More

    ಕ್ರಿಕೆಟ್ ಅದೃಷ್ಟದಾಟದ ಹೋರಾಟಗಾರ ವಿನಯಕುಮಾರ್

    ಕ್ರಿಕೆಟ್ ಅದೃಷ್ಟದಾಟದ ಹೋರಾಟಗಾರ ವಿನಯಕುಮಾರ್ಪ್ರದರ್ಶನ ಮಟ್ಟ ಹೆಚ್ಚಿಸಿಕೊಳ್ಳುತ್ತಲೇ ಇದ್ದರೂ, 2013ರ ಬಳಿಕ ಭಾರತ ತಂಡದ ಬಾಗಿಲು ಅವರಿಗೆ ಮತ್ತೆ ತೆರೆಯಲಿಲ್ಲ. ಐಪಿಎಲ್​ನಲ್ಲೂ ಅದೃಷ್ಟ ಕೈಹಿಡಿಯಲಿಲ್ಲ. ಕ್ರಿಕೆಟ್ ಆಟವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಆಟಗಾರನ ನೈಪುಣ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ್ಯರೀತಿಯಲ್ಲಿ ಸದ್ಬಳಕೆಯಾಗಲಿಲ್ಲ ಎಂಬ ಕೊರಗು ಮಾತ್ರ ಕೊನೆಯವರೆಗೂ ಉಳಿಯುವಂಥದ್ದೇ.

    ಏನಾಗಲಿ ಮುಂದೆ ಸಾಗು ನೀ,

    ಬಯಸಿದ್ದೆಲ್ಲ ಸಿಗದು ಬಾಳಲಿ…

    ಜೀವನವೆಂದರೇ ಹಾಗೆ. ಆಸೆಪಟ್ಟಿದ್ದೆಲ್ಲ ಸಿಗುವುದಿಲ್ಲ, ಕನಸು ಕಂಡಿದ್ದೆಲ್ಲ ಕೈಗೆಟುಕುವುದಿಲ್ಲ. ಆದರೆ, ವಿಧಿಯ ನಿರ್ಣಯದಲ್ಲೂ ಒಂದು ನ್ಯಾಯವಿರುತ್ತದೆ. ಎಲ್ಲೋ ಕಳೆದಿದ್ದನ್ನು ಇನ್ನೆಲ್ಲೋ ಕೊಡಿಸುವ, ಎಲ್ಲೋ ಸಿಗದೇ ಇರುವುದನ್ನು ಇನ್ನೊಂದು ರೂಪದಲ್ಲಿ ಕೊಡಿಸುವ ಸಮತೋಲನವಿರುತ್ತದೆ.

    ದಾವಣಗೆರೆ ಬೆಣ್ಣೆ ದೋಸೆಗೆ ಫೇಮಸ್. ಈ ಹುಡುಗನದು ಸಹ ಬೆಣ್ಣೆಯಂಥ ವ್ಯಕ್ತಿತ್ವವೇ. ಮೃದು, ಸಜ್ಜನ, ವಿನಯವಂತ. ಹೆಸರಿಗೆ ಅನ್ವರ್ಥವಾಗಿ ಬೆಳೆದವರು, ಬದುಕುತ್ತಿರುವವರು ‘ದಾವಣಗೆರೆ ಎಕ್ಸ್​ಪ್ರೆಸ್’ ಆರ್. ವಿನಯ್ಕುಮಾರ್. ಯಾವುದೇ ಗಮನಾರ್ಹ ಸಾಧನೆ ಮಾಡದಿದ್ದರೂ ಪೊಗರು ತೋರಿಸುವ ಅನೇಕ ಕ್ರಿಕೆಟಿಗರ ಎದುರು, ಅನೇಕ ಅದ್ವಿತೀಯ ಸಾಧನೆಗೈದಿದ್ದರೂ, ಹಮ್ಮು-ಬಿಮ್ಮಿಲ್ಲದೆ ಅದೇ ಸ್ನೇಹ-ವಿಶ್ವಾಸ, ಡೌನ್ ಟು ಅರ್ಥ್ ಸರಳವಂತಿಕೆ ಬಿಟ್ಟುಕೊಡದೆ ಅಪರೂಪದಲ್ಲಿ ಅಪರೂಪವಾಗಿರುವವರು ನಮ್ಮ ವಿನಯ್ಕುಮಾರ್. ಮೊನ್ನೆ ಅವರು 37ನೇ ವಯಸ್ಸಿಗೇ ಕ್ರಿಕೆಟ್ ಬೂಟು ಕಳಚಿ ನನ್ನ ಆಟ ಮುಗಿಯಿತೆಂದಾಗ ಅಂತಃಕರಣ ಚುರುಕ್ ಎಂದಿದ್ದು ನಿಜ.

    ಕ್ರಿಕೆಟಿಗನಾಗಿ ವಿನಯ್ಕುಮಾರ್ ವಿಶಿಷ್ಟ ಸಾಧಕ. ನಿಜ, ಭಾರತ ತಂಡವನ್ನು ಪ್ರತಿನಿಧಿಸಿ ಅಂದುಕೊಂಡ ಎತ್ತರಕ್ಕೇರುವುದು ಅವರಿಗೆ ಸಾಧ್ಯವಾಗಲಿಲ್ಲ. ಅವರು ಆಡಿದ್ದು ಏಕೈಕ ಟೆಸ್ಟ್. 31 ಏಕದಿನ, 9 ಟಿ20 ಪಂದ್ಯಗಳು ಮಾತ್ರ. ಆ ಅಷ್ಟೂ ಪಂದ್ಯಗಳಲ್ಲಿ ವಿನಯ್ರ ನೈಜ ಸಾಮರ್ಥ್ಯ ಅನಾವರಣಗೊಳ್ಳುವಂಥ ಅವಕಾಶ, ಸನ್ನಿವೇಶ ಒದಗಲೇ ಇಲ್ಲ. ಎಲ್ಲ ಕ್ಷೇತ್ರಗಳಂತೆ ಕ್ರಿಕೆಟ್​ನಲ್ಲೂ ಕೆಲವರು ಅದೃಷ್ಟವಂತರು, ಕೆಲವು ನತದೃಷ್ಟರು ಇರುತ್ತಾರೆ. ಕೆಲವರ ಪಾಲಿಗೆ ಅನಿರೀಕ್ಷಿತವಾಗಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಇನ್ನು ಕೆಲವರ ಪಾಲಿಗೆ ಆಟ ಕೈಕೊಟ್ಟರೂ, ಅದೃಷ್ಟ ಕೈಕೊಡುವುದೇ ಇಲ್ಲ. ಏಕೆಂದರೆ, ಪದೇಪದೆ ಅವಕಾಶಗಳು ಅವರಿಗೆ ಸಿಗುತ್ತಲೇ ಇರುತ್ತವೆ. ಆದರೆ, ವಿನಯ್ ಪಾಲಿಗೆ ಭಾರತ ತಂಡದಲ್ಲಿ ಅಂಥ ಅದೃಷ್ಟ ಸಿಗಲಿಲ್ಲ. ಅವರು ಆಡಿದ್ದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ನಲ್ಲಿ ಏಕೈಕ ಟೆಸ್ಟ್ ಪಂದ್ಯ. ಆಗ ಅವರು ಆರ್. ಅಶ್ವಿನ್ ಬದಲಿಗೆ ತಂಡದಲ್ಲಿ 4ನೇ ವೇಗದ ಬೌಲರ್ ರೂಪದಲ್ಲಿ ಅವಕಾಶ ಪಡೆದಿದ್ದರು. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಡಿದ ಏಕೈಕ ಇನಿಂಗ್ಸ್​ನಲ್ಲಿ ವಿನಯ್ಗೆ ಕೆಲವೇ ಓವರ್ ಬೌಲಿಂಗ್ ಮಾಡುವ ಅವಕಾಶ ದೊರೆತಿತ್ತು. ಅಷ್ಟೇ ಅವಕಾಶದಲ್ಲಿ ಅವರು ಮೈಕ್ ಹಸ್ಸಿ ವಿಕೆಟ್ ಕಬಳಿಸಿದ್ದರು. ಆದರೆ, ಸಾಕಷ್ಟು ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಮತ್ತೆಂದೂ ಅವರಿಗೆ ಟೆಸ್ಟ್ ಗಳಲ್ಲಿ ಆಡುವ ಅವಕಾಶ ಲಭಿಸಲೇ ಇಲ್ಲ. ಏಕದಿನ ಮತ್ತು ಟಿ20 ಮಾದರಿಯಲ್ಲೂ ಅವರಿಗೆ ನೆಲೆಯೂರುವ ಅವಕಾಶ, ಅದೃಷ್ಟ ಸಿಗಲೇ ಇಲ್ಲ. ಶಿಸ್ತು, ನಿಖರತೆ, ವಿಕೆಟ್ ಕಬಳಿಸುವ ಕೌಶಲಕ್ಕಿಂತ ವೇಗವಾಗಿ ಚೆಂಡು ಎಸೆಯುವುದೇ ಮುಖ್ಯ ಎಂಬ ಮನೋಭೂಮಿಕೆಯ ಪೈಪೋಟಿಯಲ್ಲಿ ವಿನಯ್ ಹಿಂದೆ ಬಿದ್ದರು.

    ಜನ ವಿನಯ್ರನ್ನು ಗುರುತಿಸುವುದು ದಾವಣಗೆರೆ ಎಕ್ಸ್​ಪ್ರೆಸ್ ಎಂದು. ಆದರೆ, ವಾಸ್ತವದಲ್ಲಿ ಎಕ್ಸ್​ಪ್ರೆಸ್ ವೇಗದಲ್ಲಿ ಚೆಂಡೆಸೆಯುವುದಕ್ಕಿಂತ ನಿಖರತೆಗೆ ಹೆಚ್ಚಿನ ಒತ್ತು ಕೊಟ್ಟ ಬೌಲರ್ ಅವರಾಗಿದ್ದರು. ಶರವೇಗದ ಎಸೆತಗಳು, ಯಾರ್ಕರ್, ಬೀಮರ್, ಬೌನ್ಸರ್​ಗಳಿಗಿಂತ ಲೆಗ್ ಕಟರ್​ಗಳು, ಮಂದಗತಿ ಎಸೆತಗಳು ಮತ್ತು ಬ್ಯಾಟ್ಸ್ ಮನ್​ಗಳ ತಂತ್ರಗಾರಿಕೆಯನ್ನು ಕೆಣಕುವ ನಿಖರ ಎಸೆತಗಳು ಅವರ ಯಶಸ್ಸಿನ ಅಸ್ತ್ರಗಳಾಗಿದ್ದವು. ವಿಕೆಟ್​ನ ಎರಡೂ ಬದಿಯಲ್ಲಿ ಚೆಂಡನ್ನು ಸ್ವಿಂಗ್ ಮಾಡುವುದನ್ನು ಕರಗತ ಮಾಡಿಕೊಂಡಿದ್ದರು. ಆದರೆ, ಅವರು ಆಡುತ್ತಿದ್ದ ಕಾಲಘಟ್ಟದಲ್ಲಿ ಸಮಕಾಲೀನರ ಪೈಪೋಟಿಯ ನಡುವೆ ವಿನಯ್ಗೆ ತಕ್ಕಷ್ಟು ಅವಕಾಶಗಳು ಸಿಗಲಿಲ್ಲ.

    ಕರ್ನಾಟಕದ ಶ್ರೇಷ್ಠ ಕ್ರಿಕೆಟಿಗರನ್ನು ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಹತ್ತಾರು ದಿಗ್ಗಜರ ಹೆಸರುಗಳು ಮುಂಚಿತವಾಗಿ ನೆನಪಿಗೆ ಬರುತ್ತವೆ. ಶಫಿ ದಾರಾಶಾರಿಂದ ಇತ್ತೀಚಿನ ಕೆ.ಎಲ್. ರಾಹುಲ್​ವರೆಗೆ ಕರ್ನಾಟಕ ಕ್ರಿಕೆಟ್​ಗೆ ಘನತೆ ತಂದ ಆಟಗಾರರು ಅಪಾರ. ಬೇರೆಬೇರೆ ರೂಪದಲ್ಲಿ ಕರ್ನಾಟಕ ಕ್ರಿಕೆಟ್ ಹೆಸರು ಚಿರಸ್ಥಾಯಿಗೊಳಿಸಿದ ನೂರಾರು ಕ್ರಿಕೆಟಿಗರಿದ್ದರೂ, ಈವರೆಗೆ ರಣಜಿ ಯಶಸ್ಸಿನ ವಿಚಾರಕ್ಕೆ ಬಂದಾಗ ರಾಜ್ಯ ತಂಡ ಚಾಂಪಿಯನ್ ಪಟ್ಟಕ್ಕೇರಿರುವುದು 8 ಬಾರಿ ಮಾತ್ರ. ಆ ಪೈಕಿ ಇಎಎಸ್ ಪ್ರಸನ್ನ ಎರಡು ಬಾರಿ ತಂಡದ ನಾಯಕರಾಗಿ ಪ್ರಶಸ್ತಿ ಕೊಡಿಸಿದ್ದರೆ, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಜೋಶಿ ನಾಯಕತ್ವದಲ್ಲಿ ಕರ್ನಾಟಕ ತಲಾ ಒಮ್ಮೆ ರಣಜಿ ಪ್ರಶಸ್ತಿ ಗೆದ್ದಿದೆ. ಆದರೆ, ಈವರೆಗಿನ ಇತಿಹಾಸದಲ್ಲಿ ಕರ್ನಾಟಕ ತಂಡದ ಅತ್ಯಂತ ಯಶಸ್ವಿ ನಾಯಕ ರಂಗನಾಥ್ ವಿನಯ್ಕುಮಾರ್ ಎಂದರೆ ನಂಬಲೇಬೇಕು. ಹೌದು, 1998-99ರಲ್ಲಿ ಸುನಿಲ್ ಜೋಷಿ ನಾಯಕತ್ವದಲ್ಲಿ ರಣಜಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಸತತ 15 ವರ್ಷ ದೇಶಿ ಕ್ರಿಕೆಟ್​ನಲ್ಲಿ ಟ್ರೋಫಿ ಬರ ಅನುಭವಿಸಿದ್ದ ಕರ್ನಾಟಕಕ್ಕೆ ಗೆಲುವಿನ ಟಾನಿಕ್ ಕುಡಿಸಿದವರು ವಿನಯ್ಕುಮಾರ್. 2009-10ರಲ್ಲಿ ರಾಬಿನ್ ಉತ್ತಪ್ಪ ನಾಯಕತ್ವದಲ್ಲಿ ಟೂರ್ನಿಯುದ್ದಕ್ಕೂ ಅಜೇಯ ಸಾಧನೆ ಮಾಡಿದ್ದ ಕರ್ನಾಟಕ ಮೈಸೂರಿನಲ್ಲಿ ನಡೆದ ಫೈನಲ್​ನಲ್ಲಿ ಕೇವಲ 6 ರನ್​ಗಳಿಂದ ಮುಗ್ಗರಿಸಿ ಪ್ರಶಸ್ತಿಯಿಂದ ವಂಚಿತವಾಗಿತ್ತು. ಆ ಋತುವಿನಲ್ಲಿ ಅತ್ಯಧಿಕ 46 ವಿಕೆಟ್ ಕಬಳಿಸಿದ್ದ ವಿನಯ್, 2013-14ರಲ್ಲಿ ತಾವೇ ನಾಯಕರಾಗುವ ಅವಕಾಶ ದೊರೆತಾಗ ಸುದೀರ್ಘ ಕಾಲದ ಬರಗಾಲದಿಂದ ತಂಡವನ್ನು ಯಶಸ್ಸಿನೆಡೆಗೆ ಮುನ್ನಡೆಸಿದರು. ಅದಷ್ಟೇ ಆಗಿದ್ದರೆ, ಏನೋ ಅದೃಷ್ಟ ಎಂದು ಮರೆತುಬಿಡಬಹುದಿತ್ತು. ಆದರೆ, ಹಾಗಾಗಲಿಲ್ಲ. 2013-14 ಮತ್ತು 2014-15ರ ಸತತ ಎರಡು ಋತುಗಳಲ್ಲಿ ಕರ್ನಾಟಕ ದೇಶಿ ಕ್ರಿಕೆಟ್​ನ ಸಾಮ್ರಾಟನಾಗಿ ಮೆರೆಯಿತು. ಸತತವಾಗಿ ಎರಡು ವರ್ಷ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಇರಾನಿ ಟ್ರೋಫಿ ಗೆದ್ದು ದೇಶಿ ಕ್ರಿಕೆಟ್ ಇತಿಹಾಸದಲ್ಲೇ ಬೇರಾವುದೇ ತಂಡ ಮಾಡಿರದ ಡಬಲ್ ಹ್ಯಾಟ್ರಿಕ್ ಸಾಧನೆಗೆ ವಿನಯ್ ನಾಯಕರಾಗಿ ಮುನ್ನುಡಿ ಬರೆದರು.

    ಸ್ವಭಾವತಃ ವಿನಯ್ ಓರ್ವ ಹೋರಾಟಗಾರ. ಓರ್ವ ಬೌಲರ್ ಆಗಿ ಹಾಗೂ ನಾಯಕನಾಗಿ ಎಂಥ ಸನ್ನಿವೇಶದಲ್ಲೂ ಹೋರಾಟ ಕೈಚೆಲ್ಲಬಾರದು ಎಂದು ನಂಬಿದ್ದವರು. ಇಂಥ ಹೋರಾಟದ ಗುಣದಿಂದಲೇ ಅವರು ಕರ್ನಾಟಕವನ್ನು ಅನೇಕ ಬಾರಿ ಸೋಲಿನ ದವಡೆಯಿಂದ ಪಾರುಮಾಡಿದ್ದರು. ಮುಂಬೈ, ತಮಿಳುನಾಡು, ಬಂಗಾಳ, ಸೌರಾಷ್ಟ್ರದ ಪ್ರಥಮ ದರ್ಜೆ ಕ್ರಿಕೆಟಿಗರು ಈಗಲೂ ವಿನಯ್ರ ಸಾಹಸಿಕ ಬೌಲಿಂಗ್ ಪ್ರದರ್ಶನವನ್ನು ನೆನೆಸಿಕೊಳ್ಳುವುದು ಇದೇ ಕಾರಣಕ್ಕೆ. ಕರ್ನಾಟಕದ ವಿರುದ್ಧ ಸೋಲುವುದು ಅವಮಾನವೇನಲ್ಲ ಎಂದು ಹಿಂದೆ ತಮಿಳುನಾಡಿನ ನಾಯಕರಾಗಿದ್ದ ಅಭಿನವ್ ಮುಕುಂದ್ ಹೇಳಿದ್ದೂ ಇಂಥದ್ದೇ ಕಾರಣಕ್ಕೆ. ತಂಡ ಸಂಕಷ್ಟದ ಸ್ಥಿತಿಯಲ್ಲಿರುವಾಗ ವಿನಯ್ ಪವಾಡಪುರುಷರಂತೆ 5, 6, 8 ವಿಕೆಟ್ ಗೊಂಚಲು ಕಬಳಿಸಿ ತಂಡವನ್ನು ಮುನ್ನೆಲೆಗೆ ತಂದು ನಿಲ್ಲಿಸಿಬಿಡುತ್ತಿದ್ದರು. ನಾಯಕರಾಗಿಯೂ ಅಷ್ಟೇ. ಸ್ವತಃ ವಿಕೆಟ್ ಕಬಳಿಕೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದರೂ, ಯಾವತ್ತೂ ಸ್ವಾರ್ಥಿಯಾಗದೆ ಸಹ-ಬೌಲರ್​ಗಳನ್ನೂ ಉತ್ತೇಜಿಸುತ್ತಿದ್ದರು. ಅಭಿಮನ್ಯು ಮಿಥುನ್, ಅರವಿಂದ್​ರಂಥ ವೇಗದ ಬೌಲರ್​ಗಳು, ಕರುಣ್ ನಾಯರ್, ಕೆ.ಎಲ್. ರಾಹುಲ್​ರಂಥ ಅನೇಕ ಬ್ಯಾಟ್ಸ್​ಮನ್​ಗಳು ಪ್ರವರ್ಧಮಾನಕ್ಕೆ ಬಂದಿದ್ದು ವಿನಯ್ ನಾಯಕತ್ವದಲ್ಲೇ. ಎದುರಾಳಿ ತಂಡಗಳ ದೌರ್ಬಲ್ಯ ಅರಿತು ಅದಕ್ಕೆ ತಕ್ಕಂತೆ ರಣತಂತ್ರ ರಚಿಸುವುದರಲ್ಲಿ, ಪರಿಪೂರ್ಣವಾಗಿ ಕಾರ್ಯರೂಪಕ್ಕೆ ತರುವುದರಲ್ಲಿ ಅವರು ನಿಸ್ಸೀಮರೆನಿಸಿದ್ದರು.

    ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 900ಕ್ಕೂ ಅಧಿಕ ವಿಕೆಟ್, 5000ಕ್ಕೂ ಅಧಿಕ ರನ್ ಗಳಿಸಿದ ವಿರಳ ಆಲ್ರೌಂಡರ್​ಗಳಲ್ಲಿ ಓರ್ವರಾಗಿರುವ ವಿನಯ್, ರಣಜಿ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ವಿಕೆಟ್ (442) ಕಬಳಿಸಿರುವ ವೇಗದ ಬೌಲರ್. ವರ್ಷದಿಂದ ವರ್ಷಕ್ಕೆ ಪ್ರದರ್ಶನ ಮಟ್ಟ ಹೆಚ್ಚಿಸಿಕೊಳ್ಳುತ್ತಲೇ ಇದ್ದರೂ, 2013ರ ಬಳಿಕ ಭಾರತ ತಂಡದ ಬಾಗಿಲು ಅವರಿಗೆ ಮತ್ತೆ ತೆರೆಯಲೇ ಇಲ್ಲ. ಐಪಿಎಲ್​ನಲ್ಲೂ ಅಷ್ಟೇ. ಹೊಡಿಬಡಿ ಕ್ರಿಕೆಟ್​ನ ಥಳಕುಬಳಕಿನಲ್ಲಿ ವಿನಯ್ಗೆ ಅದೃಷ್ಟ ಕೈಹಿಡಿಯಲೇ ಇಲ್ಲ. ಅವರ ಹಲವು ಉತ್ತಮ ಪ್ರದರ್ಶನಗಳಿಗಿಂತ ಕೆಲವು ವೈಫಲ್ಯಗಳೇ ದೊಡ್ಡದಾಗಿ ಬಿಂಬಿತವಾದವು. ಅದರಲ್ಲೂ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧದ ಒಂದು ಓವರ್ ವೈಫಲ್ಯ ಅವರ ಐಪಿಎಲ್ ವೃತ್ತಿಜೀವನಕ್ಕೇ ಮಾರಕವಾಯಿತು. ಕ್ರಿಕೆಟ್ ಆಟವನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಆಟಗಾರನ ನೈಪುಣ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಐಪಿಎಲ್​ನಲ್ಲಿ ಯೋಗ್ಯರೀತಿಯಲ್ಲಿ ಸದ್ಬಳಕೆಯಾಗಲಿಲ್ಲ ಎಂಬ ಕೊರಗು ಮಾತ್ರ ಕೊನೆಯವರೆಗೂ ಉಳಿಯುವಂಥದ್ದೇ.

    ಇಲ್ಲಿ ಒಂದು ಸಂಗತಿಯೆಂದರೆ, ವಿನಯ್ ತಾವು ತಂಡವೊಂದರ ನಾಯಕರಾಗಿ ಸಹ-ಆಟಗಾರರ ಮೇಲಿಟ್ಟ ವಿಶ್ವಾಸವನ್ನು, ತುಂಬಿದ ಸ್ಪೂರ್ತಿಯನ್ನು, ಹೊರಸೆಳೆದ ಕೆಚ್ಚಿನ ಆಟವನ್ನು, ತಮ್ಮ ನಾಯಕರಿಂದ ಪಡೆದುಕೊಳ್ಳಲಿಲ್ಲ. ಹತ್ತು ಪಂದ್ಯದಲ್ಲಿ ಸತತ ವಿಫಲನಾದರೂ ಚಿಂತೆಯಿಲ್ಲ, ಹನ್ನೊಂದನೇ ಪಂದ್ಯದಲ್ಲಿ ಆಡಿಸುತ್ತೇನೆ. ನಿನ್ನ ಸಹಜ ಆಟವನ್ನೇ ಆಡು ಎಂದು ಗಂಗೂಲಿ ನಾಯಕರಾಗಿ ವಿಶ್ವಾಸ ತುಂಬಿದ್ದು ಸೆಹ್ವಾಗ್, ಯುವರಾಜ್, ಜಹೀರ್ ಖಾನ್​ರಂಥ ಸಮರ್ಥರ ಪ್ರವರ್ಧಮಾನಕ್ಕೆ ಕಾರಣವಾಯಿತು. ಕೊಹ್ಲಿಯ ವರ್ತಮಾನದ ವಿರಾಟ್ ಯಶಸ್ಸಿಗೆ ಅವರ ಆರಂಭಿಕ ದಿನಗಳಲ್ಲಿ ನಾಯಕ ಎಂಎಸ್ ಧೋನಿ ಇಟ್ಟ ವಿಶ್ವಾಸ, ಕೊಟ್ಟ ಪ್ರೋತ್ಸಾಹವೇ ಕಾರಣ ಎಂಬುದೂ ಎಲ್ಲರಿಗೂ ತಿಳಿದಿದೆ. ಅದೇ ರೀತಿ, ಈ ಪಂದ್ಯವೇ ನಿನಗೆ ಕೊನೆಯ ಅವಕಾಶ, ವಿಫಲವಾದರೆ, ಗಂಟುಮೂಟೆ ಕಟ್ಟಿ ಹೊರಡು ಎಂದು ದಿಖ್ತಾತ್ ಮಾಡಿ ಆಟಗಾರರನ್ನು ಅಭದ್ರತೆಯ ಸುಳಿಯಲ್ಲಿ ಸಿಲುಕಿಸುವ ನಾಯಕರನ್ನೂ ಭಾರತೀಯ ಕ್ರಿಕೆಟ್ ಕಂಡಿದೆ. ಬಹುಶಃ ದೈವದತ್ತ ಪ್ರತಿಭೆಯಲ್ಲದ, ಪ್ರಯತ್ನ, ಪರಿಶ್ರಮ, ಹೋರಾಟದಿಂದ ಭಾರತ ತಂಡದೊಳಕ್ಕೆ ಪ್ರವೇಶ ಪಡೆದಿದ್ದ ವಿನಯ್ಗೆ ಇನ್ನೊಂದಿಷ್ಟು ಪ್ರೋತ್ಸಾಹ, ಬೆಂಬಲ ದೊರಕಿದ್ದರೆ, ಹೆಚ್ಚಿನ ಅಂತಾರಾಷ್ಟ್ರೀಯ ಸಾಧನೆ ನಿರೀಕ್ಷಿಸಬಹುದಿತ್ತೇನೋ.

    ಮೊದಲೇ ಹೇಳಿದಂತೆ, ವಿಧಿ ವಿನಯ್ ಜೀವನದಲ್ಲಿ ಒಂದು ಕಡೆ ಆದ ಅನ್ಯಾಯಕ್ಕೆ ಇನ್ನೊಂದು ಕಡೆ ನ್ಯಾಯ ಒದಗಿಸುವ ಸಮತೋಲನವನ್ನಂತೂ ತೋರಿದೆ. ಬಡತನ, ಕಷ್ಟದ ಬದುಕಿನ ಸವಾಲುಗಳನ್ನೇ ಮೆಟ್ಟಿಲಾಗಿಸಿಕೊಂಡು ಸಾಧನೆಯ ಶಿಖರಕ್ಕೇರಿರುವ ವಿನಯ್ ವೃತ್ತಿಜೀವನದ 2ನೇ ಇನಿಂಗ್ಸ್​ನಲ್ಲಿ ದೊಡ್ಡ ಯಶಸ್ಸು ಕಾಣಲಿ. ಶಿಸ್ತು, ಪ್ರಯತ್ನ, ಪರಿಶ್ರಮದಿಂದ ಏನೆಲ್ಲ ಸಾಧಿಸಬಹುದೆಂಬುದಕ್ಕೆ ಸ್ವತಃ ಉದಾಹರಣೆಯಾಗಿರುವ ವಿನಯ್ ವೃತ್ತಿಬದುಕಿನ 2ನೇ ಇನಿಂಗ್ಸ್​ನಲ್ಲಿ ಹೊಸ ರೂಪ, ಹೊಸ ರೀತಿಯಲ್ಲಿ ಭಾರತೀಯ ಕ್ರಿಕೆಟ್​ಗೆ ಕೊಡುಗೆ ಸಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅದೃಷ್ಟ ಸ್ವಲ್ಪ ಕೈಹಿಡಿಯಬೇಕಷ್ಟೇ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts