More

    ದ.ಕ.ದಲ್ಲಿ ಮೀನು ದುಬಾರಿ, ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ ತಾಜಾ ಮೀನು

    ಮಂಗಳೂರು: ಕರಾವಳಿಯ ಬಹುತೇಕ ಮಂದಿಗೆ ಮೀನು ಇಲ್ಲದೆ ಊಟ ಸೇರದು. ಪ್ರಸ್ತುತ ಮೀನುಗಾರಿಕೆಗೆ ನಿಷೇಧ ಹೇರಿರುವುದರಿಂದ ಮೀನು ದರ ಹೆಚ್ಚಳವಾಗಿದೆ. ಆದರೂ ತಾಜಾ ಮೀನು ಸಿಗುತ್ತಿಲ್ಲ. ನಾಡ ದೋಣಿ ಮೀನುಗಾರಿಕೆಗೆ ಹವಾಮಾನ ಸಮಸ್ಯೆ ತಂದೊಡ್ಡಿದೆ.

    ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೂತಾಯಿ ಕೆ.ಜಿ.ಗೆ 200 ರೂ., ಬಂಗುಡೆ 300 ರೂ., ಅಂಜಲ್ 900 ರೂ., ಸಿಗಡಿಗೆ 300 ರೂ.ಇದೆ.
    ಕರಾವಳಿಯಲ್ಲಿ ಮೀನುಗಾರಿಕೆ ನಡೆಯುವ ಸಂದರ್ಭ ಬೂತಾಯಿ 100 ರೂ., ಬಂಗುಡೆ 150 ರೂ., ಅಂಜಲ್ 400 ರೂ., ಸಿಗಡಿ 200 ರೂ. ದರದಲ್ಲಿ ಮಾರಾಟವಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ತಾಜಾ ಮೀನು ಸಿಗುತ್ತಿಲ್ಲ. ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ಮೀನುಗಳು ಇಲ್ಲಿಗೆ ಬರುವುದರಿಂದ ಒಂದೆರಡು ದಿನಗಳ ಹಳೇ ಮೀನುಗಳು ಮಾರಾಟವಾಗುತ್ತಿದೆ.

    ಹೋಟೆಲ್‌ಗಳಲ್ಲೂ ದುಬಾರಿ: ಬೂತಾಯಿ, ಬಂಗುಡೆ ಹಾಗೂ ಅಂಜಲ್ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಹೋಟೆಲ್‌ಗಳಲ್ಲಿ ಬಳಕೆಯಾಗುತ್ತದೆ. ಇದೀಗ ಹೋಟೆಲ್‌ಗಳಲ್ಲೂ ದರ ಗಗನಕ್ಕೇರಿದೆ. ಒಂದು ಬಂಗುಡೆ ಫ್ರೈಗೆ 150 ರೂ., ಅಂಜಲ್ ತುಂಡಿಗೆ 400 ರೂ. ಬೂತಾಯಿಗೆ 50 ರೂ.ಇದೆ.

    ನಾಡದೋಣಿಗೆ ಹವಾಮಾನ ಹೊಡೆತ: ನಾಡದೋಣಿಗಳಿಗೆ ಜೂನ್ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಲಭಿಸಿದ್ದವು. ಆದರೆ ಕೆಲ ದಿನಗಳಿಂದ ಕರಾವಳಿಯಲ್ಲಿ ಮುಂಗಾರು ಚುರುಕಾಗಿ, ಸಮುದ್ರ ಪ್ರಕ್ಷುಬ್ಧವಾಗಿದೆ. ಕಡಲಿಗೆ ಇಳಿಯದಂತೆ ಸೂಚನೆ ಇರುವುದರಿಂದ ಆರ್ಥಿಕ ಹೊಡೆತ ಬಿದ್ದಿದೆ. ನಾಡ ದೋಣಿಯ ಮೀನುಗಳಿಗೆ ಉತ್ತಮ ಬೇಡಿಕೆ ಇದೆ ಎಂದು ನಾಡದೋಣಿ ಮೀನುಗಾರ ವಾಸು ತಿಳಿಸಿದ್ದಾರೆ.

    ಸರ್ಕಾರದ ಆದೇಶದ ಪ್ರಕಾರ ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆ ನಡೆಸಬಹುದು. ಆದರೆ ಬಹುತೇಕ ಮೀನುಗಾರರು ಸಮುದ್ರ ಪೂಜೆ ಬಳಿಕ ಆ.15ರ ಬಳಿಕವೇ ಸಮುದ್ರಕ್ಕಿಳಿಯುತ್ತಾರೆ. ಅಷ್ಟರಲ್ಲಿ ರಜೆಯಲ್ಲಿ ಹೋಗಿರುವ ಹೊರ ರಾಜ್ಯದ ಮೀನುಗಾರರು ಬಂದು ಸೇರುತ್ತಾರೆ. ದೋಣಿಗಳ ದುರಸ್ತಿ, ಬಲೆ ನೇಯುವ ಕೆಲಸಗಳು ಭರದಿಂದ ನಡೆಯುತ್ತಿದೆ ಎಂದು ಮೀನುಗಾರ ಮಜೀದ್ ಬಂದರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts