More

    ಪ್ರಥಮ ಕದನ ಮುಕ್ತಾಯ

    ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದಲ್ಲಿ ಏಳು ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಜರುಗಿದ ಚುನಾವಣೆಗೆ ಶೇ. 82.70 ಮತದಾನವಾಗಿದೆ.

    ಬೆಳಗಾವಿ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಗೋಕಾಕ ಮತ್ತು ಮೂಡಲಗಿ ತಾಲೂಕಿನ 259 ಗ್ರಾಪಂಗಳ 3,808 ಸದಸ್ಯ ಸ್ಥಾನಗಳಿಗೆ ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಶಾಂತಿಯುತವಾಗಿ ಮತದಾನ ಜರುಗಿತು. ಹುಕ್ಕೇರಿ, ಬೆಳಗಾವಿ, ಖಾನಾಪುರ ತಾಲೂಕಿನ ವ್ಯಾಪ್ತಿಯ ಕೆಲ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಬ್ಯಾಲೆಟ್ ಪತ್ರಿಕೆಯಲ್ಲಿನ ಅಂಕಿ ಸಂಖ್ಯೆ, ಚಿಹ್ನೆಗಳು ಕೆಲ ಹಿರಿಯ ನಾಗರಿಕರಿಗೆ ಮತ್ತು ಮಹಿಳಾ ಮತದಾರರಲ್ಲಿ ಗೊಂದಲ ಉಂಟು ಮಾಡಿದವು.

    ಕೇಂದ್ರದ ಬಳಿಯೂ ಪ್ರಚಾರ: ಕೊರೆಯುವ ಚಳಿ ಹಿನ್ನೆಲೆಯಲ್ಲಿ ಬಹತೇಕ ಗ್ರಾಮಗಳಲ್ಲಿ ಬೆಳಗಿನ ಅವಧಿಯಲ್ಲಿ ಮತದಾನ ನೀರಸವಾಗಿ ಪ್ರಾರಂಭವಾಯಿತು. ಬಿಸಿಲು ಏರುತ್ತಿದ್ದಂತೆ ಮತ ಚಲಾವಣೆ ನಿಧಾನವಾಗಿ ವೇಗ ಪಡೆದುಕೊಂಡಿತ್ತು. ಮತದಾನ ಕೇಂದ್ರ ವ್ಯಾಪ್ತಿಯಲ್ಲಿ 100 ಮೀಟರ್ ನಿಷೇಧಿತ ಪ್ರದೇಶದ ಹೊರಗೆ ಅಭ್ಯರ್ಥಿಗಳು ಮತದಾರರಿಗೆ ತಮ್ಮ ಪರವಾಗಿ ಮತ ಚಲಾಯಿಸಿ ಎಂದು ಕೇಳುತ್ತಿರುವುದು ಕಂಡುಬಂತು. ಕೆಲವೆಡೆ ಅಭ್ಯರ್ಥಿಗಳ ಬೆಂಬಲಿಗರು ಮತದಾರರಿಗೆ ಬೆಳಗಿನ ಉಪಾಹಾರ, ಚಹಾ ವ್ಯವಸ್ಥೆ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.

    ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್ ಇಲಾಖೆಯು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ತಡೆಗಟ್ಟುವ ನಿಟ್ಟಿನಲ್ಲಿ ಆರು ತಾಲೂಕು ವ್ಯಾಪ್ತಿಯ 1,476 ಮತಗಟ್ಟೆಗಳಲ್ಲಿ 264 ಕ್ರಿಟಿಕಲ್ ಹಾಗೂ 1,212 ನಾನ್ ಕ್ರಿಟಿಕಲ್ ಮತಗಟ್ಟೆಗಳನ್ನಾಗಿ ವಿಂಗಡಿಸಲಾಗಿತ್ತು. ಜಿಲ್ಲಾ ಪೊಲೀಸ್ ಇಲಾಖೆಯು ಡಿಎಸ್‌ಪಿ, ಸಿಪಿಐ, ಪಿಎಸ್‌ಐ, ಎಚ್‌ಸಿ, ಮತ್ತು ಪಿಸಿ ಹಾಗೂ ಹೋಂ ಗಾರ್ಡ್‌ಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿ ಒಟ್ಟು 3,250 ಸಿಬ್ಬಂದಿ ನಿಯೋಜಿಸಿತ್ತು. ಏಳು ತಾಲೂಕುಗಳ ಬಹುತೇಕ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನೆರವೇರಿತು.

    ಅಭ್ಯರ್ಥಿ ಬೆಂಬಲಿಗರಿಂದ ಹಣ ಹಂಚಿಕೆ: ಬೆಳಗಾವಿ ತಾಲೂಕಿನ ಕೆ.ಎಚ್.ಕಂಗ್ರಾಳಿ ಗ್ರಾಮದಲ್ಲಿ ಮತ ಕೇಂದ್ರದ ಸುತ್ತಮುತ್ತ ಅಭ್ಯರ್ಥಿಗಳ ಬೆಂಬಲಿಗರು ಮತದಾರರಿಗೆ ಹಣ ಹಂಚಿಕೆ ಮಾಡಿ ಮತಯಾಚನೆ ಮಾಡುತ್ತಿದ್ದರು. ಇದರಿಂದ ಅಭ್ಯರ್ಥಿಗಳಲ್ಲಿ ಪರಸ್ಪರ ಮಾತಿಗೆ ಮಾತು ಬೆಳೆದು ಗಲಾಟೆ ಆರಂಭವಾಯಿತು. ಪೊಲೀಸರು ಮಧ್ಯೆಪ್ರವೇಶಿಸಿ ಹಣ ಹಂಚಿಕೆ ಮಾಡುತ್ತಿರುವವರನ್ನು ವಶಕ್ಕೆ ಪಡೆದರು. ಬಳಿಕ ಶಾಂತಿಯುತವಾಗಿ ಮತದಾನ ಮುಂದುವರಿಯಿತು.

    ಅಭ್ಯರ್ಥಿ ಪರವಾಗಿ ಶಿಕ್ಷಕಿ ಮತಯಾಚನೆ!: ಹುಕ್ಕೇರಿ ತಾಲೂಕಿನ ಅರ್ಜುನವಾಡಿ ಗ್ರಾಮದಲ್ಲಿ ಅಭ್ಯರ್ಥಿ ಹನುಮಂತ ಇನಾಮದಾರ್ ಅವರಿಗೆ ಮತ ನೀಡುವಂತೆ ಉತ್ತರ ಕನ್ನಡ ಜಿಲ್ಲೆಯ ಹಡಿನಬಾಳ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕಿ ಅರ್ಚನಾ ಎಸ್. ಆಡಿಯೋ ಮೂಲಕ ಮತಯಾಚನೆ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸುವಂತೆ ಗ್ರಾಮದ ಸುರೇಶ ಹುದ್ದಾರ ಎಂಬುವರು ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.

    ಗರ್ಭಿಣಿಯರಿಗೆ ವಿನಾಯಿತಿ

    ಕೋವಿಡ್-19 ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಮತದಾನ ಮಾಡಲು ಬರುವ ಗರ್ಭಿಣಿಯರಿಗೆ, ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರಿಗೆ, ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮತದಾನ ಮಾಡಲು ಸರದಿ ಸಾಲು ಬಿಟ್ಟು ವಿನಾಯಿತಿ ನೀಡಲಾಗಿತ್ತು. ಅಲ್ಲದೆ, ಮತಗಟ್ಟೆಯ ಕೇಂದ್ರದವರೆಗೆ ಅಂಗವಿಕಲರಿಗೆ, 65 ವರ್ಷ ಮೇಲ್ಪಟ್ಟ ನಾಗರಿಕರಿಗೆ ವಾಹನ ಸೌಲಭ್ಯ ಕಲ್ಪಿಸಲಾಗಿತ್ತು.

    ಮತಗಟ್ಟೆ ಚುನಾವಣೆ ಅಧಿಕಾರಿ ಬಳಿಯಿತ್ತು ಪಿಸ್ತೂಲ್!

    ಬೆಳಗಾವಿ ತಾಲೂಕಿನ ದೇಶನೂರ ಗ್ರಾಪಂ ಚುನಾವಣೆಗೆ ನಿಯೋಜನೆಗೊಂಡಿದ್ದ ಮತಗಟ್ಟೆ ಅಧಿಕಾರಿ ಸುಲೇಮಾನ್ ಸನದಿ ಎಂಬುವರ ಬಳಿ ಸೋಮವಾರ ತಡರಾತ್ರಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಕರ್ತವ್ಯದಿಂದ ಅವರನ್ನು ಬಿಡುಗಡೆಗೊಳಿಸಿ ಬೇರೆ ಅಧಿಕಾರಿಯನ್ನು ನೇಮಿಸಲಾಯಿತು. ಯಾವ ಕಾರಣಕ್ಕೆ ಅವರು ಪಿಸ್ತೂಲ್ ತೆಗೆದುಕೊಂಡು ಚುನಾವಣಾ ಕರ್ತವ್ಯಕ್ಕೆ ಬಂದಿದ್ದಾರೆ ಎಂಬ ಕುರಿತು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

    ದೈಹಿಕ ಅಂತರ ಮಾಯ

    ಕೋವಿಡ್-19 ಸೋಂಕು ಹರಡದಂತೆ ಮತಗಟ್ಟೆ ಕೇಂದ್ರಗಳಲ್ಲಿ ಮಾಸ್ಕ್ ಧಾರಣೆ, ದೈಹಿಕ ಅಂತರ, ಸ್ಯಾನಿಟೈಸರ್ ಬಳಕೆಯನ್ನು ಚುನಾವಣೆ ಆಯೋಗ ಕಡ್ಡಾಯ ಮಾಡಿತ್ತು. ಆದರೆ, ಮತಗಟ್ಟೆಗಳಿಗೆ ಬರುವ ಬಹುತೇಕ ಮತದಾರರು ಮಾಸ್ಕ್ ಹಾಕಿಕೊಳ್ಳದೆ ಆಗಮಿಸಿ ಮತ ಚಲಾಯಿಸಿದರು. ದೈಹಿಕ ಅಂತರ ಕಾಪಾಡಿಕೊಳ್ಳದೆ ಒಬ್ಬರ ಮೇಲೊಬ್ಬರು ಬಿದ್ದು ಮತ ಚಲಾಯಿಸಿದ್ದರಿಂದ ಚುನಾವಣಾ ಸಿಬ್ಬಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮೂಡಲಗಿ ತಾಲೂಕಿನ ಕೆಲ ಮತಗಟ್ಟೆಗಳಲ್ಲಿ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts