More

    ನಿಯಮ ಪಾಲನೆಗೆ ದಂಡ ಪ್ರಯೋಗ; ಮೂರೇ ದಿನದಲ್ಲಿ 47,500 ರೂ. ದಂಡ ವಸೂಲಿ

    ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಈ ಹಿಂದೆ ಕರೊನಾ ಸೋಂಕಿನ ಪ್ರಕರಣ ಇಳಿಕೆಯಾಗುತ್ತಿದ್ದಂತೆ ಜನರ ನಿರ್ಲಕ್ಷ್ಯಕ್ಕೊಳಪಟ್ಟಿದ್ದ ನಿಯಮಗಳನ್ನು ಈಗ ಎರಡನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಮತ್ತೆ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿದ್ದು ಜಾಗೃತಿ ಹಾಗೂ ದಂಡ ಪ್ರಯೋಗಿಸಲಾಗುತ್ತಿದೆ.

    ಹೊಸ ಮಾರ್ಗಸೂಚಿ ಹೊರಡಿಸಿ, ಸೋಂಕು ನಿಯಂತ್ರಿಸಲು ಸರ್ಕಾರ ಆದೇಶಿಸುತ್ತಿದ್ದಂತೆ ಹಲವು ತಿಂಗಳ ಬಳಿಕ ಪೊಲೀಸರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳು ಮತ್ತೆ ಬೀದಿಗಿಳಿದು, ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಕಳೆದ ಮೂರೇ ದಿನಗಳಲ್ಲಿ ಮಾಸ್ಕ್ ಧರಿಸದ 475 ಪ್ರಕರಣಗಳನ್ನು ದಾಖಲಿಸಿ, ಬರೋಬ್ಬರಿ 47,500 ರೂ. ದಂಡ ವಸೂಲಿ ಮಾಡಿದೆ.

    ಕಳೆದ ಡಿಸೆಂಬರ್​ನಿಂದ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ದಿನನಿತ್ಯ ಚಟುವಟಿಕೆ ಸೇರಿ ನಾನಾ ಕಾರಣಗಳಿಂದ ಕರೊನಾ ನಿಯಮಗಳ ಪಾಲನೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಲಾಗುತ್ತಿದೆ. ಎಪಿಎಂಸಿ ಮಾರುಕಟ್ಟೆ, ಸಂತೆ ಮಾರುಕಟ್ಟೆ, ಅಂಗಡಿ, ಹೋಟೆಲ್, ಬಸ್​ನಿಲ್ದಾಣ ಸೇರಿ ವಿವಿಧೆಡೆ ಸೇರುವ ಶೇ.90 ಜನರು ಮಾಸ್ಕ್ ಮರೆತಿದ್ದಾರೆ. ಎಲೆ ಅಡಕೆ, ಪಾನ್ ಮಸಾಲ, ಗುಟ್ಕಾ ಜಗಿದು ಎಲ್ಲೆಂದರಲ್ಲಿ ಉಗಿಯುವುದು ಸಾಮಾನ್ಯವಾಗಿದೆ.

    ಪರಸ್ಪರ ಅಂತರ ಕಾಪಾಡಿಕೊಳ್ಳುವುದಕ್ಕೆ ತಿಲಾಂಜಲಿ ಹಾಡಿ ತಿಂಗಳುಗಳೇ ಕಳೆದಿವೆ. ಎಲ್ಲೆಡೆ ಜನರ ಗುಂಪು ಗಿಜುಗುಡುವ ದೃಶ್ಯ ಕಂಡು ಬರುತ್ತಿದೆ. ಇತ್ತೀಚೆಗೆ ನಟ ಧ್ರುವ ಸರ್ಜಾ ಬಂದ ಸಂದರ್ಭದಲ್ಲಿ ಕಿಕ್ಕಿರಿದ ಅಭಿಮಾನಿಗಳ ನೂಕು ನುಗ್ಗಲು ಚದುರಿಸಲು ಪೊಲೀಸರು ಲಾಠಿ ಬೀಸಿದ್ದೇ ಒಂದು ನಿದರ್ಶನವಾಗಿದೆ. ಇನ್ನು ಸಭೆ ಸಮಾರಂಭ, ರಾಜಕೀಯ ಕಾರ್ಯಕ್ರಮಗಳಲ್ಲಿ ಮಾರ್ಗಸೂಚಿಗಳನ್ನು ದುರ್ಬಿನ್ ಹಾಕಿ ಹುಡುಕಬೇಕಿದೆ.

    ಎರಡಂಕಿ ದಾಟಿದ ಪ್ರಕರಣಗಳು: ರಾಜ್ಯದಲ್ಲಿ ದಿನಕ್ಕೆ ಹೊಸ ಪ್ರಕರಣಗಳ ಪತ್ತೆ ಪ್ರಮಾಣ ಗರಿಷ್ಠ 2 ಸಾವಿರ ಮುಟ್ಟಿದೆ. ಈ ಸಂಖ್ಯೆ ಮುಂಬರುವ ದಿನಗಳಲ್ಲಿ ಹೆಚ್ಚಾಗುವ ಆತಂಕ ಮೂಡಿಸಿದೆ. ದಿನಕ್ಕೆ 3 ರಿಂದ 4 ಪ್ರಕರಣಗಳಿಗೆ ಸೀಮಿತವಾಗಿದ್ದ ಜಿಲ್ಲೆಯಲ್ಲಿ ಈಗ ಎರಡಂಕಿ ತಲುಪಿದ್ದು ಸರಾಸರಿ 10 ಪ್ರಕರಣಗಳು ದೃಢಪಡುತ್ತಿರುವುದರಿಂದ ಮತ್ತೆ ಪರಿಸ್ಥಿತಿ ಕೈ ಮೀರದಂತೆ ಮುಂಜಾಗ್ರತೆ ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

    ಜಿಲ್ಲಾಡಳಿತ ಎಚ್ಚರಿಕೆ, ಮನವಿ : ಮಾಸ್ಕ್ ಧರಿಸದ, ಪರಸ್ಪರ ಅಂತರ ಕಾಪಾಡಿಕೊಳ್ಳದವರಿಗೆ ನಗರ ಪ್ರದೇಶದಲ್ಲಿ 250 ರೂ. ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 100 ರೂ.ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ, ಹೆಸರು ನೋಂದಾಯಿಸಿಕೊಂಡು ಕರೊನಾ ಲಸಿಕೆ ಹಾಕಿಸಿಕೊಳ್ಳುವುದು, ಲಕ್ಷಣಗಳು ಕಂಡ ಬಂದ ತಕ್ಷಣ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದು, ಅನವಶ್ಯಕ ಓಡಾಟ ಮತ್ತು ಜನಸಂದಣಿಯಿಂದ ದೂರ ಉಳಿಯುವಂತೆ, ನೆರೆ ರಾಜ್ಯಗಳಿಂದ ಬಂದವರ ಕುರಿತು ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವುದು ಸೇರಿ ನಿಯಮಗಳನ್ನು ಪಾಲಿಸಲು ಮನವಿ ಮಾಡಿದೆ.

    ಸರ್ಕಾರದ ಮಾರ್ಗಸೂಚಿ ಅನ್ವಯ ನಿಯಮ ಉಲ್ಲಂಘಿಸುತ್ತಿರುವವರಿಗೆ ದಂಡ ವಿಧಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಿಗಿಗೊಳಿಸಲಾಗುತ್ತದೆ. ಇದಕ್ಕೆ ಅವಕಾಶ ನೀಡದಿರಲು ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಬೇಕು.

    ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಕರೊನಾ ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ.

    ಎಚ್.ಅಮರೇಶ್, ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts