More

    ಬರಿಗೈಲಿ ಬಂದ ಮೀನುಗಾರರು!

    ವಿಜಯವಾಣಿ ಸುದ್ದಿಜಾಲ ಕಾರವಾರ/ಹೊನ್ನಾವರ

    ಯಾಂತ್ರೀಕೃತ ಬೋಟ್​ಗಳ ಮೂಲಕ ಆಳ ಸಮುದ್ರ ಮೀನುಗಾರಿಕೆಗೆ ಸರ್ಕಾರ ಅನುಮತಿ ನೀಡಿದರೂ ಮೀನುಗಾರರು ಖುಷಿ ಪಡುವ ಪರಿಸ್ಥಿತಿಯಲ್ಲಿಲ್ಲ. ಒಂದೆಡೆ ಕಾರ್ವಿುಕರ ಸಮಸ್ಯೆ ಎದುರಾಗಿದ್ದರೆ, ಇನ್ನೊಂದೆಡೆ ಸಮುದ್ರದಲ್ಲಿ ಮೀನುಗಳ ಬೇಟೆಯೂ ಸಾಕಷ್ಟು ಇಲ್ಲದಿರುವುದು ಮೀನುಗಾರರ ಆತಂಕಕ್ಕೆ ಕಾರಣವಾಗಿದೆ.

    ಜಿಲ್ಲೆಯಲ್ಲಿ 150 ಕ್ಕೂ ಅಧಿಕ ಪರ್ಸೀನ್ ಬೋಟ್​ಗಳಿವೆ. ಇಂಥ ಒಂದು ಬೋಟ್​ನಲ್ಲಿ 30 ರಷ್ಟು ಕಾರ್ವಿುಕರು ಕಾರ್ಯನಿರ್ವಹಿಸುತ್ತಾರೆ. ಈ ಬೋಟ್​ಗಳು ಒಮ್ಮೆ ಬಂದರು ಬಿಟ್ಟರೆ ವಾರಗಟ್ಟಲೆ ಸುತ್ತಾಡಿ ಮೀನುಗಾರಿಕೆ ಮಾಡಿ ವಾಪಸಾಗುತ್ತವೆ. ಹಿಡಿದ ಮೀನು ಸಂಗ್ರಹಿಸಲು ಶೀತಲೀಕರಣ ವ್ಯವಸ್ಥೆಯೂ ಇರುತ್ತದೆ. ಇಂಥ ದೊಡ್ಡ ಬೋಟ್​ಗಳಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಕಾರ್ವಿುಕರು ಒಡಿಶಾ, ಛತ್ತೀಸಗಡ ಭಾಗದವರಾಗಿದ್ದಾರೆ. ಲಾಕ್​ಡೌನ್ ಕಾರಣದಿಂದ ಅವರೆಲ್ಲ ಊರಿಗೆ ತೆರಳಿದ್ದಾರೆ. ಇದರಿಂದ ಕಾರವಾರ ಬೈತಖೋಲ್ ಬಂದರಿನಲ್ಲಿ ಒಂದು ಪರ್ಸೀನ್ ಬೋಟ್ ಸಹ ಮೀನುಗಾರಿಕೆಗೆ ಇಳಿದಿಲ್ಲ.

    ಹೊನ್ನಾವರ ಕಾಸರಕೋಡ ಬಂದರಿನಲ್ಲಿ ಸುಮಾರು 300ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಯಾಂತ್ರೀಕೃತ ಬೋಟ್​ಗಳಿವೆ. ಅಂದಾಜು ಆರು ಸಾವಿರ ಮೀನುಗಾರಿಕೆ ಕಾರ್ವಿುಕರು ಇಲ್ಲಿ ಕೆಲಸ ಮಾಡುತ್ತಾರೆ. ಅಲ್ಲದೆ, ಬಂದರಿನಲ್ಲಿ ಮೀನು ಅನ್​ಲೋಡಿಂಗ್ ಮತ್ತು ವಾಹನಗಳಿಗೆ ಲೋಡಿಂಗ್ ಮಾಡಲು ಸಾವಿರಾರು ಹೊರ ಜಿಲ್ಲೆಗಳು ಕಾರ್ವಿುಕರು ಕೆಲಸ ಮಾಡುತ್ತಾರೆ. ಬಹುತೇಕರು ಊರಿಗೆ ತೆರಳಿದ್ದು, ವಾಪಸ್ ಬರಲಾಗಿಲ್ಲ. ಇದರಿಂದ ಬಂದರು ಖಾಲಿ, ಖಾಲಿಯಾಗಿತ್ತು.

    ಖಾಲಿ ಬಂದ ಬೋಟ್​ಗಳು: ಪ್ರತಿ ಬೋಟ್​ನಲ್ಲಿ ಐದರಿಂದ ಹತ್ತು ಕಾರ್ವಿುಕರಿರುವ ಟ್ರಾಲರ್ ಬೋಟ್​ಗಳು ಬುಧವಾರ, ಕೆಲವೆಡೆ ಗುರುವಾರ ಮೀನುಗಾರಿಕೆಗೆ ಇಳಿದರೂ ಅಲ್ಪಸ್ವಲ್ಪ ಮೀನು ಪಡೆದು ವಾಪಸಾದವು. ಕಾರವಾರ ಬೈತಖೋಲ್ ಬಂದರಿನಿಂದ 30, ಹೊನ್ನಾವರ ಕಾಸರಕೋಡಿನಿಂದ 20, ತದಡಿ 25 ಸೇರಿ ಸುಮಾರು 75 ಬೋಟ್​ಗಳು ಮೀನುಗಾರಿಕೆಗೆ ಇಳಿಸಿದ್ದವು. ಬಹುತೇಕ ಬೋಟ್​ಗಳು ಖಾಲಿ 15 ರಿಂದ 20 ಕೆಜಿಯಷ್ಟು ಲೆಪ್ಪೆ, ಜಾಲಿ, ಶೆಟ್ಲಿ ಮುಂತಾದ ಮೀನು ಹಿಡಿದು ವಾಪಸಾಗಿವೆ. ಒಂದು ಬೋಟ್ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿದು ವಾಪಸ್ ಬರುವವರೆಗೆ ಇಂಧನ, ಕಾರ್ವಿುಕರ ಸಂಬಳ ಮತ್ತು ನಿರ್ವಹಣೆ ಸೇರಿ ಸುಮಾರು 30 ಸಾವಿರ ರೂ. ವೆಚ್ಚವಾಗುತ್ತದೆ. ಮೀನು ಸಿಕ್ಕರಷ್ಟೇ ಲಾಭ. ಇನ್ನು 14 ದಿನ ಮಾತ್ರ ಮೀನುಗಾರಿಗೆ ಅವಕಾಶವಿದ್ದು, ನಷ್ಟದ ಹೊರೆ ಹೊರಬೇಕಾಗುವ ಆತಂಕ ಬೋಟ್ ಮಾಲೀಕರಲ್ಲಿ ಎದುರಾಗಿದೆ.

    ಲಾಕ್​ಡೌನ್​ನಿಂದ ತಿಂಗಳುಗಟ್ಟಲೇ ಮನೆಯಲ್ಲಿ ಕುಳಿತ ಮೀನುಗಾರರು ಮತ್ತು ಮೀನುಗಾರಿಕೆ ನೆಚ್ಚಿಕೊಂಡ ಕಾರ್ವಿುಕರಲ್ಲಿ ಈ ಬೆಳವಣಿಗೆ ಆತಂಕ ಮೂಡಿಸಿದೆ. ಸರ್ಕಾರಕ್ಕೆ ಮನವಿ ಮಾಡಿ ಅಂತೂ ಮೀನುಗಾರಿಕೆಗೆ ಅವಕಾಶ ಪಡೆದುಕೊಂಡರೂ ದುಡಿಮೆ ಇಲ್ಲದಾಯಿತಲ್ಲ ಎಂದು ಮೀನುಗಾರರು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

    ಕರೊನಾ ಲಾಕ್​ಡೌನ್ ಸಮಯದಲ್ಲಿ ಮೀನುಗಾರಿಕೆ ನಿಷೇಧಿಸಿದ್ದರಿಂದ ಮೀನುಗಾರರು ಅತಂತ್ರರಾಗಿದ್ದರು. ಮೀನುಗಾರರ ಸಮಸ್ಯೆ ಕುರಿತು ಜನಪ್ರತಿಧಿಗಳಿಗೆ ನಿವೇದಿಸಿಕೊಂಡಿದ್ದೆವು. ಸರ್ಕಾರ ಮೀನುಗಾರಿಕೆಗೆ ತೆರಳಲು ಅವಕಾಶ ನೀಡಿದೆ. ಆದರೆ, ಬೋಟ್​ಗಳು ಮೀನು ಸಿಗದೆ ವಾಪಸ್ಸಾಗುತ್ತಿರುವುದು ಆತಂಕವುಂಟು ಮಾಡಿದೆ.

    | ವಿವನ್ ಫರ್ನಾಂಡಿಸ್ ಕಾಸರಕೋಡ, ಪರ್ಸೀನ್ ಬೋಟ್ ಮಾಲೀಕರ ಸಂಘದ ಕಾರ್ಯದರ್ಶಿ

    ಈ ಸಮದಲ್ಲಿ ಟ್ರಾಲರ್ ಬೋಟ್​ಗೆ 70 ರಿಂದ 80 ಕೆಜಿ ಮೀನು ಸಾಮಾನ್ಯವಾಗಿ ಬೀಳುತ್ತಿತ್ತು. ಆದರೆ, ಈಗ 15 ಕೆಜಿಗೂ ತತ್ವಾರವಾಗಿದ್ದರಿಂದ ನಾಳೆ ಬೋಟ್​ಗಳನ್ನು ಸಮುದ್ರಕ್ಕೆ ಇಳಿಸಲೂ ಆತಂಕ ಶುರುವಾಗಿದೆ.

    | ಶ್ರೀಧರ ಹರಿಕಂತ್ರ, ಮೀನುಗಾರ, ಬೈತಖೋಲ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts