VIDEO| ಹಾಲು ತರಲು ಹೋದ ವಕೀಲೆಯನ್ನು ಗುಂಡಿಕ್ಕಿ ಹತ್ಯೆ!

Milk Dairy
Published on

ಲಖನೌ: ವಕೀಲೆ ಒಬ್ಬರು ಮನೆಯ ಬಳಿ ಹಾಲು ಖರೀದಿಸಿ ವಾಪಸ್​ ಆಗುತ್ತಿದ್ದ ವೇಳೆ ಆಕೆಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಮೀರತ್​ ಜಿಲ್ಲೆಯ ನ್ಯೂ ಮೆವ್ಲಾ ಕಾಲೋನಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಅಂಜಲಿ ಗಾರ್ಗ್​(35) ಎಂದು ತಿಳಿದು ಬಂದಿದೆ. ಆಕೆಯ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ಧಾರೆ.

ಪ್ರಕರಣದ ಹಿನ್ನಲೆ?

ಘಟನೆ ಕುರಿತು ಪ್ರತಿಕ್ರಿಯಿಸಿರುವ ಟಿಪಿ ನಗರ ಪೊಲೀಸ್ ಠಾಣಾಧಿಕಾರಿ ಸಂತ ಶರಣ್ ವೃತ್ತಿಯಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದ ಅಂಜಲಿ ಹಾಗೂ ಆಕೆಯ ಪತಿ ನಿತಿನ್ ಗಾರ್ಗ್​ ನಡುವೆ ಪದೇ ಪದೇ ಮನಸ್ತಾಪ ಉಂಟಾಗುತ್ತಿದ್ದ ಕಾರಣ ವಿಚ್ಛೇದನ ಪಡೆಯಲು ನಿರ್ಧರಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಮಹಿಳೆ ಒಂಟಿಯಾಗಿ ಇದ್ದುದ್ದನ್ನು ಗಮನಿಸಿದ ಆರೋಪಿಗಳು ಆಕೆಯ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ಬುಧವಾರ ಬೆಳಗ್ಗೆ ಅಂಜಲಿ ಅವರು ಮಾರುಕಟ್ಟೆಯಿಂದ ಹಾಲನ್ನು ಖರೀದಿಸಿ ವಾಪಸ್​ ಆಗುತ್ತಿದ್ದ ವೇಳೆ ಮನೆಯ ಮುಂಭಾಗ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮಾವನ ಕೈವಾಡ ಶಂಕೆ?

ಮೃತ ಅಂಜಲಿ ಹಾಗೂ ಆಕೆಯ ಪತಿ ನಿತಿನ್​ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದಾಗ ಅವರ, ಮಾವ ಪದೇ ಪದೇ ಮಹಿಳೆ ಇದ್ದ ಕಡೆ ತೆರಳಿ ಬೆದರಿಕೆ ಹಾಕುತ್ತಿದ್ದರು. ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಸಹ ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಒಮ್ಮೆ ಅಂಜಲಿಯನ್ನು ಹಿಂಬಾಲಿಸಿಕೊಂಡು ಆಕೆಯ ಮಾವ ಬೆದರಿಕೆ ಹಾಕುತ್ತಿರುವ ವಿಡಿಯೋವನ್ನು ವಕೀಲೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಈ ಸಂಬಂಧ ಟಿಪಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಮಹಿಳೆ ವಾಸಿಸುತ್ತಿದ್ದ ಮನೆಯ ಮಾಲೀಕತ್ವದ ವಿಚಾರವಾ ಹಾಗೂ ವಿಚ್ಛೇದನದ ವಿವಾರವಾಗಿ ಆಕೆಯ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಪ್ರಕರಣ ಸಂಬಂಧ ಮೃತ ಮಹಿಳೆಯ ಮಾವನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದ್ದು ವಿಚಾರಣೆ ಬಳಿಕ ಘಟನೆಯ ಕುರಿತು ಮಾಹಿತಿಯನ್ನು ನೀಡಲಾಗುವುದು ಎಂದು ಟಿಪಿ ನಗರ ಪೊಲೀಸ್ ಠಾಣಾಧಿಕಾರಿ ಸಂತ ಶರಣ್ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net