More

    ಎಸ್ಸೆಸ್ಸೆಲ್ಸಿ ಮೌಲ್ಯಮಾಪನದಲ್ಲಿ ಭಾರಿ ಪ್ರಮಾದ

    ಉಪ್ಪಿನಂಗಡಿ/ಮಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ಭಾರಿ ಪ್ರಮಾದ ನಡೆದಿದೆ ಎನ್ನುವುದಕ್ಕೆ ಮರುಮೌಲ್ಯಮಾಪನದ ಬಳಿಕ ವಿದ್ಯಾರ್ಥಿಗಳಿಗೆ ದೊರೆತ ಉತ್ತಮ ಅಂಕಗಳೇ ಸಾಕ್ಷಿ.
    ದ.ಕ. ಜಿಲ್ಲೆಯೊಂದರಲ್ಲೇ 400ಕ್ಕೂ ಅಧಿಕ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ಬೆಳ್ತಂಗಡಿ ವಲಯದಲ್ಲಿ ಅತ್ಯಧಿಕವೆಂಬಂತೆ 23 ಶಾಲೆಗಳ 114 ವಿದ್ಯಾರ್ಥಿಗಳು ಮರುಮೌಲ್ಯಮಾಪನ ಬಳಿಕ ಉತ್ತೀರ್ಣರಾಗಿದ್ದಾರೆ. 622 ಅಂಕ ಗಳಿಸಿದ್ದ ತಾಲೂಕಿನ ವಿದ್ಯಾರ್ಥಿನಿ ಶ್ರೇಯಾ ಡೋಂಗ್ರೆ ಮರುಮೌಲ್ಯಮಾಪನ ಬಳಿಕ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿದ್ದಾರೆ.
    ಅನುತ್ತೀರ್ಣಗೊಂಡು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ ಬಹುತೇಕ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ.  ಹಲವರು ತಮ್ಮ ಅಂಕಗಳನ್ನು ಹೆಚ್ಚಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಪಾಲಿಗೆ ನಿರ್ಣಾಯಕವಾಗಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪನವನ್ನು ಈ ರೀತಿ ನಿರ್ಲಕ್ಷೃದಿಂದ ಮಾಡುವುದು ಅದೆಷ್ಟೋ ವಿದ್ಯಾರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡಿದಂತಾಗುತ್ತಿದೆ.
    ಮೌಲ್ಯಮಾಪಕರ ತಪ್ಪಿಗೆ ಶಿಕ್ಷೆ: ಮರುಮೌಲ್ಯಮಾಪನ ಬಳಿಕ 6ಕ್ಕಿಂತ ಹೆಚ್ಚು ಅಂಕ ಬಂದಲ್ಲಿ ಮೌಲ್ಯಮಾಪಕರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಸಂಬಂಧಿಸಿದ ಪತ್ರಿಕೆಗೆ ವಿದ್ಯಾರ್ಥಿ ಪಾವತಿಸಿದ ಶುಲ್ಕವನ್ನೂ ಇಲಾಖೆ ವಾಪಸ್ ನೀಡುತ್ತದೆ. ಅಂಕ ಇನ್ನೂ ಹೆಚ್ಚು ಲಭಿಸಿದಲ್ಲಿ ಮೌಲ್ಯಮಾಪಕರಿಗೆ ದಂಡದ ಪ್ರಮಾಣವೂ ಏರಿಕೆಯಾಗುತ್ತದೆ. ಆದರೆ ಅನೇಕರು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಗೋಜಿಗೇ ಹೋಗುವುದಿಲ್ಲ. ವಿದ್ಯಾರ್ಥಿಗಳು ಪ್ರತಿ ವಿಷಯದ ಸ್ಕಾೃನ್ ಪ್ರತಿ ಪಡೆಯಲು 405 ರೂ. ಹಾಗೂ ಬಳಿಕ ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 805 ರೂ. ಹಣ ಪಾವತಿಸಬೇಕು. ಈ ಬಾರಿ ಕೋವಿಡ್‌ನಿಂದಾಗಿ ಆರ್ಥಿಕ ಸಮಸ್ಯೆ ಹೆಚ್ಚಿರುವ ಕಾರಣ ಹಲವರಿಗೆ ಅರ್ಜಿ ಸಲ್ಲಿಸುವುದು ಸಾಧ್ಯವಾಗಿಲ್ಲ.
    ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ ಉಡುಪಿಯಲ್ಲಿ 272 ಮಂದಿ ತೇರ್ಗಡೆ: ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 11,160 ವಿದ್ಯಾರ್ಥಿಗಳು ಉಡುಪಿ ಜಿಲ್ಲೆಯಿಂದ ತೇರ್ಗಡೆಯಾಗಿದ್ದು, ಮರು ಮೌಲ್ಯಮಾಪನ ಬಳಿಕ ಇದಕ್ಕೆ 272 ಸೇರ್ಪಡೆಯಾಗಿದೆ. ಎ ಗ್ರೇಡ್ ಸ್ಥಾನದಲ್ಲಿರುವ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.86.5ರಿಂದ ಶೇ.88.49ಕ್ಕೆ ಏರಿಕೆಯಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ 25 ಶಾಲೆಗಳು ಶೇ.100 ಫಲಿತಾಂಶ ಪಡೆದಿದ್ದು, ಮೌಲ್ಯಮಾಪನ ಬಳಿಕ 15 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಒಟ್ಟಾರೆ ಜಿಲ್ಲೆಯಲ್ಲಿ 40 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶೇಷಶಯನ ಕಾರಿಂಜ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    • ಯಾವ ವಲಯದಲ್ಲಿ ಎಷ್ಟು ಅಂಕ?: 
    • ಮಂಗಳೂರು ಉತ್ತರ 74
    • ಮಂಗಳೂರು ದಕ್ಷಿಣ 33
    • ಬೆಳ್ತಂಗಡಿ 114
    • ಬಂಟ್ವಾಳ 97
    • ಪುತ್ತೂರು 71
    • ಸುಳ್ಯ ಅಲಭ್ಯ
    • ದ.ಕ. ಜಿಲ್ಲೆ 389
    • ——–
    • ಬ್ರಹ್ಮಾವರ 59
    • ಕುಂದಾಪುರ 61
    • ಉಡುಪಿ 65
    • ಬೈಂದೂರು 43
    • ಕಾರ್ಕಳ 44
    • ಉಡುಪಿ ಜಿಲ್ಲೆ 272

    ಕಣ್ತಪ್ಪಿನಿಂದ ಒಂದೆರಡು ಲೋಪ ಸಂಭವಿಸುವುದು ಸಹಜ. ಆದರೆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಸ್ಕಾೃನ್ ಪ್ರತಿಯನ್ನು ಕಂಡಾಗ ಸರಿಯಾದ ಎಲ್ಲ ಉತ್ತರಗಳಿಗೂ ತಪ್ಪು ಎಂದು ಗೀಚಿರುವುದು ಕಂಡಿದೆ. ಶಿಕ್ಷಕರ ಕರ್ತವ್ಯ ಲೋಪಕ್ಕೆ ಶಿಕ್ಷಣ ಇಲಾಖೆ ಪರಿಣಾಮಕಾರಿ ಕ್ರಮ ಜರುಗಿಸಬೇಕು.
    – ಯು.ಜಿ.ರಾಧಾ, ಸಂಚಾಲಕರು, ಶ್ರೀರಾಮ ಕನ್ನಡ ಮಾಧ್ಯಮ ಶಾಲೆ, ಉಪ್ಪಿನಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts