More

    ಮೀನುಗಾರ ಮಹಿಳೆಯರ ಬದುಕು ತ್ರಿಶಂಕು: ಪೇಟೆಯಲ್ಲಿ ಮಳಿಗೆ ತೆರೆಯಲು ಗ್ರಾಪಂ ಅನುಮತಿ ಮಾರುಕಟ್ಟೆಯಲ್ಲಿ ವ್ಯಾಪಾರವಿಲ್ಲದೆ ಕಂಗಾಲು

    ಕುಂದಾಪುರ : ಆಲೂರು ಗ್ರಾಮಪಂಚಾಯಿತಿ ಲಂಗುಲಗಾಮಿಲ್ಲದೆ ಮೀನು ಮಾರಾಟ ಮಳಿಗೆಗೆ ಪರವಾನಗಿ ನೀಡಿದ ಪರಿಣಾಮ ದಶಕಗಳಿಂದ ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ದ ಮೀನುಗಾರ ಮಹಿಳೆಯರು ವ್ಯಾಪಾರವಿಲ್ಲದೆ ಪರಿತಪಿಸುವಂತಾಗಿದೆ. ಸೋರುವ ಮಾಡು, ಶಿಥಿಲಗೊಂಡ ಕಟ್ಟಡದಲ್ಲಿ ಕನಿಷ್ಠ ಮೂಲಸೌಲಭ್ಯ ಇಲ್ಲದಿದ್ದರೂ ಮಹಿಳೆಯರು ಇದ್ದ ಸವಲತ್ತುಗಳನ್ನು ಬಳಸಿಕೊಂಡು ಮೀನು ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದೀಗ ಗ್ರಾಪಂ ಪೇಟೆಯಲ್ಲಿ ಮೀನು ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಿ ಮೀನುಗಾರ ಮಹಿಳೆಯರ ಬದುಕನ್ನು ಬೀದಿಗೆ ತಂದಿದೆ.

    ಆಲೂರು ಮಾರುಕಟ್ಟೆಯಲ್ಲಿ ಬಂಟ್ವಾಡಿ ಪರಿಸರದ ಮೀನುಗಾರ ಮಹಿಳೆಯರು ದಶಕಗಳಿಂದ ಮೀನು ಮಾರಿಕೊಂಡಿದ್ದರು. ಆಲೂರು ಗ್ರಾಪಂ ಇದೀಗ ಹೇಳದೆ ಕೇಳದೆ ಮೀನು ಮಾರಾಟಕ್ಕಾಗಿ ಪೇಟೆಯ ಹೃದಯ ಭಾಗದಲ್ಲಿ ಮಳಿಗೆ ನಿರ್ಮಿಸಿ ಕೊಟ್ಟಿರುವುದರಿಂದ ಮಾರುಕಟ್ಟೆಯತ್ತ ಜನ ಸುಳಿಯುತ್ತಿಲ್ಲ. ಬಂಟ್ವಾಡಿ ಪರಿಸರದ ಹಲವು ಕುಟುಂಬಗಳು ಮೀನು ಮಾರಾಟವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿವೆ. ಈಗ ಆಲೂರು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಕುಂಠಿತವಾಗಿದ್ದರಿಂದ ಇತ್ತ ವ್ಯಾಪಾರವನ್ನೂ ಬಿಡಲೂ ಆಗದೆ ವ್ಯಾಪಾರದಲ್ಲಿ ಮುಂದುವರಿಯಲೂ ಸಾಧ್ಯವಾಗದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
    ಬೇರೆಯವರು ಮೀನು ಮಾರಾಟ ಮಾಡಬಾರದು ಎಂಬುದು ನಮ್ಮ ನಿಲುವಲ್ಲ. ಆದರೆ ಮಾರುಕಟ್ಟೆಯಲ್ಲಿ ಕೂತು ಮಾರಾಟ ಮಾಡಲಿ. ಗ್ರಾಪಂ ಮೀನು ಮಾರಾಟಕ್ಕೆ ಪ್ರತ್ಯೇಕ ಮಳಿಗೆ ಮಾಡಿಕೊಟ್ಟಿರುವುದು ತಪ್ಪು. ಜನ ಹತ್ತಿರದಲ್ಲಿರುವ ಮಳಿಗೆಗೆ ಹೋಗುತ್ತಾರೆಯೇ ಹೊರತು ದೂರದಲ್ಲಿರುವ ಮಾರುಕಟ್ಟೆ ಹುಡುಕಿಕೊಂಡು ಬರುವುದಿಲ್ಲ. ಗ್ರಾಪಂ ಈ ರೀತಿ ನಮ್ಮ ಹೊಟ್ಟೆಗೆ ಹೊಡೆಯಬಾರದಿತ್ತು ಎನ್ನುವುದು ಮೀನುಗಾರ ಮಹಿಳೆಯರ ನೋವಿನ ಮಾತು.

    ಆಲೂರು ಗ್ರಾಪಂ ಹೊಣೆ : ಮೀನು ಮಾರಾಟಕ್ಕೆ ನಿರ್ದಿಷ್ಟ ಸ್ಥಳ ಇದೆ. ಆಲೂರು ಗ್ರಾಪಂ ಮೀನು ಮಾರುವವರಿಂದ ತೆರಿಗೆಯನ್ನೂ ಸಂಗ್ರಹಿಸುತ್ತಿದೆ. ಈ ನಡುವೆ ಪೇಟೆ ಮಧ್ಯದ ಮಳಿಗೆಗಳಲ್ಲಿ ಮಾರಾಟಕ್ಕೆ ಪರವಾನಗಿ ನೀಡಿದೆ. ನಿಗದಿತ ಸ್ಥಳವಿದ್ದರೂ ಬೇರೆ ಕಡೆ ಮೀನು ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದೇ ಮೀನುಗಾರ ಮಹಿಳೆಯರ ಮೀನು ವ್ಯಾಪಾರದ ಹಿನ್ನಡೆಗೆ ಕಾರಣ. ವ್ಯಾಪಾರ ಎಂದ ಮೇಲೆ ಎಲ್ಲರಿಗೂ ಸಮಾನ ಅವಕಾಶ ಇರಬೇಕು. ಬೇರೆಯವರು ಮೀನು ವ್ಯಾಪಾರ ಮಾಡಬಾರದು ಎಂಬುವುದು ನಮ್ಮ ವಾದವಲ್ಲ. ಆದರೆ ಎಲ್ಲರಿಗೂ ಮಾರುಕಟ್ಟೆಯಲ್ಲೇ ಅವಕಾಶ ಕೊಡಲಿ. ಸರ್ಕಾರ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಕೋಲ್ಡ್ ಬಾಕ್ಸ್, ಆರ್ಥಿಕ ಸಹಕಾರ, ವಾಹನ ಮುಂತಾದ ವ್ಯವಸ್ಥೆ ಮಾಡಿಕೊಟ್ಟು ಉತ್ತೇಜನ ನೀಡುತ್ತಿದೆ. ಆದರೆ ಆಲೂರು ಗ್ರಾಪಂ ನಮ್ಮ ಬದುಕು ಕಿತ್ತುಕೊಂಡಿರುವುದು ಎಷ್ಟು ಸರಿ ಎನ್ನುವ ಮಹಿಳೆಯರ ಪ್ರಶ್ನೆಗೆ ಗ್ರಾಪಂ ಅಧಿಕಾರಿಗಳೇ ಉತ್ತರಿಸಬೇಕು.

    ಆಲೂರು ಗ್ರಾಪಂ ಮೀನು ಮಾರುಕಟ್ಟೆಯಲ್ಲದೆ ಬೇರೆ ಕಡೆ ಮೀನು ಮಾರಾಟಕ್ಕೆ ಅವಕಾಶ ಕೊಟ್ಟಿರುವುದು ಹಿಂದಿನ ಆಡಳಿತ ವ್ಯವಸ್ಥೆಯಲ್ಲಿ. ಮೀನು ಮಾರಾಟ ಪ್ರಾಂಗಣದಲ್ಲೇ ಅವಕಾಶ ಕೊಟ್ಟಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.ಆದರೆ ಬೇರೆ ಯಾರೂ ಮೀನು ಮಾರಾಟ ಮಾಡಬಾರದು ಎಂದು ಹೇಳಲಾಗುವುದಿಲ್ಲ. ಸಮಸ್ಯೆ ಸೌಹಾರ್ದವಾಗಿ ಪರಿಹರಿಸುವ ಪ್ರಯತ್ನ ಮಾಡುತ್ತೇವೆ.
    ರವಿ ಶೆಟ್ಟಿ, ಉಪಾಧ್ಯಕ್ಷ, ಗ್ರಾಪಂ ಆಲೂರು.
     
    ನಾಲ್ಕು ದಶಕದಿಂದ ಆಲೂರು ಮೀನು ಮಾರುಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಮೀನು ಮಾರುಕಟ್ಟೆಯಿದ್ದರೂ ಪೇಟೆಯ ಬೇರೆ ಪ್ರದೇಶದಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡುವ ಮೂಲಕ ನಮ್ಮ ವ್ಯಾಪಾರ ಕಿತ್ತುಕೊಳ್ಳಲಾಗಿದೆ. ಹಾಗಂತ ನಾವು ಬೇರೆಯವರು ಮೀನು ಮಾರಾಟ ಮಾಡಬಾರದು ಎನ್ನುವುದಿಲ್ಲ. ಅವರೂ ನಮ್ಮ ಹಾಗೆ ಮಾರುಕಟ್ಟೆಗೆ ಬಂದು ಮಾರಾಟ ಮಾಡಲಿ. ಸರ್ಕಾರ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಉತ್ತೇಜನ ನೀಡಿದರೆ ಗ್ರಾಪಂ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಆಲೂರು ಗ್ರಾಪಂ ಶೌಚಾಲಯ ಮತ್ತಿತರ ಮೂಲ ಸೌಲಭ್ಯಗಳನ್ನು ನಿರ್ಮಿಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕು.
    -ಮೀನು ಮಾರಾಟ ಮಾಡುವ ಮಹಿಳೆಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts