More

    ರಸ್ತೆಯಲ್ಲೇ ಮೀನು, ಹಣ್ಣು ಮಾರಾಟ, ವಾಹನ ಸವಾರರ ಪರದಾಟ, ಸಂಚಾರಕ್ಕೆ ನಿತ್ಯ ಸೆಣಸಾಟ

    ಶಿರಸಿ: ನಗರದ ನೀಲೇಕಣಿ ಮೀನು ಮಾರುಕಟ್ಟೆಯಲ್ಲಿ ಮೀನು ಮತ್ತು ಹಣ್ಣುಗಳನ್ನು ರಸ್ತೆ ಬದಿಯಲ್ಲೇ ಮಾರಾಟ ಮಾಡುತ್ತಿರುವುದು ಜನಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಶಿರಸಿ- ಕುಮಟಾ ಮುಖ್ಯ ರಸ್ತೆಗೆ ಈ ಮೀನು ಮಾರುಕಟ್ಟೆ ಸಮೀಪ ಇರುವುದರಿಂದಾಗಿ ವಾಹನ ಸಂಚಾರಕ್ಕೆ ನಿತ್ಯ ಅಡಚಣೆಯಾಗುತ್ತಿದೆ.
    ನಗರದ ಹಳೇ ಬಸ್ ನಿಲ್ದಾಣ, ಯಲ್ಲಾಪುರ ರಸ್ತೆ ಮತ್ತು ನೀಲೇಕಣಿಯಲ್ಲಿ ಮೀನು ಮಾರುಕಟ್ಟೆ ಇದೆ. ಆದರೆ, ಸದಾ ಜನಜಂಗುಳಿ ಇರುವುದು ಮಾತ್ರ ನೀಲೇಕಣಿಯ ಮೀನು ಮಾರುಕಟ್ಟೆಯಲ್ಲಿ. ಇದಕ್ಕೆ ಮುಖ್ಯ ಕಾರಣ ಕುಮಟಾ ಭಾಗದಿಂದ ತರುವ ತಾಜಾ ಮೀನುಗಳು ಇಲ್ಲಿ ಮಾರಾಟವಾಗುತ್ತಿರುವುದು. ದಶಕಗಳ ಹಿಂದೆ ಕುಮಟಾ ಭಾಗದ ಮಹಿಳೆಯರು ತಾಜಾ ಮೀನುಗಳನ್ನು ಬುಟ್ಟಿಯಲ್ಲಿ ತಂದು ನಗರದ ಹಳೇ ಬಸ್ ನಿಲ್ದಾಣ ಬಳಿಯ ಮೀನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಆರಂಭಿಸಿದ್ದರು. ಆದರೆ, ಸ್ಥಳೀಯ ಮೀನು ಮಾರಾಟಗಾರರು ತಮ್ಮ ಆದಾಯಕ್ಕೆ ಕುಂದುಬರುತ್ತದೆ ಎಂಬ ಕಾರಣಕ್ಕೆ ಪ್ರತಿರೋಧ ಒಡ್ಡಿದ್ದರಿಂದ ಈ ಮಹಿಳೆಯರು ನೀಲೇಕಣಿಯಲ್ಲಿಯೇ ಬಸ್ ಇಳಿದು ಅಲ್ಲಿಯೇ ಮೀನು ಮಾರಾಟ ಮಾಡಿ ವಾಪಸ್ ಕುಮಟಾಕ್ಕೆ ತೆರಳಲಾರಂಭಿಸಿದರು.

    ನಗರದ ಜನತೆ ಸಹ ನೀಲೇಕಣಿಗೆ ತೆರಳಿ ತಾಜಾ ಮೀನು ಖರೀದಿಸಲು ಆಸಕ್ತಿ ತೋರಿದ್ದರಿಂದ ಅಲ್ಲಿಯೇ ಜನಸಂದಣಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿರಸಿ ನಗರಸಭೆ 2014ರಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಇಲ್ಲಿ ನಿರ್ವಿುಸಿದೆ. ಆ ಬಳಿಕ ಕರಾವಳಿ ಭಾಗದ ಮೀನು ಮಾರಾಟಗಾರರು ಇಲ್ಲಿಗೆ ತಂದು ಮಾರುವ ಪ್ರಕ್ರಿಯೆ ಇನ್ನಷ್ಟು ಹೆಚ್ಚಾಗಿ ಜನಸಂದಣಿ ಉಂಟಾಗುತ್ತಿದೆ. ವ್ಯಾಪಾರಸ್ಥರಿಗೂ ಮಾರಲು ಮಳಿಗೆಗಳ ಕೊರತೆ ಉಂಟಾಯಿತು. 2022ರಲ್ಲಿ ಅಂದಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಕೊಡಿಸಿ ಮಾರಾಟ ಮಳಿಗೆಯ ಹೆಚ್ಚುವರಿ ಕಟ್ಟಡ ನಿರ್ವಿುಸಿದ್ದಾರೆ.


    ಈಗ ನೀಲೇಕಣಿ ಮೀನು ಮಾರುಕಟ್ಟೆ ಸಂತೆಯ ರೀತಿ ಪರಿವರ್ತನೆ ಆಗಿದೆ. ಮೀನು ಕೊಳ್ಳುವವರು ಅತ್ಯಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಇದೇ ಅವಕಾಶವನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ಒಂದಿಷ್ಟು ಹಣ್ಣು ಮಾರಾಟಗಾರರು, ತರಕಾರಿ ಮಾರುವವರೂ ರಸ್ತೆಯ ಪಕ್ಕದಲ್ಲಿಯೇ ಅಂಗಡಿ ಹಾಕಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮೀನು ಮಾರುವವರಲ್ಲಿ ಕೆಲವರು ಖರೀದಿದಾರರನ್ನು ಆಕರ್ಷಿಸುವ ಸಲುವಾಗಿ ಮಳಿಗೆಗಳ ಹೊರಗೂ ಅಂಗಡಿ ಹಾಕಿಕೊಳ್ಳುತ್ತಿದ್ದಾರೆ. ಈ ಮಾರುಕಟ್ಟೆಗೆ ಸೂಕ್ತ ರ್ಪಾಂಗ್ ವ್ಯವಸ್ಥೆಯೂ ಇಲ್ಲದ ಕಾರಣ ಬೈಕ್ ಸವಾರರು, ಕಾರು ಚಾಲಕರು ಅಡ್ಡಾ ದಿಡ್ಡಿ ವಾಹನ ನಿಲ್ಲಿಸುತ್ತಿದ್ದು, ಇದರ ಪರಿಣಾಮ ಶಿರಸಿ- ಕುಮಟಾ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲಾಗಿದೆ. ಟ್ರಾಫಿಕ್ ದಾಟಲಾಗದೇ ವಾಹನಗಳ ಸಾಲು ಇಲ್ಲಿ ಮಾಮೂಲಿನ ದಿನಚರಿಯಾಗಿದೆ. ಸೂಕ್ತ ಸಿಬ್ಬಂದಿಯನ್ನಿಟ್ಟು ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ನಗರಸಭೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.



    ಮೀನು ಮಾರುಕಟ್ಟೆಯ ಮಾರಾಟ ಮಳಿಗೆಗಿಂತ ಹೊರಗೆ ಮೀನು ಮಾರುವಂತಿಲ್ಲ. ಕೆಲವರು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಹೊರಗಡೆ ಮಾರಾಟ ಮಾಡುತ್ತಿದ್ದು, ಅಂತಹ ವ್ಯಾಪಾರಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. | ಕಾಂತರಾಜು, ಪೌರಾಯುಕ್ತ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts