More

    ಮಂಗನ ಕಾಯಿಲೆಯಿಂದಾಗಿ ವ್ಯಕ್ತಿ ಸಾವು: ಲಸಿಕೆ ಹಾಕಿಸಿಕೊಂಡಿದ್ದರೂ ಬಿಡಲಿಲ್ಲ ಕಾಯಿಲೆ

    ಸಿದ್ದಾಪುರ: ಮಂಗನ ಕಾಯಿಲೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇಟಗಿ ಸಮೀಪದ ಮಳಗುಳಿಯ ಭಾಸ್ಕರ ಗಣಪತಿ ಹೆಗಡೆ (64)ಮೃತರು.

    ಫೆ.10 ರಂದು ಭಾಸ್ಕರ ಹೆಗಡೆ ಅವರಲ್ಲಿ ಜ್ವರ ಕಾಣಿಸಿಕೊಂಡಿದ್ದು ಸ್ಥಳೀಯ ವಂದಾನೆ ಹಾಗೂ ಸಿದ್ದಾಪುರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರಿಗೆ ಮಂಗನ ಖಾಯಿಲೆ ಇರುವುದು ಖಚಿತವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ಮಣಿಪಾಲಿಗೆ ಕರೆದೊಯ್ಯುವಾಗ ಆಗುಂಬೆ ಹತ್ತಿರ ಮೃತಪಟ್ಟಿದ್ದಾರೆ ಎಂದು ಮಂಗನ ಖಾಯಿಲೆ ವಿಶೇಷ ವೈದ್ಯಾಧಿಕಾರಿ ಸತೀಶ ಶೇಟ್ ಖಚಿತಪಡಿಸಿದ್ದಾರೆ.

    ಭಾಸ್ಕರ ಹೆಗಡೆ ಮಂಗನಕಾಯಿಲೆ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಲಸಿಕೆ ಹಾಕಿಸಿಕೊಂಡಿದ್ದರು.‌ ಆದರೆ ಎರಡನೇ ಲಸಿಕೆ ಹಾಕಿಸಿಕೊಳ್ಳದ ಕಾರಣ ಅವರಲ್ಲಿ ರೋಗ ಕಾಣಿಸಿಕೊಂಡಿದೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಅಭಿಪ್ರಾಯ. ಸಿದ್ದಾಪುರದಲ್ಲಿ ಇನ್ನೋರ್ವ ಮಹಿಳೆಗೆ ಮಂಗನ ಕಾಯಿಲೆ ಇರುವುದು ಖಚಿತವಾಗಿದ್ದು ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಇಟಗಿ ಭಾಗದಲ್ಲಿ ಇದುವರೆಗೆ 40ಕ್ಕೂ ಅಧಿಕ ಮಂಗಗಳು ಮೃತಪಟ್ಟಿವೆ. ಒಂದು‌ ಮಂಗನಲ್ಲಿ ಕಾಯಿಲೆ ಇರುವುದು ಖಚಿತವಾಗಿದೆ. ಕಳೆದ ವರ್ಷ ಸಿದ್ದಾಪುರ ತಾಲೂಕು ಒಂದರಲ್ಲೇ 62 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದವು. 2019ರ ಆಗಸ್ಟ್‌ನಿಂದಲೇ ಈ ಭಾಗದಲ್ಲಿ ಲಸಿಕೆ ಹಾಕಲಾಗುತ್ತಿದ್ದು ಈವರೆಗೆ ಸುಮಾರು 18 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts