More

  ಕಮಲಕ್ಕೆ ಬಂಡಾಯ ಭುಗಿಲೇಳುವ ದಿಗಿಲು

  ಬೆಂಗಳೂರು: ಬದಲಾವಣೆ, ಹೊಸ ಮುಖಗಳನ್ನು ಪರಿಚಯಿಸಿದ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದೆ. ಟಿಕೆಟ್ ವಂಚಿತರ ಅಸಮಾಧಾನ ಶಮನಗೊಳಿಸಲು ಶತಪ್ರಯತ್ನ ನಡೆಸಿದ್ದಾರೆ.ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸ್ಪರ್ಧೆ ನಿರ್ಧಾರ ಪಕ್ಷಕ್ಕೆ ತಲೆಬಿಸಿ ತಂದೊಡ್ಡಿದ್ದು, ಹಲವು ಸುತ್ತಿನ ಮನವೊಲಿಕೆ ಪ್ರಯತ್ನ ಫಲಿಸಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸುವ ಭರದಲ್ಲಿ ಕೇಸರಿ ಪಡೆಯನ್ನು ಕಂಗಾಲುಗೊಳಿಸಿದ್ದಾರೆ. ಜಿಲ್ಲೆಯ ನಾಯಕರ ಭೇಟಿಗೆ ಒಪ್ಪದ ಈಶ್ವರಪ್ಪ ಜತೆಗೆ ರ್ಚಚಿಸಲು, ವರಿಷ್ಠರ ಸಂದೇಶ ರವಾನಿಸಲು ಲೋಕಸಭೆ ಚುನಾವಣೆ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಭೇಟಿಯಾಗಿದ್ದಾರೆ.

  ಈ ವೇಳೆ ಯಡಿಯೂರಪ್ಪಗೆ ಜೈ ಅಂದಿದ್ದಾಯಿತು. ಈಗ ಅವರ ಮಗ ವಿಜಯೇಂದ್ರಗೂ ಜೈ ಎನ್ನಬೇಕೆ?, ಅವರನ್ನು ಸಿಎಂ ಮಾಡುವುದಕ್ಕೆ ನಾವಿರಬೇಕೆ? ಎಂದು ಖಾರವಾಗಿ ಕೇಳುವ ಮೂಲಕ ಈಶ್ವರಪ್ಪ ಮನದಾಳದ ಮಾತು ಹೊರಹಾಕಿದ್ದಾರೆ ಎನ್ನಲಾಗಿದೆ. ಅಂದರೆ ಪುತ್ರ ಈ.ಕಾಂತೇಶ್​ಗೆ ಹಾವೇರಿ ಟಿಕೆಟ್ ಕೊಡದ ಸಿಟ್ಟಲ್ಲ. ಮುನಿಸಿಗೆ ಅಸಲಿ ಕಾರಣ ಏನೆಂಬುದು ಈಶ್ವರಪ್ಪ ಮಾತುಗಳಿಂದಲೇ ಹೊರಬಂದಿವೆ. ಬಂಡಾಯದ ಹಿಂದೆ ಕೆಲವು ಶಕ್ತಿಗಳ ಕೈವಾಡವೂ ಇದೆ ಎಂಬ ಸಂದೇಹ ಮತ್ತಷ್ಟು ಬಲವಾಗಿದೆ.

  ಬೇರೆಡೆ ವ್ಯಾಪಿಸುವ ಆತಂಕ: ಶತಾಗತಾಯ ಈಶ್ವರಪ್ಪ ಮನವೊಲಿಸಿ ಸ್ಪರ್ಧಾಕಣದಿಂದ ಹಿಂದೆ ಸರಿಸಲೇಬೇಕು. ಇಲ್ಲದಿದ್ದರೆ ಪಕ್ಷದ ವರಿಷ್ಠರ ಹಿಡಿತವಿಲ್ಲವೆಂಬ ಸಂದೇಶ ರವಾನೆಯಾಗಲಿದೆ. ಮೋದಿಯವರ ವರ್ಚಸ್ಸು, ಅಲೆಗೂ ಧಕ್ಕೆಯಾಗಲಿದೆ. ಇದರಿಂದಾಗಿ ಹೊಗೆಯಾಡುತ್ತಿರುವ ಅತೃಪ್ತಿ ಬೇರೆಡೆ ವ್ಯಾಪಿಸಿ, ಅಧಿಕೃತ ಅಭ್ಯರ್ಥಿಗಳಿಗೆ ಸಮಸ್ಯೆ ತಂದೊಡ್ಡುವ ಆತಂಕವನ್ನು ಪಕ್ಷದ ಮೂಲಗಳು ವ್ಯಕ್ತಪಡಿಸುತ್ತಿವೆ.

  ಸೂಕ್ಷ್ಮ ಗಮನ: ಶಿವಮೊಗ್ಗದ ಬೆಳವಣಿಗೆ, ಹಲವು ಸುತ್ತಿನ ಮಾತುಕತೆ ಯತ್ನ ವಿಫಲದ ಮಾಹಿತಿ ಅರಿತ ವರಿಷ್ಠರು ಬೇರೆ ಕ್ಷೇತ್ರಗಳತ್ತಲೂ ಸೂಕ್ಷ್ಮಗಮನಹರಿಸಿದ್ದು, ಮಾಹಿತಿ ತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದಿದೆ. ಹಾಲಿ ಸಂಸದರನ್ನು ಕೈಬಿಟ್ಟ ಕೊಪ್ಪಳ, ಬೆಂಗಳೂರು ಉತ್ತರ, ಇರುವವರನ್ನು ಮುಂದುವರಿಸಿದ ಬೀದರ್, ಸಿದ್ದೇಶ್ವರ ಬದಲು ಅವರ ಪತ್ನಿಗೆ ಟಿಕೆಟ್ ನೀಡಿದ ದಾವಣಗೆರೆ ಕ್ಷೇತ್ರಗಳ ಬೆಳವಣಿಗೆ ವರದಿ ರವಾನೆಯಾಗಿದೆ. ಬೆಳಗಾವಿಗೆ ಅಧಿಕೃತ ಅಭ್ಯರ್ಥಿ ಘೋಷಣೆಗೆ ಮುಂಚೆ ಜಗದೀಶ ಶೆಟ್ಟರ್ ವಿರುದ್ಧ ಅಪಸ್ವರ, ಪಂಚಮಸಾಲಿ ಸಮುದಾಯ ಕೂಗೆಬ್ಬಿಸಿದ ಗುಂಪಿನ ನಡೆ, ಹಿಂದಿರುವವರ ಒತ್ತಾಸೆಯನ್ನೂ ದೆಹಲಿ ನಾಯಕರು ಗ್ರಹಿಸಿದ್ದಾರೆ. ಜೆಡಿಎಸ್ ಜತೆಗೆ ಸೀಟುಗಳ ಹೊಂದಾಣಿಕೆ, ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾದ ಬಳಿಕ ವರಿಷ್ಠರೇ ಅಖಾಡಕ್ಕೆ ಇಳಿದು ಸರಿಪಡಿಸುವ ವಿಶ್ವಾಸವಿದೆ. ಅಮಿತ್ ಷಾ ಅಂತಹವರು ಮಧ್ಯೆ ಪ್ರವೇಶಿಸದಿದ್ದರೆ ಬಂಡೇಳುವವರ ಸಂಖ್ಯೆ ಹೆಚ್ಚಿದರೂ ಅಚ್ಚರಿಯಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

  ಸಂಘ-ಪರಿವಾರ ದೌಡು
  ಈಶ್ವರಪ್ಪ ಬಂಡಾಯದ ಕಾರಣ ಅರಿತು, ಕಾವು ತಮಣಿ ಮಾಡಲು ಸಂಘ-ಪರಿವಾರವೂ ಅಖಾಡಕ್ಕೆ ಇಳಿದಿದೆ. ಆರ್​ಎಸ್​ಎಸ್ ಪ್ರಮುಖ ಗೋಪಾಲನಾಗರಕಟ್ಟೆ ಸ್ವತಃ ಮೊಬೈಲ್​ನಲ್ಲಿ ಸಂರ್ಪಸಿ ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಿರ್ಧಾರದಿಂದ ಹಿಂದೆ ಸರಿಯಲ್ಲ. ಶಿವಮೊಗ್ಗದ ಮೋದಿ ಕಾರ್ಯಕ್ರಮಕ್ಕೂ ಹಾಜರಾಗಲ್ಲ, ಗೆದ್ದ ನಂತರ ಭೇಟಿಯಾಗುವೆ ಎಂದು ಪುನರುಚ್ಚರಿಸಿದ್ದಾರೆ. ಶಿವಮೊಗ್ಗದಲ್ಲಿ ಮೋದಿ ಸಭೆಗೆ ಈಶ್ವರಪ್ಪ ಗೈರಾಗಿದ್ದು, ಅಂತಿಮವಾಗಿ ನಡ್ಡಾ, ಅಮಿತ್ ಷಾ ಇಲ್ಲವೇ ಮೋದಿಯವರೇ ಮನವೊಲಿಕೆ ಅನಿವಾರ್ಯತೆ ಎದುರಾಗಿದೆ.

  ಬಿಜೆಪಿ ಯಡಿಯೂರಪ್ಪ ಆಸ್ತಿಯಲ್ಲ
  ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾತನಾಡುವುದು ಅರ್ಥಹೀನ. ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಸೈಕಲ್​ನಲ್ಲಿ ಸುತ್ತಾಡಿ ರಾಜ್ಯದ ಪ್ರತಿ ಹಳ್ಳಿಗೂ ವ್ಯಾಪಿಸುವಂತೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಯಡಿಯೂರಪ್ಪ ಕುಟುಂಬ ರಾಜಕಾರಣಕ್ಕೆ ಬಿಜೆಪಿ ಬಲಿಯಾಗುತ್ತಿದೆ ಎಂಬ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬಿಜೆಪಿ ಸದೃಢವಾಗಿ ಬೆಳೆದು ನಿಲ್ಲಲು ಲಕ್ಷಾಂತರ ಕಾರ್ಯಕರ್ತರ ಶ್ರಮವಿದೆ. ಪಕ್ಷದ ಹಿರಿಯರ ಅವಿರತ ಹೋರಾಟವಿದೆ. ಹಾಗಾಗಿ ಬಿಜೆಪಿ ಕೇವಲ ಯಡಿಯೂರಪ್ಪ ಅವರ ಆಸ್ತಿಯಲ್ಲ ಎಂದು ಟಾಂಗ್ ನೀಡಿದರು. ಯಡಿಯೂರಪ್ಪ ಸೇರಿ ಅನೇಕ ಕಾರ್ಯಕರ್ತರ ತಪಸ್ಸಿನ ಫಲವಾಗಿ ಪಕ್ಷ ಹೆಮ್ಮರವಾಗಿದೆ. ಪಕ್ಷದಲ್ಲಿ ಸಣ್ಣ-ಪುಟ್ಟ ಗೊಂದಲಗಳು ಇರುವುದು ಸಹಜ, ಅದನ್ನು ಬಗೆಹರಿಸುತ್ತೇವೆ. ಎಲ್ಲವನ್ನೂ ಸಮರ್ಥವಾಗಿ ಎದುರಿಸುವ ಶಕ್ತಿ, ತಾಕತ್ತು ಕಾರ್ಯಕರ್ತರಲ್ಲಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸುವ ಕೆಲಸ ಮಾಡುತ್ತೇವೆ ಎಂದರು. ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್​ಗೆ ಟಿಕೆಟ್ ಕೈತಪ್ಪಲು ನಾನು ಕಾರಣನಲ್ಲ. ಕೇಂದ್ರದ ಸಂಸದೀಯ ಮಂಡಳಿಯಿಂದ ನೇರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ನನ್ನದಾಗಲಿ, ತಂದೆ ಯಡಿಯೂರಪ್ಪ ಅವರ ಪಾತ್ರವಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

  ರಾಜ್ಯದಲ್ಲಿ ಮೋದಿ ಸಂಚಲನ
  ನರೇಂದ್ರ ಮೋದಿ ಶಿವಮೊಗ್ಗ ಭೇಟಿಯಿಂದ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಮೋದಿ ಭೇಟಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಲಿದೆ ಎಂದು ವಿಜಯೇಂದ್ರ ಹೇಳಿದರು. ರಾಜ್ಯದಲ್ಲಿ ಮೋದಿ ಅಲೆ ಎದ್ದಿದೆ. ಇದರ ಪರಿಣಾಮ ಎಷ್ಟಿದೆ ಎಂದರೆ ಕಾಂಗ್ರೆಸ್​ನವರಿಗೆ ಇನ್ನೂ ಅಭ್ಯರ್ಥಿಗಳನ್ನು ಹಾಕಲು ಹಿಂದೇಟು ಹಾಕುವಂತಾಗಿದೆ. ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಕೊಡುಗೆಗಳು ಮನೆ ಮಾತಾಗಿವೆ. ಸ್ವಾತಂತ್ರ್ಯಾನಂತರದಲ್ಲಿ ಮೊದಲ ಬಾರಿಗೆ ಕೇಂದ್ರದ ಯೋಜನೆಗಳು ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪಿವೆ ಎಂದರು.

  ಇಡೀ ದಿನ ಮಠ, ಮಂದಿರ ಸುತ್ತಿದ ಈಶ್ವರಪ್ಪ
  ಶಿವಮೊಗ್ಗ: ಲೋಕಸಭೆ ಚುನಾವಣೆ ಘೊಷಣೆ ಆದ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕಾಗಿ ಸೋಮವಾರ ಶಿವಮೊಗ್ಗಕ್ಕೆ ಬಂದರೆ, ಇತ್ತ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡು ದಿನವಿಡೀ ಮಠ, ಮಂದಿರಗಳನ್ನು ಸುತ್ತಿದರು. ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುವರೆಂಬ ನಂಬಿಕೆ ಬಿಜೆಪಿ ನಾಯಕರಲ್ಲಿತ್ತು. ಹಾಗಾಗಿ ಬ್ಯಾನರ್​ನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಸಾಲಿನಲ್ಲಿ ಈಶ್ವರಪ್ಪ ಫೋಟೋ ವೇದಿಕೆ ಗಣ್ಯರ ಪಟ್ಟಿಯಲ್ಲೂ ಅವರ ಹೆಸರಿತ್ತು ಎನ್ನಲಾಗಿದೆ. ಆದರೆ ಬಹಿರಂಗ ಸಭೆಯಿಂದ ಈಶ್ವರಪ್ಪ ದೂರವೇ ಉಳಿದರು.

  ಇಂದು ಡಿ.ವಿ.ಸದಾನಂದಗೌಡ ನಿರ್ಧಾರ ಪ್ರಕಟ
  ಬೆಂಗಳೂರು: ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿರ್ಧರಿಸಿಯಾಗಿದೆ. ಮಂಗಳವಾರ ನನ್ನ ನಿರ್ಧಾರ ಪ್ರಕಟಿಸುವೆ ಎಂದು ಮಾಜಿ ಸಿಎಂ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದ್ದಾರೆ.

  ಬಿಜೆಪಿ ನಾಯಕರು, ಬೆಂಬಲಿಗರು, ಅಭಿಮಾನಿಗಳಿಂದ ಸೋಮವಾರ ಜನ್ಮ ದಿನದ ಶುಭಾಶಯ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನನ್ನನ್ನು ಸಂರ್ಪಸಿದ್ದರು. ಬಿಜೆಪಿ ಪ್ರಮುಖರೊಬ್ಬರು ಭಾನುವಾರ ಭೇಟಿಯಾಗಿ ಸಾಂತ್ವನ ಹೇಳಿರುವುದು ನಿಜ ಎಂದರು.

  ಸಮೀಕ್ಷೆಯಲ್ಲಿ ಬೆಂಗಳೂರು ಉತ್ತರಕ್ಕೆ ಶೇ.100 ನನ್ನ ಹೆಸರೇ ಬಂದಿತ್ತು. ದೆಹಲಿ, ರಾಜ್ಯದಲ್ಲಿ ಒಂದಷ್ಟು ವಿದ್ಯಮಾನ ನಡೆದಿರುವುದು ಗಮನಕ್ಕೆ ಬಂದಿದೆ. ನಿಮಗೇ ಟಿಕೆಟ್ ಅಂತ ಹೇಳಿ ಕೊನೇ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ ಎಂದರು.

  ಭೇಟಿ, ಮಾತುಕತೆ: ಜನ್ಮದಿನದ ಶುಭಾಶಯ ಕೋರುವ ನೆಪದಲ್ಲಿ ಡಿ.ವಿ.ಸದಾನಂದ ಗೌಡರನ್ನು ಪಕ್ಷದ ಹಲವು ನಾಯಕರು ಭೇಟಿ ಮಾಡಿದರು. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ದಾಸರಹಳ್ಳಿ ಶಾಸಕ ಮುನಿರಾಜು ಇನ್ನಿತರರು ಭೇಟಿಯಾದರು. ನಂತರ ಡಿವಿಎಸ್ ಜತೆಗೆ ಆರ್.ಅಶೋಕ್ ಹಾಗೂ ಅಶ್ವತ್ಥನಾರಾಯಣ ಮಾತುಕತೆ ನಡೆಸಿ ಮನದ ಇಂಗಿತ ತಿಳಿಯಲು, ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಡಿವಿಎಸ್ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲವೆಂದು ಮೂಲಗಳು ತಿಳಿಸಿವೆ.

  ಕಾಲು ಮುಟ್ಟಿ ನಮಸ್ಕಾರ
  ಸದಾನಂದಗೌಡರಿಗೆ ಬೆಂಗಳೂರು ಉತ್ತರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜನ್ಮ ದಿನದ ಶುಭಾಶಯ ಹೇಳಿದರು. ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಹಾರ ಹಾಕಿ ಕಾಲುಮುಟ್ಟಿ ನಮಸ್ಕರಿಸಿ ಚುನಾವಣಾ ಪ್ರಚಾರಕ್ಕೆ ಬರಬೇಕು ಎಂದು ವಿನಂತಿಸಿದರು.

  ದೆಹಲಿಯಲ್ಲಿ ಬೀಡು ಬಿಟ್ಟ ಶೆಟ್ಟರ್
  ಹುಬ್ಬಳ್ಳಿ: ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯುವುದಕ್ಕಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಧಾರವಾಡ ಅಥವಾ ಹಾವೇರಿ ಲೋಕಸಭೆ ಕ್ಷೇತ್ರಗಳೆರಡರಲ್ಲಿ ಒಂದು ಕ್ಷೇತ್ರದ ಅಭ್ಯರ್ಥಿ ಆಗಬಹುದೆಂಬ ನಿರೀಕ್ಷೆ ಶೆಟ್ಟರ್ ಅವರಿಗೆ ಇತ್ತು. ಆದರೆ, ಎರಡೂ ಕ್ಷೇತ್ರಗಳ ಟಿಕೆಟ್ ಕೈ ತಪ್ಪಿದ್ದರಿಂದ ಶೆಟ್ಟರ್ ಬೆಳಗಾವಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಂತ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಸಹ ಅಂದುಕೊಂಡಷ್ಟು ಸುಲಭವಾಗಿಲ್ಲ. ಶೆಟ್ಟರ್ ಬೆಳಗಾವಿಗೆ ಅಭ್ಯರ್ಥಿ ಆಗುವುದು ನಿಕ್ಕಿ ಎಂದಾಕ್ಷಣ, ಕ್ಷೇತ್ರದ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಟಿಕೆಟ್ ಪಕ್ಕಾ ಎನ್ನುವ ಹುಮ್ಮಸ್ಸಿನಲ್ಲಿ ಇದ್ದ ಶೆಟ್ಟರ್ ಅವರನ್ನು ಈ ಸಂಗತಿ ಆತಂಕಕ್ಕೆ ನೂಕಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಳಗಾವಿಗೆ ಕರೆತಂದು ಅಭ್ಯರ್ಥಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿ ಶನಿವಾರವೇ ದೆಹಲಿಗೆ ತೆರಳಿರುವ ಶೆಟ್ಟರ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ಟಿಕೆಟ್ ಅಂತಿಮಗೊಂಡ ನಂತರವೇ ಹುಬ್ಬಳ್ಳಿಗೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

  ಸಾಮಾನ್ಯ ಎಂಪಿಯಂತೆ ಕೆಲಸ ಮಾಡುತ್ತೇನೆ
  ಮೈಸೂರು: ಕೆಲಸ ಕಾರ್ಯಗಳಿಗಾಗಿ ನೀವು ಅರಮನೆಗೆ ಬರಬೇಕಿಲ್ಲ. ನಾನೇ ಹೊರಗೆ ಬರುತ್ತೇನೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಘೊಷಿತ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಒಂಬತ್ತು ವರ್ಷದಿಂದ ನಮಗೆ ಒಳ್ಳೆಯ ಸ್ವಾಗತ ಕೋರಿದ್ದೀರಾ. ಮನೆ ಮಗನಾಗಿ, ಸಹೋದರನಾಗಿ, ನನ್ನ ಮೇಲೆ ಪ್ರೀತಿ ತೋರಿದ್ದೀರಾ. ಇದೇ ರೀತಿಯ ಪ್ರೀತಿ, ವಿಶ್ವಾಸ ಮುಂದೆಯೂ ನಿಮ್ಮಿಂದ ನನಗೆ ಬೇಕಿದೆ ಎಂದು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.

  ದೇಶದ ಸಮಗ್ರತೆ ಹಾಗೂ ನನ್ನ ತತ್ವ, ಸಿದ್ಧಾಂತಗಳು ಬಿಜೆಪಿಗೆ ಹತ್ತಿರವಿದೆ. ನಮ್ಮ ಆಲೋಚನೆ ಮತ್ತೆ ಬಿಜೆಪಿ ಆಲೋಚನೆ ಒಂದೇ ತರಹ ಇದೆ. ಈ ಕಾರಣಕ್ಕಾಗಿ ಬಿಜೆಪಿ ಆಯ್ಕೆ ಮಾಡಿಕೊಂಡಿದ್ದೇನೆ. ನಮ್ಮ ತಂದೆ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್) 4 ಬಾರಿ ಸಂಸದರಾಗಿದ್ದರು. ನಮಗೆ ಎಲ್ಲ ಪಕ್ಷದವರೊಂದಿಗೆ ಸಂಬಂಧ ಇದೆ. ಜನರಿಗೆ ಅರಮನೆ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ನಾನು ಸಾಮಾನ್ಯ ಎಂಪಿ ರೀತಿ ಕೆಲಸ ಮಾಡುತ್ತೇನೆ ಎಂದರು.

  ಯದುವೀರ್ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಮಾಡಿದೆ. ನಾನು ಪಕ್ಷಕ್ಕೂ, ಅಭ್ಯರ್ಥಿಗೂ ದ್ರೋಹ ಮಾಡಲ್ಲ. 2014ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂತ ಹೈಕಮಾಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ಟಿ್ಟ ಎಂದು ಕೇಳಿರಲಿಲ್ಲ. ಈಗಲೂ ಅಷ್ಟೇ, ಯಾಕೆ ಟಿಕೆಟ್ ತಪ್ಪಿಸಿದ್ದೀರಿ ಅಂತ ನಾನು ಕೇಳಿಯೂ ಇಲ್ಲ. ಅವರು ಹೇಳಿಯೂ ಇಲ್ಲ. ಕಾಂಗ್ರೆಸ್​ನಿಂದ ಆಹ್ವಾನ ಬಂದಿತ್ತಾ ಎನ್ನುವ ಯಾವ ಪ್ರಶ್ನೆಗಳು ಈಗ ಪ್ರಸ್ತುತ ಅಲ್ಲ. ನಮಗೆ ಯದುವೀರ್ ಅವರನ್ನು ಗೆಲ್ಲಿಸುವುದಷ್ಟೇ ಈಗ ಮುಖ್ಯ.

  | ಪ್ರತಾಪಸಿಂಹ ಸಂಸದ

  ಕರ್ಮದ ಫಲ ಸಿಲ್ಕ್​ ಸ್ಮಿತಾ ಸಾವಿಗೆ ಕಾರಣವಾಯ್ತಾ? ಅತಿದೊಡ್ಡ ರಹಸ್ಯ ಬಯಲು ಮಾಡಿದ ಹಿರಿಯ ನಟಿ

  ಶಾಸ್ತ್ರೋಕ್ತವಾಗಿ ಸಹೋದರನನ್ನೇ ಮದುವೆಯಾದ ಮಹಿಳೆ! ಕಾರಣ ತಿಳಿದರೆ ಹೌಹಾರ್ತೀರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts