More

    ಮೊದಲ ಹಂತದ ಮತದಾನ ಇಂದು

    ಹಾವೇರಿ: ಜಿಲ್ಲೆಯಲ್ಲಿ ಶಾಂತಿಯುತವಾಗಿ ಗ್ರಾಪಂ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ಸುರಕ್ಷಾ ಕ್ರಮಗಳೊಂದಿಗೆ ಪಾರದರ್ಶಕ ಚುನಾವಣೆಗಾಗಿ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 209 ಗ್ರಾಪಂಗಳ 1,056 ವಾರ್ಡ್​ಗಳ 2,967 ಸದಸ್ಯ ಸ್ಥಾನಗಳಲ್ಲಿ ಈಗಾಗಲೇ 224 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 2,743 ಸ್ಥಾನಗಳಿಗೆ ಡಿ. 22 ಹಾಗೂ 27ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆಯಲ್ಲಿ 5,74,494 ಮತದಾರರು ಹಾಗೂ ಎರಡನೇ ಹಂತದಲ್ಲಿ 4,37,693 ಮತದಾರರು ಸೇರಿ ಒಟ್ಟು 10,12,187 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 734 ಸೇವಾ ಮತದಾರರು ಸೇರಿದ್ದಾರೆ ಎಂದರು.

    ಸುಗಮ ಮತದಾನಕ್ಕಾಗಿ ಜಿಲ್ಲೆಯಲ್ಲಿ 209 ಪಂಚಾಯಿತಿಗಳಿಗೆ 209 ಚುನಾವಣಾ ಅಧಿಕಾರಿಗಳು, 218 ಸಹಾಯಕ ಚುನಾವಣಾಧಿಕಾರಿಗಳು, 1,379 ಪೊಲೀಸ್ ಆಫೀಸರ್, 1,517 ಪ್ರೊಸಿಡಿಂಗ್ ಆಫೀಸರ್, 4,551 ಪೋಲಿಂಗ್ ಆಫೀಸರ್​ಗಳು, 1,379 ಡಿ ಗ್ರೂಪ್ ನೌಕರರು, 7,258 ಆರೋಗ್ಯ ಕಾರ್ಯಕರ್ತರು, 101 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ಸಹ ನೀಡಲಾಗಿದೆ ಎಂದರು.

    ಅವಿರೋಧ ಆಯ್ಕೆ ಹೊರತುಪಡಿಸಿ ಮೊದಲ ಹಂತದಲ್ಲಿ ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕುಗಳ 675 ಮತಗಟ್ಟೆಗಳಲ್ಲಿ ಡಿ. 22ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.(34 ಮತಗಟ್ಟೆಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ) ಹಾವೇರಿಯ 220, ರಾಣೆಬೆನ್ನೂರ 229, ಹಿರೇಕೆರೂರು ಹಾಗೂ ರಟ್ಟಿಹಳ್ಳಿಯ ತಲಾ 113 ಮತಗಟ್ಟೆಗಳಲ್ಲಿ ಮತದಾನ ಜರುಗಲಿದೆ. ಮೊದಲ ಹಂತದಲ್ಲಿ ಹಾವೇರಿಯ 465 (49 ಅವಿರೋಧ), ರಾಣೆಬೆನ್ನೂರ 458 (33 ಅವಿರೋಧ), ಹಿರೇಕೆರೂರ 228 (32 ಅವಿರೋಧ) ಹಾಗೂ ರಟ್ಟಿಹಳ್ಳಿಯ 216 (35 ಸ್ಥಾನಕ್ಕೆ ಅವಿರೋಧ) ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆಯಲಿದೆ ಎಂದರು.

    ಸುಗಮ ಮತದಾನಕ್ಕಾಗಿ ಹೆಚ್ಚುವರಿ ಸಿಬ್ಬಂದಿ ಸೇರಿ 104 ಮತಗಟ್ಟೆ ಅಧಿಕಾರಿಗಳು, 111 ಸಹಾಯಕ ಮತಗಟ್ಟೆ ಅಧಿಕಾರಿಗಳು, 780 ಪ್ರೊಸಿಡಿಂಗ್ ಆಫೀಸರ್, 2,340 ಪೋಲಿಂಗ್ ಆಫೀಸರ್, 709 ಗ್ರೂಪ್ ಡಿ ನೌಕರರು, 1,418 ಆರೋಗ್ಯ ಕಾರ್ಯಕರ್ತರು, 54 ಸೆಕ್ಟೆರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಲ್ಲ ಹಂತದ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಚುನಾವಣೆ ನಡೆಯುವ ಎಲ್ಲ ಮತಗಟ್ಟೆಗಳಲ್ಲಿ ಗರಿಷ್ಠ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ನಾಲ್ಕು ಡಿವೈಎಸ್​ಪಿ, 15 ಸಿಪಿಐ, 32 ಪಿಎಸ್​ಐ, 60 ಎಎಸ್​ಐ, 600 ಪೇದೆಗಳು ಹಾಗೂ ಮುಖ್ಯಪೇದೆಗಳು, ಎಂಟು ಡಿಎಆರ್ ತುಕಡಿಗಳು, ನಾಲ್ಕು ಕೆಎಸ್​ಆರ್​ಪಿ ತುಕಡಿ ಹಾಗೂ 200 ಹೋಂ ಗಾರ್ಡ್​ಗಳನ್ನು ನಿಯೋಜಿಸಲಾಗಿದೆ ಎಂದರು.

    ಪ್ರತಿ ಮತಗಟ್ಟೆಗಳಲ್ಲೂ ಕೋವಿಡ್ ಸುರಕ್ಷತೆಗಾಗಿ ಮತಗಟ್ಟೆ, ಅಧಿಕಾರಿ ಹಾಗೂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಹಾಗೂ ಕೋವಿಡ್ ಸುರಕ್ಷತಾ ಕಿಟ್​ಗಳನ್ನು ವಿತರಿಸಲಾಗಿದೆ. 106 ವ್ಯಾಕ್ಸ್ ಕಿಟ್, 709 ಕೋವಿಡ್ ಪ್ರೊಟೆಕ್ಷನ್ ಕಿಟ್, 709ಥರ್ಮಲ್ ಸ್ಕ್ಯಾನರ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮತದಾನ ಮಾಡುವ ಸಂದರ್ಭದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಕನಿಷ್ಠ ಆರು ಅಡಿ ಅಂತರದಲ್ಲಿ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಪ್ರವೇಶ ಮುನ್ನ ಸ್ಕ್ರೀನಿಂಗ್, ಸ್ಯಾನಿಟೈಸರ್​ನಿಂದ ಕೈ ತೊಳೆಯುವ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಲಕ್ಷಣಗಳು ಕಂಡುಬಂದರೆ ಹಾಗೂ ಈಗಾಗಲೇ ಕೋವಿಡ್ ಪಾಸಿಟಿವ್ ಇದ್ದರೆ ಅವರು ಮತದಾನ ಮಾಡಲು ಇಚ್ಚಿಸಿದರೆ ಸುರಕ್ಷತಾ ಕ್ರಮ, ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮತದಾನದ ಕೊನೆಯ ಅವಧಿ 4 ಗಂಟೆಯಿಂದ 5 ಗಂಟೆವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಕೋವಿಡ್ ಕಿಟ್ ಪೂರೈಸಲಾಗಿದೆ. ಪ್ರತಿ ಮತಗಟ್ಟೆಗೆ ಓರ್ವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಪ್ರತಿ ತಾಲೂಕಿಗೆ ಐದರಂತೆ ಮೊಬೈಲ್ ಮೆಡಿಕಲ್ ಟೀಂ ರಚಿಸಲಾಗಿದೆ.

    ಸುದ್ದಿಗೋಷ್ಠಿಯಲ್ಲಿ ಡಿವೈಎಸ್​ಪಿ ವಿಜಯಕುಮಾರ ಸಂತೋಷ, ಚುನಾವಣಾ ತಹಸೀಲ್ದಾರ್ ಪ್ರಶಾಂತ ನಾಲವಾರ ಇತರರಿದ್ದರು.

    ನೀತಿ ಸಂಹಿತೆ ಉಲ್ಲಂಘಟನೆ, 8 ಪ್ರಕರಣ ದಾಖಲು

    ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಜಿಲ್ಲೆಯಲ್ಲಿ ಈವರೆಗೆ 8 ಪ್ರಕರಣಗಳಿಗೆ ಎಫ್​ಐಆರ್ ದಾಖಲಿಸಲಾಗಿದೆ. ಈ ಎಲ್ಲ ಪ್ರಕರಣಗಳು ಪ್ರಚಾರ ಕಾರ್ಯದಲ್ಲಿ ರಾಜಕೀಯ ಮುಖಂಡರ ಭಾವಚಿತ್ರ, ಪಕ್ಷದ ಚಿಹ್ನೆ ಬಳಸಿ ಪ್ರಚಾರ ಮಾಡಿದ ಕಾರಣಗಳಿಗಾಗಿ ದಾಖಲಾಗಿದೆ. ಪೊಲೀಸ್ ಇಲಾಖೆಯಿಂದ 574 ಶಸ್ತ್ರಾಸ್ತ್ರಗಳಲ್ಲಿ 106 ವಿನಾಯಿತಿ ಹೊಂದಿವೆ. ಉಳಿದ 468 ಜಮೆ ಮಾಡಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯಿಂದ ಜಿಲ್ಲೆಯಲ್ಲಿ ಈವರೆಗೆ 1.90 ಲಕ್ಷ ರೂ. ಮೌಲ್ಯದ 305.57 ಲೀಟರ್ ಮದ್ಯ ಹಾಗೂ 6.90 ಲಕ್ಷ ರೂ. ಮೌಲ್ಯದ 19 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts