More

    ಮೈಸೂರಿನಲ್ಲಿ ಮತ್ತೆ ಫಿಟ್ನೆಸ್ ಮಂತ್ರ

    ಮೈಸೂರು: ಕರೊನಾ ವೈರಸ್ ತೀವ್ರವಾಗಿ ಹರಡುವ ಭೀತಿಯಿಂದ ಬಂದ್ ಆಗಿದ್ದ ನಗರದ ಉದ್ಯಾನಗಳು ಹಾಗೂ ಆಟದ ಮೈದಾನಗಳು ಎರಡು ತಿಂಗಳ ನಂತರ ಪುನರಾರಂಭಗೊಂಡಿದ್ದು, ಬುಧವಾರ ಜನರು ಉತ್ಸಾಹದಿಂದ ವಾಯುವಿಹಾರದಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂತು.

    ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ ಕೆರೆ ಹಾಗೂ ಮಾನಸಗಂಗೋತ್ರಿ ಬೆಳಗ್ಗೆ ವಾಯುವಿಹಾರಿಗಳಿಗೆ ಮುಕ್ತಗೊಂಡಿರಲಿಲ್ಲ. ಆದರೆ, ಸಂಜೆ ಕುಕ್ಕರಹಳ್ಳಿ ಕೆರೆಯಲ್ಲಿ ವಾಯುವಿಹಾರಕ್ಕೆ ಅವಕಾಶ ಮಾಡಿಕೊಡಲಾಯಿತಾದರೂ ಮಾನಸಗಂಗೋತ್ರಿಯಲ್ಲಿ ನಿರ್ಬಂಧ ಎಂದಿನಂತೆ ಮುಂದುವರಿದಿದೆ.

    ನಗರಕ್ಕೆ ಕರೊನಾ ಕಾಲಿರಿಸಿದ ಸಂದರ್ಭ ಎಲ್ಲ ಉದ್ಯಾನಗಳು ಹಾಗೂ ಆಟದ ಮೈದಾನಗಳನ್ನು ಬಂದ್ ಮಾಡಲಾಗಿತ್ತು. ಆದರೆ, ಜಿಲ್ಲೆ ಕರೊನಾ (ಕೆಲ ದಿನಗಳವರೆಗೆ) ಮುಕ್ತವಾದ ನಂತರ ಮತ್ತೆ ಉದ್ಯಾನಗಳು, ಆಟದ ಮೈದಾನಗಳನ್ನು ತೆರೆಯಲಾಯಿತು. ಆದರೆ, ಅಂತಾರಾಜ್ಯ, ಅಂತರ ಜಿಲ್ಲೆಯಿಂದ ಪ್ರಯಾಣಿಕರು ಆಗಮಿಸಲು ಅವಕಾಶ ಮಾಡಿಕೊಟ್ಟ ನಂತರ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆ ಕಾಣಲು ಪ್ರಾರಂಭಿಸಿದಾಗ ಮಹಾನಗರ ಪಾಲಿಕೆಯ ಆಯುಕ್ತ ಗುರುದತ್ತ ಹೆಗಡೆ ಜು.8 ರಿಂದ ಅನ್ವಯ ಆಗುವಂತೆ ಎಲ್ಲ ಉದ್ಯಾನಗಳು, ಆಟದ ಮೈದಾನಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದರು.

    ಅದಾಗಿ ಎರಡು ತಿಂಗಳ ನಂತರ ಆದೇಶವನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಇದೀಗ ಉದ್ಯಾನಗಳಲ್ಲಿ ಮತ್ತೆ ಜನರು ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.

    ನಗರ ಪಾಲಿಕೆ ಉದ್ಯಾನಗಳು, ಆಟದ ಮೈದಾನ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರೂ ಸಾಕಷ್ಟು ಜನರು ಫಿಟ್ನೆಸ್ ಮಂತ್ರವನ್ನು ಮರೆತಿರಲಿಲ್ಲ. ನಗರದ ಪ್ರಮುಖ ರಸ್ತೆಗಳು, ಕುಕ್ಕರಹಳ್ಳಿ, ಮಾನಸಗಂಗೋತ್ರಿಯ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದರು. ಅಲ್ಲದೆ, ಸಾಕಷ್ಟು ಸಂಖ್ಯೆಯಲ್ಲಿ ಜನರು ಚಾಮುಂಡಿಬೆಟ್ಟಕ್ಕೆ ತೆರಳುತ್ತಿದ್ದರು. ಆದರೆ, ಇದೀಗ ಉದ್ಯಾನಗಳ ಪ್ರವೇಶ ನಿರ್ಬಂಧ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಚಾಮುಂಡಿಬೆಟ್ಟದಲ್ಲಿ ಜನದಟ್ಟಣೆ ಕಡಿಮೆಯಾಗುವ ಸಾಧ್ಯತೆ ಇದೆ.

    ಉದ್ಯಾನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಹಿನ್ನೆಲೆಯಲ್ಲಿ ಮನೆಯ ಸುತ್ತಮುತ್ತಲಿನ ಉದ್ಯಾನಗಳಲ್ಲಿ ವ್ಯಾಯಾಮ ಮಾಡುತ್ತಿದ್ದ ಮಹಿಳೆಯರಿಗೆ ವಾಯುವಿಹಾರಕ್ಕೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಇದೀಗ ಮಹಿಳೆಯರಿಗೆ ತಮ್ಮ ಮನೆಯ ಬಳಿಯಲ್ಲಿಯೇ ವಾಯುವಿಹಾರಕ್ಕೆ ಅವಕಾಶ ದೊರೆತಿದೆ.

    ವಾಯು ವಿಹಾರಕ್ಕೆ ಬರುವವರು ಕಡ್ಡಾಯವಾಗಿ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮಾಡಬೇಕು. ಮಾಸ್ಕ್ ಧರಿಸುವುದು ಕಡ್ಡಾಯ. ಜತೆಗೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ಆದರೆ, ಬಹುತೇಕ ಉದ್ಯಾನಗಳಲ್ಲಿ ಸಾಕಷ್ಟು ವಾಯುವಿಹಾರಿಗಳು ಮಾಸ್ಕ್ ಧರಿಸದೆ ಆಗಮಿಸಿದ್ದು ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts