More

    ಮೀನುಗಾರಿಕೆಗೆ ಆರ್ಥಿಕ ಸಂಕಷ್ಟ

    ಅವಿನ್ ಶೆಟ್ಟಿ ಉಡುಪಿ

    ಕೋವಿಡ್ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಮೀನುಗಾರಿಕೆ ಕ್ಷೇತ್ರ ಪ್ರಸ್ತುತ ಡೀಸೆಲ್ ಬೆಲೆ ಏರಿಕೆ, ಕೋಟ್ಯಂತರ ರೂ.ಸಬ್ಸಿಡಿ ಬಾಕಿ, ಮೀನಿನ ಇಳುವರಿ ಕೊರತೆಯಿಂದಾಗಿ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಉಡುಪಿ ಜಿಲ್ಲೆ ಮಲ್ಪೆ, ಗಂಗೊಳ್ಳಿ, ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಸಾವಿರಾರು ಬೋಟುಗಳು ಮೀನುಗಾರಿಕೆ ನಡೆಸಲಾಗದೆ ಲಂಗರು ಹಾಕಿವೆ.

    ಡೀಸೆಲ್ ಬೆಲೆ ವಿಪರೀತ ಏರುತ್ತಿರುವುದು ಮೀನುಗಾರರನ್ನು ಕಂಗೆಡಿಸಿದೆ. ಕಳೆದ ವರ್ಷ ಲೀಟರ್‌ಗೆ 55-60 ರೂ.ಇದ್ದ ಡೀಸೆಲ್ ದರ ಇದೀಗ 80 ರೂ. ಆಗಿದೆ. ಸರ್ಕಾರದ ಡೀಸೆಲ್ ಸಬ್ಸಿಡಿ ಮೊತ್ತವೂ ಆಗಸ್ಟ್‌ನಿಂದ ಮೀನುಗಾರರ ಖಾತೆಗೆ ಜಮೆಯಾಗಿಲ್ಲ. ಇದರಿಂದ ಬೋಟ್ ಹೊಂದಿದವರು ಬ್ಯಾಂಕ್ ಸಾಲ ತೀರಿಸಲಾಗದೆ ಸಮಸ್ಯೆ ಎದುರಿಸುವಂತಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದಾಗಿ ಒಟ್ಟಾರೆ ಆರ್ಥಿಕ ನಿರ್ವಹಣೆ ಕಷ್ಟವಾಗುತ್ತಿದ್ದು, ಒಂದೆರಡು ತಿಂಗಳಿನಿಂದ ಕೆಲವು ಮೀನುಗಾರರು ಬೋಟನ್ನು ಕಡಿಲಿಗಿಳಿಸದೆ, ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ.

    ದೆಹಲಿಯತ್ತ 6 ರಾಜ್ಯಗಳ ಸಮಿತಿ
    ಮೀನುಗಾರಿಕೆ ಸಂಬಂಧಪಟ್ಟ ರಾಜ್ಯಗಳಲ್ಲಿ ಇದೇ ಸಮಸ್ಯೆ ಇದ್ದು, ಮೀನುಗಾರರ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದ ಹಿನ್ನೆಲೆಯಲ್ಲಿ, ಆರು ರಾಜ್ಯಗಳ ಮೀನುಗಾರರು ಸೇರಿ ಸಮಿತಿ ರಚನೆ ಮಾಡಿಕೊಂಡಿದ್ದಾರೆ. ಇದರಲ್ಲಿ ಕೇರಳ, ಗೋವಾ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯದ ಮೀನುಗಾರರಿದ್ದಾರೆ. ದೆಹಲಿಗೆ ತೆರಳಿದ ಈ ಸಮಿತಿಯ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಡೀಸೆಲ್ ಬೆಲೆ, ಸಬ್ಸಿಡಿ, ವಿಶೇಷ ಪರಿಹಾರದ ಬೇಡಿಕೆ ಮುಂದದಿಡಲಿದೆ ಎಂದು ರಾಜ್ಯದ ಮೀನುಗಾರಿಕಾ ಮುಖಂಡರು ತಿಳಿಸಿದ್ದಾರೆ.

    ಕರ್ನಾಟಕ ಕರಾವಳಿ ಪರಿಸ್ಥಿತಿ
    ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕಾರವಾರ, ತದಡಿ, ಭಟ್ಕಳ ಬಂದರುಗಳಲ್ಲಿ ಟ್ರಾಲರ್ ಬೋಟುಗಳ ಸಂಖ್ಯೆ ಹೆಚ್ಚು, ದೊಡ್ಡ ಮತ್ತು ಸಣ್ಣ ಮೀನುಗಾರಿಕೆ ಬೋಟು ಸೇರಿ 700ಕ್ಕೂ ಅಧಿಕ ಬೋಟುಗಳಿವೆ. ಶೇ.80ರಷ್ಟು ಬೋಟುಗಳು ಕಡಲಿಗಿಳಿದಿಲ್ಲ. ಮಲ್ಪೆ, ಗಂಗೊಳ್ಳಿ, ಕುಂದಾಪುರ ಮೀನುಗಾರಿಕಾ ಬಂದರಿನಲ್ಲಿ ಡೀಪ್ ಸೀ, ಟ್ರಾಲ್, ಪರ್ಸಿನ್ ಬೋಟುಗಳು 3 ಸಾವಿರಕ್ಕೂ ಅಧಿಕವಿದ್ದು, ಶೇ.60 ರಷ್ಟು ಬೋಟುಗಳು ಲಂಗರು ಹಾಕಿವೆ. ಮಂಗಳೂರಿನಲ್ಲಿ ಎಲ್ಲ ರೀತಿಯ 1,250 ಬೋಟುಗಳಿದ್ದು, ಶೇ.50 ಬೋಟುಗಳು ಕಡಲಿಗೆ ಇಳಿದಿಲ್ಲ.

    ಉಡುಪಿ ಜಿಲ್ಲೆಯಲ್ಲಿ ಮೀನುಗಾರಿಕಾ ಕ್ಷೇತ್ರದ ಸ್ಥಿತಿ ಅತಂತ್ರವಾಗಿದೆ, ಡೀಸೆಲ್ ಬೆಲೆ ಏರಿಕೆ, ಸಬ್ಸಿಡಿ ಬಾಕಿಯಿಂದಾಗಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಮೀನುಗಾರಿಕೆ ನಡೆಸಲಾಗದೆ ಸಾವಿರಾರು ಬೋಟುಗಳು ಲಂಗರು ಹಾಕಿವೆ.
    -ಕೃಷ್ಣ ಸುವರ್ಣ, ಅಧ್ಯಕ್ಷ, ಮಲ್ಪೆ ಮೀನುಗಾರರ ಸಂಘ

    ಪ್ರತೀ ವರ್ಷ ಡಿಸೆಂಬರ್, ಜನವರಿಯಲ್ಲಿ ಮೀನುಗಾರಿಕೆ ಪ್ರಮಾಣ ಕಡಿಮೆ. ಆದರೂ ಡೀಸೆಲ್ ಬೆಲೆ ಏರಿಕೆಯಿಂದಾಗಿ ನಿರ್ವಹಣೆ ಕಷ್ಟವಾಗುತ್ತಿದೆ. ಮೀನುಗಾರರಿಗೆ ಆಗಸ್ಟ್ ನಂತರ ಸಬ್ಸಿಡಿ ನೀಡಲು ಬಾಕಿ ಇದೆ. ಶೀಘ್ರದಲ್ಲೇ ಖಾತೆಗೆ ಜಮೆ ಆಗಲಿದೆ.
    -ನಿತಿನ್ ಕುಮಾರ್, ಅಧ್ಯಕ್ಷ, ಟ್ರಾಲ್ ಬೋಟ್ ಮೀನುಗಾರರ ಸಂಘ, ಮಂಗಳೂರು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts