More

    ಶೇ.36ಕ್ಕೂ ಅಧಿಕ ರಸಗೊಬ್ಬರ ಮಾರಾಟ

    ಬಂಟ್ವಾಳ: ಕರೊನಾ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕೆಲಸಗಳು ಸ್ಥಗಿತಗೊಂಡಿದ್ದರೆ, ಕೃಷಿ ಕ್ಷೇತ್ರ ಮಾತ್ರ ಸಕ್ರಿಯವಾಗಿತ್ತು. ಎಂದಿಗಿಂತ ಶೇ.36ಕ್ಕೂ ಅಧಿಕ ಪ್ರಮಾಣದಲ್ಲಿ ರಸಗೊಬ್ಬರ ಮಾರಾಟವಾಗಿದ್ದು, ನಗದು ರಹಿತ ವ್ಯವಸ್ಥೆ ಮೂಲಕ ರಾಸಾಯನಿಕ ಗೊಬ್ಬರ ಖರೀದಿಗೂ ಅವಕಾಶ ಮಾಡಿಕೊಡಲಾಗಿತ್ತು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

    ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಮಧುಕರ ಸಭಾಂಗಣದಲ್ಲಿ ಶನಿವಾರ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಬೆಂಗಳೂರು, ಸದಾಸ್ಮಿತ ಫೌಂಡೇಶನ್ ಆಶ್ರಯದಲ್ಲಿ ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ 30 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.

    ಇಫ್ಕೋ ಸಂಸ್ಥೆಯಿಂದ ರಾಸಾಯನಿಕ ಗೊಬ್ಬರದ ಬದಲಾಗಿ ಸಾವಯವ ಹಾಗೂ ನ್ಯಾನೋ ಫರ್ಟಿಲೈಸರ್ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿದ್ದು, ದೇಶದಲ್ಲಿ 13 ಸಾವಿರ ರೈತರಿಗೆ ಪ್ರಾಯೋಗಿಕವಾಗಿ ನ್ಯಾನೋ ಫರ್ಟಿಲೈಸರ್ ವಿತರಿಸಲಾಗಿದೆ. ಇದರಿಂದಾಗಿ ಉತ್ಪಾದನೆ ಶೇ.18ರಷ್ಟು ಹೆಚ್ಚಾಗಿ, ಶೇ.20ರಷ್ಟು ಉತ್ಪಾದನಾ ವೆಚ್ಚ ಕಡಿಮೆಯಾಗಿದೆ ಎಂದರು.

    ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ, ಇಫ್ಕೋ ನಿರ್ದೇಶಕ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಶಾಸಕರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಕೆ.ಶ್ರೀನಿವಾಸ ಗೌಡ, ಬೆಂಗಳೂರಿನ ಸದಾಸ್ಮಿತ ಫೌಂಡೇಶನ್ ಅಧ್ಯಕ್ಷ ಡಾ.ಶಿವರಾಮ್, ಕಾರ್ಯದರ್ಶಿ ಅನಿತಾ ಮಂಜುನಾಥ, ಇಫ್ಕೋ ಮಂಗಳೂರು ಕ್ಷೇತ್ರಾಧಿಕಾರಿ ಸಂಗಮೇಶ್ ಎಂ.ಬಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ವಸಂತ ಮಾಧವ ಉಪಸ್ಥಿತರಿದ್ದರು.

    ಇಫ್ಕೋ ಕರ್ನಾಟಕ ರಾಜ್ಯ ಮಾರಾಟ ವ್ಯವಸ್ಥಾಪಕ ಡಾ.ಸಿ.ನಾರಾಯಣ ಸ್ವಾಮಿ ಪ್ರಸ್ತಾವನೆಗೈದರು. ಪದವಿ ವಿಭಾಗದ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರಕಟ್ಟೆ ಸ್ವಾಗತಿಸಿದರು. ಉಪನ್ಯಾಸಕಿಯರಾದ ವಿದ್ಯಾ ವಂದಿಸಿ, ಕವಿತಾ ಕಾರ್ಯಕ್ರಮ ನಿರ್ವಹಿಸಿದರು.

    ಯತ್ನಾಳ್ ನಡವಳಿಕೆ ಶೋಭೆಯಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡವಳಿಕೆ, ನಾಯಕರ ಕುರಿತು ಹೇಳಿಕೆಗಳು ಬಿಜೆಪಿಗೆ ಗೌರವ ತರುವಂಥದ್ದಲ್ಲ. ಬೇರೆ ಪಕ್ಷದ ಶಾಸಕನಂತೆ ನಮ್ಮವರು ಮಾತನಾಡಿದರೆ ಅರ್ಥವಿಲ್ಲ ಎಂದು ಸದಾನಂದಗೌಡ ಹೇಳಿದರು. ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಯತ್ನಾಳ್ ಅರ್ಥ ಮಾಡಿಕೊಂಡು ಬದಲಾಗಬೇಕಿತ್ತು. ಶಿಸ್ತುಬದ್ಧ ಪಕ್ಷದ ಶಿಸ್ತಿನ ಕಾರ್ಯಕರ್ತರಾಗಿ ಕೆಲಸ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ನಾನು ರಾಜ್ಯಾಧ್ಯಕ್ಷನಾಗಿರುವ ವೇಳೆಯೂ ಅವರು ಇದೇ ರೀತಿ ಮಾತನಾಡಿದ್ದರು. 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ, ಬಳಿಕ ಸರಿ ಹೋಗುತ್ತಾರೆ ಎಂದು ಸೇರಿಸಿಕೊಳ್ಳಲಾಯಿತು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.

    ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಡಿಟಿಜಲೀಕರಣಕ್ಕೆ ಅಗತ್ಯ ನೆರವು ನೀಡಲು ಬದ್ಧವಾಗಿದ್ದು, ಶ್ರೀರಾಮ ವಿದ್ಯಾಕೇಂದ್ರದ ಪದವಿ ವಿಭಾಗದ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ವಿತರಣೆಗೆ ಇಫ್ಕೋ ಹಾಗೂ ಸದಾಸ್ಮಿತ ಫೌಂಡೇಶನ್ ಮೂಲಕ ಶೀಘ್ರ ಯೋಜನೆ ರೂಪಿಸಲಾಗುವುದು.
    – ಡಿ.ವಿ.ಸದಾನಂದ ಗೌಡ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts