More

    ಸಹಕಾರಿ ಸಂಘದಿಂದಲೇ ಗೊಬ್ಬರ ವಿತರಣೆಯಾಗಲಿ

    ಹಾವೇರಿ: ಜಿಲ್ಲೆಯಲ್ಲಿ ವಿಶೇಷ ಅಭಿಯಾನದ ಮೂಲಕ ಪ್ರಾಥಮಿಕ ಸಹಕಾರಿ ಸಂಘಗಳನ್ನು ಬಲಪಡಿಸಬೇಕು. ಸಹಕಾರಿ ಸಂಘಗಳ ಮೂಲಕವೇ ಗೊಬ್ಬರ ವಿತರಣೆಗೆ ಆದ್ಯತೆ ನೀಡಬೇಕು ಎಂದು ಕೃಷಿ ಮತ್ತು ಸಹಕಾರಿ ಇಲಾಖೆ ಅಧಿಕಾರಿಗಳಿಗೆ ಗೃಹ, ಕಾನೂನು ಸಂಸದೀಯ ವ್ಯವಹಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

    ಜಿಲ್ಲೆಯ ಮುಂಗಾರು ಬಿತ್ತನೆಯ ಸಿದ್ಧತೆ ಕುರಿತು ಕೃಷಿ ಹಾಗೂ ಪೂರಕ ಇಲಾಖೆಗಳ ಅಧಿಕಾರಿಗಳೊಂದಿಗೆ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಯಾವುದೇ ಗೊಬ್ಬರ ಮತ್ತು ಬೀಜದ ಕೊರತೆ ಉಂಟಾಗಬಾರದು ಎಂದರು.

    ಮುಂಗಾರು ಬಿತ್ತನೆಗೆ ಅವಶ್ಯವಾದ ಡಿಎಪಿ ಹಾಗೂ ಕಾಂಪೋಸ್ಟ್ ಗೊಬ್ಬರ ದಾಸ್ತಾನು, ವಿವಿಧ ಬಿತ್ತನೆ ಬೀಜಗಳ ದಾಸ್ತಾನು ಪ್ರಮಾಣ, ರೈತರ ಬೇಡಿಕೆ ಪ್ರಮಾಣವನ್ನು ಕೃಷಿ ಜಂಟಿ ನಿರ್ದೇಶಕರಿಂದ ಮಾಹಿತಿ ಪಡೆದುಕೊಂಡರು. ಸಹಕಾರಿ ಸಂಘಗಳ ಮೂಲಕವೇ ರಸಗೊಬ್ಬರ ಮಾರಾಟಕ್ಕೆ ಆದ್ಯತೆ ನೀಡಬೇಕು. ನಿಗದಿತ ದರಕ್ಕಿಂತ ಹೆಚ್ಚು ದರದಲ್ಲಿ ಗೊಬ್ಬರ ಮಾರಾಟವಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದರು.

    ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸಹಕಾರಿ ಸಂಘಗಳು ನೋಂದಣಿ ಮತ್ತು ಇತರ ಕಾರಣಗಳಿಗಾಗಿ ನಿಷ್ಕ್ರಿಯವಾಗಿರುವ ಸಂಘಗಳ ಮಾಹಿತಿ ಪಡೆದ ಸಚಿವರು, ಜಿಲ್ಲಾದ್ಯಂತ ವಿಶೇಷ ಅಭಿಯಾನ ಕೈಗೊಂಡು ಕ್ರಿಯಾಶೀಲವಾಗಿರುವ ಸಹಕಾರಿ ಸಂಘಗಳು ಹಾಗೂ ನೋಂದಣಿ, ಆರ್ಥಿಕ ತೊಂದರೆಯಲ್ಲಿರುವ ಸಹಕಾರಿ ಸಂಘಗಳ ಮಾಹಿತಿ, ಲೆಕ್ಕ ನಿರ್ವಹಣೆಯ ಮಾಹಿತಿ ಸಂಗ್ರಹಿಸಿ ಮೂರು ದಿನದಲ್ಲಿ ವರದಿ ನೀಡಬೇಕು. ಸಂಘಗಳ ನೋಂದಣಿ, ನವೀಕರಣ, ಸಹಕಾರಿ ಸಂಘಗಳಿಗೆ ಅಗತ್ಯವಾದ ಹಣಕಾಸಿನ ನೆರವು ಹಾಗೂ ಹೊಸ ಸಹಕಾರಿ ಸಂಘಗಳ ಹೆಚ್ಚಳಕ್ಕೆ ವಿಶೇಷ ಕ್ರಮವಹಿಸಬೇಕು ಎಂದರು.

    ಹಾವೇರಿ, ರಾಣೆಬೆನ್ನೂರು ಹಾಗೂ ಹಿರೇಕೆರೂರು ತಾಲೂಕಿನಲ್ಲಿ ಹೆಚ್ಚು ಸಹಕಾರಿ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ, ಸವಣೂರ ತಾಲೂಕುಗಳಲ್ಲಿ ಹೆಚ್ಚುವರಿ ಸಂಘಗಳ ನೋಂದಣಿಗೆ ಕ್ರಮವಹಿಸಬೇಕು. ಈ ಸಹಕಾರಿ ಸಂಘಗಳ ಮೂಲಕವೇ ಗೊಬ್ಬರ ವಿತರಣೆಗೆ ಆದ್ಯತೆ ನೀಡಬೇಕು ಎಂದರು.

    ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಮಾತನಾಡಿ, ‘2021ರ ಮುಂಗಾರು ಹಂಗಾಮಿಗೆ ಭತ್ತ, ಜೋಳ, ಹೈಬ್ರಿಡ್ ಗೋವಿನಜೋಳ, ಹೆಸರು, ತೊಗರಿ, ಅಲಸಂದಿ, ಶೇಂಗಾ, ಸೂರ್ಯಕಾಂತಿ, ಸೋಯಾಅವರೆ ಸೇರಿ 33,650 ಕ್ವಿಂಟಾಲ್ ಬೀಜಕ್ಕೆ ಬೇಡಿಕೆಯಿದೆ. 30,651 ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ. 7,365 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. 23,256 ಕ್ವಿಂಟಾಲ್ ದಾಸ್ತಾನಿದೆ ಎಂದರು.

    ಕೃತಕ ಅಭಾವ ಸೃಷ್ಟಿಸುವವರ ಕ್ರಮ ಕೈಗೊಳ್ಳಿ

    ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟದ ಮೇಲೆ ಹದ್ದಿನ ಕಣ್ಣಿಡಬೇಕು. ಅನಧಿಕೃತವಾಗಿ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

    ಬಿಡಿ ಬೀಜಗಳ ಮಾರಾಟ, ಅನಧಿಕೃತ ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಪತ್ತೆಯ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನೆರವು ಅಗತ್ಯವಾಗಿದೆ. ಈ ಕುರಿತು ಕೃಷಿ ಅಧಿಕಾರಿಗಳಿಗೆ ನೆರವು ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲು ಗೃಹ ಸಚಿವರಿಗೆ ಮನವಿ ಮಾಡಿದರು.

    ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ ರೋಷನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts