More

    ಬೂದಿಯಾದಾಗಲೇ ಬರುವ ಅಗ್ನಿಶಾಮಕ ದಳ!

    ಹಿರೇಕೆರೂರ: ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿ 2006ರಲ್ಲಿ ಆರಂಭಗೊಂಡ ಅಗ್ನಿಶಾಮಕ ದಳ ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕಚೇರಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಲಕ್ಷ್ಯ ವಹಿಸುತ್ತಿಲ್ಲ. ಹೀಗಾಗಿ ಪಟ್ಟಣದಲ್ಲಿ ಎಲ್ಲೇ ಅಗ್ನಿಅವಘಡಗಳು ಸಂಭವಿಸಿದರೂ ಸಕಾಲಕ್ಕೆ ವಾಹನಗಳು ತಲುಪುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

    ಅಗ್ನಿಶಾಮಕ ದಳದ ಕಚೇರಿಯಲ್ಲಿ ಒಟ್ಟು 27 ಹುದ್ದೆಗಳು ಮಂಜೂರಾಗಿದ್ದವು. ಆದರೆ, ಸದ್ಯ 15 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 12 ಹುದ್ದೆಗಳು ಭರ್ತಿಯಾಗಬೇಕಿದೆ. ದಾಖಲೆಗಳ ಪ್ರಕಾರ ಬೇಸಿಗೆಯಲ್ಲಿ ತಿಂಗಳಿಗೆ 10ರಿಂದ 12 ಅಗ್ನಿ ಅವಘಡ ಪ್ರಕರಣಗಳು ಹಾಗೂ ಮಳೆಗಾಲದಲ್ಲಿ 8ರಿಂದ 10 ಅತಿವೃಷ್ಟಿ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಅತಿವೃಷ್ಟಿಯಾಗಿ ರಕ್ಷಣಾ ಕರೆಗಳು ಬಂದರೆ ಸ್ಥಳಕ್ಕೆ ತೆರಳಲು ಬೋಟ್​ನ ವ್ಯವಸ್ಥೆಯಿಲ್ಲ. ಇರುವ ಎರಡು ವಾಹನಗಳಲ್ಲಿ ಒಂದು ತೀರಾ ಹಳೆಯದಾಗಿದೆ. ಸಿಬ್ಬಂದಿಗೆ ವಸತಿ ಸೌಕರ್ಯ ಮರೀಚಿಕೆೆಯಾಗಿದೆ. ಕಚೇರಿಯಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಕಚೇರಿಯಿಂದ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದೆ. ಹೀಗಾಗಿ ಹಲವು ಸಮಸ್ಯೆಗಳ ನಡುವೆ ಸಿಬ್ಬಂದಿ ತೊಳಲಾಡುವಂತಾಗಿದೆ.

    ಈ ಮೊದಲು ಅಗ್ನಿ ಆಕಸ್ಮಿಕ ಸಂಭವಿಸಿದರೆ ರಾಣೆಬೆನ್ನೂರು, ಬ್ಯಾಡಗಿ ತಾಲೂಕಿನಿಂದ ಅಗ್ನಿಶಾಮಕ ದಳದವರು ಬರಬೇಕಾಗಿತ್ತು. ಇವು ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕಿನಿಂದ ಬರೋಬ್ಬರಿ 35 ಕಿಮೀ ಅಂತರದಲ್ಲಿವೆ. ಅಲ್ಲಿಂದ ಬರುವಷ್ಟ್ಟಲ್ಲಿ ರೈತರ ಬೆಳೆ, ಮೇವಿನ ಬಣವೆ, ಸಾರ್ವಜನಿಕರ ಮನೆಗಳು ಸಂಪೂರ್ಣ ಸುಟ್ಟು ಹೋಗುತ್ತಿದ್ದವು. ಇದನ್ನರಿತ ಅಂದಿನ ಶಾಸಕ ಹಾಗೂ ಈಗಿನ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಅಗ್ನಿಶಾಮಕ ದಳದ ಕಚೇರಿ ಮಂಜೂರಾತಿ ಪಡೆದು, ಎರಡು ವಾಹನಗಳ ವ್ಯವಸ್ಥೆ ಮಾಡಿದ್ದರು. ಆರಂಭದಲ್ಲಿ ಕಚೇರಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ, ಈಗ ಎರಡೂ ವಾಹನಗಳು ತೀರಾ ಹಳೆಯದಾಗಿದ್ದು, ಸೂಕ್ತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ.

    ರಟ್ಟಿಹಳ್ಳಿ ಹೊಸ ತಾಲೂಕಾಗಿ ಮೂರು ವರ್ಷ ಕಳೆದರೂ ಅಗ್ನಿಶಾಮಕದಳ ಕಚೇರಿ ಕಟ್ಟಡ ನಿರ್ವಣಗೊಂಡಿಲ್ಲ. ಈಗಿರುವ ಹಳೆಯ ವಾಹನ ಹಾಗೂ ಇರುವ ಸಿಬ್ಬಂದಿಯಿಂದಲೇ ಎರಡು ತಾಲೂಕಿನ 128 ಹಳ್ಳಿಗಳು ಸೇರಿದಂತೆ ಹೋಬಳಿ, ಪಟ್ಟಣಗಳಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ನಿರ್ವಣಗೊಂಡಿದೆ.

    ಸಕಾಲಕ್ಕೆ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ತಲುಪುತ್ತಿಲ್ಲ. ಇದರಿಂದ ಬೆಳೆಗಳು, ಮೇವಿನ, ಹೊಟ್ಟಿನ ಬಣವೆ, ಜಾನುವಾರುಗಳು ಸುಟ್ಟು ಕರಕಲಾಗುತ್ತಿವೆ. ಇದನ್ನು ತಪ್ಪಿಸಲು ಈಗಿರುವ ಹಳೆಯ ವಾಹನ ಬದಲಿಸಬೇಕು. ರಟ್ಟಿಹಳ್ಳಿ ತಾಲೂಕಿಗೆ ಹೊಸದಾಗಿ ಅಗ್ನಿಶಾಮಕದಳ ಇಲಾಖೆ ಕಚೇರಿ ಮಂಜೂರು ಮಾಡಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.

    | ರಾಮಣ್ಣ ಕೆಂಚಳ್ಳೇರ, ಜಿಲ್ಲಾ ರೈತ ಸಂಘದ ಅಧ್ಯಕ್ಷ

    ಮಂಜೂರಾತಿ ಹುದ್ದೆಗೆ ತಕ್ಕಂತೆ ಸಿಬ್ಬಂದಿಯಿಲ್ಲ, 12 ಹುದ್ದೆಗಳು ಖಾಲಿ ಇವೆ. ಒಂದು ವಾಹನ ತೀರಾ ಹಳೆಯದಾಗಿದೆ. ವಸತಿ ಗೃಹಗಳಿಗಾಗಿ ಇಲಾಖೆಯ ಪಕ್ಕದಲ್ಲಿ ಸ್ವಂತ 20 ಗುಂಟೆ ಸ್ಥಳವಿದೆ. ಕಚೇರಿಯ ಮೂಲ ಸ್ಥಳದಲ್ಲಿ ಸಿಬ್ಬಂದಿ ಇದ್ದರೆ ಬೇಗನೆ ಘಟನಾ ಸ್ಥಳಗಳಿಗೆ ತೆರಳಲು ಅನುಕೂಲವಾಗುತ್ತದೆ. ರಸ್ತೆ ಕೂಡ ಸಂಪೂರ್ಣ ಹಾಳಾಗಿದ್ದು, ಇದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

    | ಸಂಜು ಭಜಂತ್ರಿ, ಅಗ್ನಿಶಾಮಕದಳದ ಠಾಣಾಧಿಕಾರಿ ಹಿರೇಕೆರೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts