More

    ಚಿತ್ರ ನಿರ್ಮಾಪಕ, ಉದ್ಯಮಿ ಆತ್ಮಹತ್ಯೆ

    ಕುಂದಾಪುರ: ಚಿತ್ರ ನಿರ್ಮಾಪಕ, ವಿತರಕ, ಉದ್ಯಮಿ, ಕುಂದಾಪುರ ತಾಲೂಕು ವಕ್ವಾಡಿ ಮೂಲದ ವಿ.ಕೆ.ಮೋಹನ್‌ಯಾನೆ ಕಪಾಲಿ ಮೋಹನ್(57) ಪೀಣ್ಯದ ತನ್ನ ಫಾರ್ಮ್ ಹೌಸ್‌ನಲ್ಲಿ ಭಾನುವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತಾಯಿ, ಪತ್ನಿ, ಪುತ್ರಿ, ಪುತ್ರ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

    ಡಾ.ರಾಜ್‌ಕುಮಾರ್ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಮೋಹನ್, ರಾಜಕುಮಾರ್ ಕುಟುಂಬದವರನ್ನು ವಕ್ವಾಡಿಗೆ ಕರೆಸಿ ಗೌರವಿಸಿದ್ದರು. ಸಿನಿಮಾ ವಿತರಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಒಂದೂವರೆ ವರ್ಷದ ಹಿಂದೆ ವಿ.ಕೆ ಮೋಹನ್‌ಗೆ ಸೇರಿದ ರಿಕ್ರಿಯೇಶನ್ ಕ್ಲಬ್ ಮೇಲೆ ಐಟಿ ದಾಳಿ ನಡೆದು, ಬಂಧನಕ್ಕೆ ಒಳಗಾಗಿದ್ದರು. ನಂತರ ಮಾನಸಿಕ, ಆರ್ಥಿಕವಾಗಿ ಕುಗ್ಗಿ ಹೋಗಿದ್ದರು. ಅಲ್ಲದೇ ಕೋಟಿಗಟ್ಟಲೆ ಬಂಡವಾಳ ಹಾಕಿದ್ದ ಪೀಣ್ಯ ಬಸ್ ನಿಲ್ದಾಣದ ಹೋಟೆಲ್ ಕೂಡ ಮಂದಗತಿಯಲ್ಲಿ ನಡೆದ ಹಿನ್ನೆಲೆ ಆರ್ಥಿಕವಾಗಿ ಬಹಳಷ್ಟು ಹಿನ್ನಡೆಯಾಗಿತ್ತು. ಇದೇ ನೋವನ್ನು ತನ್ನ ಆತ್ನೀಯರ ಬಳಿ ಮೋಹನ್ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.
    ಭಾನುವಾರ ರಾತ್ರಿ ಫಾರ್ಮ್ ಹೌಸ್‌ಗೆ ಬಂದಿದ್ದ ಮೋಹನ್ ಸೋಮವಾರ ರೂಂ ಬಾಗಿಲು ತೆಗೆಯದೆ ಇದ್ದಾಗ ಅನುಮಾನಗೊಂಡ ಸಿಬ್ಬಂದಿ ಕಿಟಕಿಯಲ್ಲಿ ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

    ಬಡತನದಿಂದ ಬೆಳೆದ ವಿ.ಕೆ: ಬಡತನದಲ್ಲಿ ಬೆಳೆದ ವಿ.ಕೆ.ಮೋಹನ್ ಬಾಲ್ಯದಲ್ಲಿಯೇ ಕುಟುಂಬ ನಿರ್ವಹಣೆಗಾಗಿ ಬೆಂಗಳೂರು ಸೇರಿದರು. ಅಲ್ಲಿ ಹೋಟೆಲ್ ಕೆಲಸದ ಜತೆ ಶ್ರಮವಹಿಸಿ ದುಡಿದು ತನ್ನದೇ ಪುಟ್ಟ ಹೋಟೆಲ್ ಆರಂಭಿಸಿದರು. ಕೆಲವೇ ವರ್ಷದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಹೋಟೆಲ್ ಉದ್ಯಮ ಜತೆಗೆ ಫೈನಾನ್ಸ್ ಹಾಗೂ ಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡು ಕಪಾಲಿ ಮೋಹನ್ ಎಂದೇ ಗುರುತಿಸಿಕೊಂಡಿದ್ದರು. ರಾಜಕುಮಾರ್ ಅಭಿನಯದ ಕೆಲ ಚಿತ್ರಗಳು, ಪುನೀತ್ ರಾಜ್ ಕುಮಾರ್, ಎಸ್.ನಾರಾಯಣ್ ಅಭಿಯನದ ಚಿತ್ರಗಳಲ್ಲಿ ನಟಿಸಿದ್ದರು. ತನ್ನೂರಿನಲ್ಲಿ ನಡೆಯುವ ಜಾತ್ರೆ ಮೊದಲಾದ ಕಾರ್ಯಕ್ರಮಗಳಿಗೆ ಸಿನಿಮಾ ತಾರೆಯರನ್ನು ಕರೆಸುತ್ತಿದ್ದರು. ಸುಮಾರು 15 ವರ್ಷಗಳ ಹಿಂದೆ ವಕ್ವಾಡಿಗೆ ಡಾ.ರಾಜಕುಮಾರ್ ಆಗಮಿಸಿದ್ದು ಇತಿಹಾಸವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts