More

    ಡಂಪಿಂಗ್ ಯಾರ್ಡ್ ಬೆಂಕಿ ಶಮನ

    ಮಂಗಳೂರು: ಪಚ್ಚನಾಡಿ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸೋಮವಾರ ಮುಂಜಾನೆ ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಪ್ರದೇಶದಲ್ಲಿ ಹರಡಿದ್ದ ಹೊಗೆ ಕಡಿಮೆಯಾಗಿದೆ. ಹೀಗಾಗಿ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಯಿತು.

    ಭಾನುವಾರ ರಾತ್ರಿ ಡಂಪಿಂಗ್ ಯಾರ್ಡ್ ಒಳಗಿರುವ ಒಣ ತ್ಯಾಜ್ಯವನ್ನು ವಿಂಗಡಿಸಿ, ಶ್ರೆಡ್ಡಿಂಗ್ ಮಾಡುವ ನೇಚರ್ ಫ್ರೆಂಡ್ಲಿ ರಿಸೈಕಲ್ ಇಂಡಸ್ಟ್ರಿ ಮತ್ತು ಡ್ರೈವೇಸ್ಟ್ ಹ್ಯಾಂಡ್ಲಿಂಗ್ ಸಂಸ್ಥೆಯ ಘಟಕದಲ್ಲಿದ್ದ ತ್ಯಾಜ್ಯದಲ್ಲಿ ಬೆಂಕಿ ಕಾಣಿಸಿಕೊಂಡು, ಕ್ಷಣಾರ್ಧದಲ್ಲಿ ಜ್ವಾಲೆ ವ್ಯಾಪಿಸಿತ್ತು. ಸಂಸ್ಥೆಯ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಲ್ಯಾಂಡ್‌ಫಿಲ್ಲಿಂಗ್‌ಗೆ ಹೋಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನೇಚರ್ ಫ್ರಂಡ್ಲಿ ಸಂಸ್ಥೆ ಬೇಲಿಂಗ್, ಶ್ರಡ್ಡಿಂಗ್ ಮೂಲಕ ಮರು ಬಳಕೆಗೆ ಯೋಗ್ಯವಾಗಿಸಿ, ಪ್ಲಾಸ್ಟಿಕ್ ವಸ್ತುಗಳ ತಯಾರಿ ಸಂಸ್ಥೆಗೆ ಪೂರೈಸುತಿತ್ತು. ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಸಂಸ್ಥೆ ದಿನಕ್ಕೆ 25-30 ಟನ್ ಒಣ ಕಸವನ್ನು ಬೇರ್ಪಡಿಸುತ್ತದೆ.

    ಅಗ್ನಿ ಆಕಸ್ಮಿಕದಲ್ಲಿ ಪ್ಲಾಸ್ಟಿಕ್ ಡಸ್ಟ್ ರಿಮೂವಲ್, ಬೇಲಿಂಗ್, ಹೈಡ್ರಾಲಿಕ್ ಮೆಷಿನ್ಸ್ ಸೇರಿದಂತೆ 20ಕ್ಕೂ ಅಧಿಕ ಯಂತ್ರೋಪಕರಣಗಳು ಅಗ್ನಿಗೆ ಆಹುತಿಯಾಗಿವೆ. ನಷ್ಟದ ಮೌಲ್ಯಮಾಪನ ನಡೆಯುತ್ತಿದ್ದು, ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಘಟಕದಲ್ಲಿ ರಾತ್ರಿ ಯಾವುದೇ ಕೆಲಸ ನಡೆಯುವುದಿಲ್ಲ. ಆದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮುಂದಿನ ದಿನಗಳಲಿ ಕೆಲಸ ನಿರ್ವಹಣೆ ಹೇಗೆ ಎನ್ನುವ ಕುರಿತು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರು.

    ಹಾರಿದ ಶೀಟ್‌ಗಳು: ಬೆಂಕಿಯ ಜ್ವಾಲೆಗೆ ಘಟಕದ ಮೇಲೆ ಹಾಕಿದ್ದ ಶೀಟ್‌ಗಳು ದೂರಕ್ಕೆ ಹಾರಿವೆ. ಆದರೆ ಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಸಂಪೂರ್ಣ ಘಟಕವೇ ಹಾನಿಗೀಡಾಗಿದ್ದು, ಮರು ನಿರ್ಮಾಣ ಬಳಿಕವಷ್ಟೇ ಕಾರ್ಯಾಚರಣೆ ಸಾಧ್ಯ. ಪ್ರಸ್ತುತ ಬೆಂಕಿಯ ಜ್ವಾಲೆಗೆ ಸಿಲುಕಿ ಅಳಿದುಳಿದ ತ್ಯಾಜ್ಯವನ್ನು ಏನು ಮಾಡುವುದು ಎಂಬ ಪ್ರಶ್ನೆ ಎದುರಾಗಿದೆ.

    ವ್ಯಾಪಿಸಿದ ಹೊಗೆ: ಪ್ಲಾಸ್ಟಿಕ್ ಉರಿಯುವಾಗ ಹೊರಬರುತ್ತಿದ್ದ ದಟ್ಟವಾದ ಕಪ್ಪುಹೊಗೆ, ಸುತ್ತಮುತ್ತಲ 1-2 ಕಿ.ಮೀ.ವರೆಗೂ ವ್ಯಾಪಿಸಿತ್ತು. ಪರಿಣಾಮ ಸ್ಥಳೀಯರು ರಾತ್ರಿಯಿಡೀ ಕಷ್ಟ ಅನುಭವಿಸಿದರು. ದೇವಿನಗರ, ಸಂತೋಷ್‌ನಗರ, ವಾಮಂಜೂರು ಭಾಗದ ಜನರು ಹೊಗೆಯಿಂದ ತತ್ತರಿಸಿದರು. ವಿದ್ಯುತ್ ಸರಬರಾಜು ಕಡಿತಗೊಳಿಸಿದ ಕಾರಣ, ನಿದ್ದೆಯಿಲ್ಲದೆ ರಾತ್ರಿ ಕಳೆಯುವಂತಾಗಿತ್ತು ಎನ್ನುತ್ತಾರೆ ಸ್ಥಳೀಯರು. ರಾತ್ರಿ ಯಿಂದ ಬೆಳಗ್ಗಿನವರೆಗೆ ವಾಮಂಜೂರು-ಬೋಂದೆಲ್ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆಹಿಡಿಯಲಾಗಿತ್ತು.

    8 ಅಗ್ನಿಶಾಮಕ ವಾಹನ ಬಳಕೆ: ರಾತ್ರಿ 9.30ಕ್ಕೆ ಕಾರ್ಯಾಚರಣೆ ಆರಂಭಿಸಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿ, ಬೆಳಗ್ಗಿನ ಜಾವ 3ಗಂಟೆಯ ವೇಳೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೂ ಹೊಗೆಯಾಡುತ್ತಿದ್ದು, ಬೆಳಗ್ಗೆ ಸಂಪೂರ್ಣವಾಗಿ ಹತೋಟಿಗೆ ಬಂದು ಎಲ್ಲರೂ ನಿಟ್ಟುಸಿರುವ ಬಿಡುವಂತಾಗಿದೆ. 8 ಅಗ್ನಿ ಶಮನ ವಾಹನಗಳನ್ನು ಬಳಸಲಾಗಿದೆ. ಕದ್ರಿ ಮತ್ತು ಪಾಂಡೇಶ್ವರ ಠಾಣೆಯಿಂದ ತಲಾ ಎರಡು, ಬಂಟ್ವಾಳದಿಂದ 1, ವಿಮಾನ ನಿಲ್ದಾಣ, ಎಂಸಿಎಫ್ ಮತ್ತು ಎಂಆರ್‌ಪಿಎಲ್‌ನ ತಲಾ ಒಂದೊಂದು ವಾಹನವನ್ನು ಬಳಸಿಕೊಳ್ಳಲಾಗಿತ್ತು. ಪ್ಲಾಸ್ಟಿಕ್‌ಗೆ ಬೆಂಕಿ ಬಿದ್ದುರುವುದರಿಂದ ಕ್ಷಣ ಕ್ಷಣಕ್ಕೂ ಜ್ವಾಲೆ ಹೆಚ್ಚಾಗುತಿತ್ತು. ಅದರ ಸಮೀಪ ಕಾರ್ಯಾಚರಣೆ ಸವಾಲಾಗಿತ್ತು. ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಲಾಗಿದೆ ಎನ್ನುತ್ತಾರೆ ಕದ್ರಿ ಅಗ್ನಿಶಾಮಕ ಠಾಣೆ ಅಧಿಕಾರಿ ರಮೇಶ್.

    ಹಾನಿಯ ಪ್ರಮಾಣದ ನಿಖರ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಸಂಸ್ಥೆಯ ಮಾಹಿತಿ ಪ್ರಕಾರ 200 ಟನ್ ಒಣ ಕಸ ಸಂಗ್ರಹವಿತ್ತು. ಅವೆಲ್ಲ ಸುಟ್ಟು, ಯಂತ್ರೋಪಕರಣಗಳಿಗೂ ಹಾನಿಯಾಗಿದೆ. ಪ್ರಸ್ತುತ ಒಣಕಸ ಘಟಕದ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಹಸಿ ಕಸದಿಂದ ಕಾಂಪೋಸ್ಟ್ ತಯಾರಿಸುವ ಘಟಕ ಕಾರ್ಯನಿರ್ವಹಿಸುತ್ತಿದೆ.
    ಅಕ್ಷಿ ಶ್ರೀಧರ್ ಆಯುಕ್ತ, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts