆಗ, ದಿನಕ್ಕೆ 12 ಗಂಟೆ ಕಾಲ ಕೆಲಸ ಮಾಡಬೇಕಾಗುತ್ತದೆ. ಅಂದರೆ ವಾರಕ್ಕೆ 48 ಗಂಟೆ ಕಾರ್ಯ ನಿರ್ವಹಿಸಬೇಕಾಗುತ್ತದೆ.
    4. ತೆರಿಗೆ ಹೊರೆ ಹೆಚ್ಚಳ: ಸದ್ಯ ಮೂಲ ವೇತನ, ಎಚ್​ಆರ್​ಎ, ಬೋನಸ್ ಸೇರಿದಂತೆ ಕೆಲವೊಂದನ್ನು ಹೊರತುಪಡಿಸಿದರೆ ಇತರೆ ಭತ್ಯೆಗಳು ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ಈಗ ಮೂಲ ವೇತನದಲ್ಲಿ ಏರಿಕೆಯಾದರೆ ಭತ್ಯೆಗಳು ತಗ್ಗುವ ಕಾರಣ ತೆರಿಗೆ ಕೂಡ ಹೆಚ್ಚಲಿವೆ.
    5. ಗಳಿಕೆ ರಜೆಯಲ್ಲಿ ಬದಲಾವಣೆ: ಪ್ರಸ್ತುತ ನಿಯಮದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಒಂದು ವರ್ಷಕ್ಕೆ 30 ಗಳಿಕೆ ರಜೆಗಳು ದೊರೆಯುತ್ತವೆ. ರಕ್ಷಣಾ ಉದ್ಯೋಗಿಗಳಿಗೆ ವರ್ಷಕ್ಕೆ 60 ರಜೆ ಸಿಗುತ್ತವೆ. ಈಗ ಈ ಹೊಸ ವೇತನ ಸಂಹಿತೆಯಿಂದ ಉದ್ಯೋಗಿಗಳು 300 ರಜೆಗಳನ್ನು ನಗದೀಕರಿಸಿಕೊಳ್ಳಬಹುದು.

    ಮುಂದಿನ ತಿಂಗಳಿನಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ

    ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಪರಿಸರ ಸಚಿವಾಲಯ, ಜುಲೈ1ರಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಿದೆ. ಏಕಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹ, ಮಾರಾಟ, ಬಳಕೆ, ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪರ್ಯಾಯ ವಸ್ತುಗಳನ್ನು ಬಳಸುವಂತೆ ಸೂಚಿಸಿದೆ. ಯಾರಾದರೂ ಏಕಬಳಕೆಯ ಪ್ಲಾಸ್ಟಿಕ್ ಮಾರಾಟ ಮಾಡಿದರೆ, ಬಳಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜತೆಗೆ ದಂಡ ವಿಧಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

    ಇಯರ್ ಬಡ್ಸ್, ಐಸ್ಕ್ರೀಮ್ ಸ್ಟಿಕ್ಸ್, ಥರ್ಮಕೋಲ್, ಪ್ಲಾಸ್ಟಿಕ್ ಪ್ಲೇಟ್ಸ್, ಕಪ್​ಗಳು, ಗ್ಲಾಸ್​ಗಳು, ಬಲೂನ್​ಗಳಿಗೆ ಬಳಸುವ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಸ್ಟಿಕ್ಸ್, ಚಮಚಗಳು, ಫೋರ್ಕ್ಸ್, ಚಾಕುಗಳು, ಸ್ಟ್ರಾ, ಟ್ರೇಗಳು, ಸ್ವೀಟ್ ಬಾಕ್ಸ್​ಗಳು, ಆಮಂತ್ರಣ ಪತ್ರಿಕೆಗಳು, ಸಿಗರೇಟ್ ಪ್ಯಾಕೆಟ್​ಗಳಿಗೆ ಪ್ಯಾಕಿಂಗ್ ಸುತ್ತುವುದು, 100 ಮೈಕ್ರಾನ್​ಗಳಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್​ಗಳನ್ನು ನಿಷೇಧಿಸಲಾಗಿದೆ. ಒಮ್ಮೆಗೆ ಸಂಪೂರ್ಣ ನಿಷೇಧ ಮಾಡುವ ಬದಲು ಇದನ್ನು ಹಂತ ಹಂತವಾಗಿ ಜಾರಿ ಮಾಡಬೇಕು ಎಂದು ಪ್ಲಾಸ್ಟಿಕ್ ಸಾಮಗ್ರಿಗಳ ತಯಾರಕರ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿದೆ.

    ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

    ಮುಂಬೈ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರ ಸಾರ್ವಕಾಲಿಕ ಪತನಕಂಡಿದ್ದು, 48 ಪೈಸೆಯಷ್ಟು ಕುಸಿಯುವ ಮೂಲಕ ಡಾಲರ್ ಎದುರು ಅದರ ಬೆಲೆ 78.85 ರೂಪಾಯಿ ಆಗಿದೆ. ಹೆಚ್ಚುತ್ತಿರುವ ವಿದೇಶಿ ಬಂಡವಾಳದ ಹೊರಹರಿವು ಮತ್ತು ಏರುತ್ತಿರುವ ಕಚ್ಚಾ ತೈಲ ಬೆಲೆ ಇದಕ್ಕೆ ಕಾರಣ ಗಳಾಗಿವೆ. ಅಮೆರಿಕದ ಫೆಡರಲ್ ಬ್ಯಾಂಕ್​ನ ಬಡ್ಡಿ ದರ ಏರಿಕೆಯ ಪರಿಣಾಮವನ್ನು ಜಾಗತಿಕ ಮಾರುಕಟ್ಟೆಗಳು ಮರು ಅಂದಾಜು ಮಾಡುತ್ತಿರುವ ಕಾರಣ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ ತಗ್ಗುತ್ತಿದೆ. ರೂ. ಮೌಲ್ಯ ಹೀಗೆ ಆಗುತ್ತಿದ್ದರೆ ವರ್ಷದಲ್ಲಿ ಡಾಲರ್​ಗೆ 81 ರೂ. ಮುಟ್ಟುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

    ವಿಪಿಎನ್ ಸೇವಾದಾರರು 3 ತಿಂಗಳು ನಿರಾಳ: ವರ್ಚುವಲ್ ಖಾಸಗಿ ನೆಟ್​ವರ್ಕ್ (ವಿಪಿಎನ್) ಸೇವಾದಾರರು ಹೊಸ ನಿಯಮಾವಳಿಗಳನ್ನು ಅನುಷ್ಠಾನಗೊಳಿ ಸುವ ಗಡುವನ್ನು ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ದಳ (ಸಿಇಆರ್​ಟಿ-ಇನ್) ಇನ್ನೂ 3 ತಿಂಗಳು ವಿಸ್ತರಿಸಿದೆ. ಈ ನಿಯಮಗಳ ಪ್ರಕಾರ, ವಿಪಿಎನ್ ಸೇವಾದಾರರು ಗ್ರಾಹಕರ ಹೆಸರು, ಇಮೇಲ್ ಐಡಿ, ಸಂಪರ್ಕ ಸಂಖ್ಯೆ, ಐಪಿ ವಿಳಾಸ ಮತ್ತಿತರ ವಿವರಗಳನ್ನು ಐದು ವರ್ಷ ಕಾಲ ಸಂಗ್ರಹಿಸಿಡಬೇಕು. ಸರ್ಕಾರ ಕೇಳಿದಾಗ ಆ ದತ್ತಾಂಶಗಳನ್ನು ಒದಗಿಸಬೇಕು. ಇದೀಗ ಈ ನಿರ್ದೇಶನ ಜೂನ್ 27ರ ಬದಲು ಸೆಪ್ಟೆಂಬರ್ 25ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಸಿಇಆರ್​ಟಿ-ಇನ್ ತಿಳಿಸಿದೆ. ಈ ವರ್ಷ ಏಪ್ರಿಲ್ 28ರಂದು ಹೊರಡಿಸಿದ್ದ ಸೈಬರ್ ಭದ್ರತಾ ನಿರ್ದೇಶನ ಗಳನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಸಾಮರ್ಥ್ಯ ವೃದ್ಧಿಗೆ ಹೆಚ್ಚು ಸಮಯಾವಕಾಶ ಬೇಕೆಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು (ಎಂಎಸ್​ಎಂಇ) ಕೋರಿಕೆ ಸಲ್ಲಿಸಿದ್ದ ಮೇರೆಗೆ ವಿಸ್ತರಣೆ ನೀಡಲಾಗಿದೆ ಎಂದು ಸಿಇಆರ್​ಟಿ-ಇನ್ ತಿಳಿಸಿದೆ.

    ಭಾರ್ತಿ ಏರ್​ಟೆಲ್​ಗೆ ಲಕ್ಷ ರೂ. ದಂಡ: ನಿಯಮಗಳನ್ನು ಉಲ್ಲಂಘಿಸಿದ ಭಾರ್ತಿ ಏರ್​ಟೆಲ್​ಗೆ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ನೌಕರರ ಸ್ಟಾಕ್ ಆಯ್ಕೆ ವಿಚಾರದಲ್ಲಿನ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಇಂಡಸ್ ಟವರ್ಸ್ ಪ್ರಕರಣ ಎಂದೇ ಖ್ಯಾತವಾಗಿದೆ.

    ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆಯಲ್ಲಿ ಆತಂಕ: ಜಗತ್ತಿನಾದ್ಯಂತ ಕ್ರಿಪ್ಟೊ ಕರೆನ್ಸಿ ಮಾರುಕಟ್ಟೆಗಳಲ್ಲಿ ಆತಂಕ ಮಡುಗಟ್ಟಿದೆ. ಕ್ರಿಪ್ಟೊದ ಅಸ್ತಿತ್ವಕ್ಕೇ ದೊಡ್ಡ ಅಪಾಯ ಎದುರಾಗಿರುವುದರಿಂದ ಹೂಡಿಕೆದಾರರು ಚಿಂತಿತರಾಗಿದ್ದಾರೆ. ಬಿಟ್​ಕಾಯಿನ್ ದಾಖಲೆಯ ಏರಿಕೆಯಿಂದ ಹೆಚ್ಚು ಕಡಿಮೆ ಶೇ. 70ರಷ್ಟು ಕುಸಿತ ಕಂಡಿದ್ದರಿಂದ ಆಲ್ಟ್ ಕಾಯಿನ್​ಗಳು ಕೂಡ ಕುಸಿತ ದಾಖಲಿಸಿವೆ.

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts