More

    ಫತೇಪುರ್ ಪೋಸ್ಟ್ ವಶವಾದ ಕ್ಷಣಗಳು; 1971ರ ಯುದ್ಧದ ನೆನಪು ಬಿಚ್ಚಿಟ್ಟ ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ

    |ವೇಣುವಿನೋದ್ ಕೆ.ಎಸ್. ಮಂಗಳೂರು

    ಅದು 1971ರ ಡಿಸೆಂಬರ್ ತಿಂಗಳು. ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) ಪಶ್ಚಿಮ ಪಾಕಿಸ್ತಾನದ ಮಾನವ ಹಕ್ಕು ಉಲ್ಲಂಘನೆಯಿಂದಾಗಿ ಹಲವು ಸಮಸ್ಯೆಗೆ ಗುರಿಯಾಗಿದ್ದ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಬಾಂಗ್ಲಾದೇಶ ರಚನೆಗೆ ನಿರ್ಧಾರ ಮಾಡಿಯಾಗಿತ್ತು. ಹಾಗಾಗಿ ಯುದ್ಧ ಅನಿವಾರ್ಯ ಎಂಬ ಸ್ಥಿತಿಯಲ್ಲಿ ದೇಶವಿತ್ತು.
    ಇತ್ತ ವಾಯವ್ಯ ಭಾಗದ ಗಡಿಯಲ್ಲಿ ಏನೇ ಆದರೂ ಪಾಕಿಗಳನ್ನು ಗಡಿ ದಾಟಲು ಬಿಡಬೇಡಿ ಎಂಬ ಆದೇಶ ಕೊಟ್ಟು 8ನೇ ಸಿಖ್ ಲೈಟ್ ಇನ್‌ಫೆಂಟ್ರಿಯ ವೀರಯೋಧರನ್ನು ನಿಯೋಜಿಸಲಾಗಿತ್ತು. ಅದರಲ್ಲೊಬ್ಬರು ಮಂಗಳೂರಿನ ಯುವಕ ಸೆಕೆಂಡ್ ಲೆಫ್ಟಿನೆಂಟ್ ಐ.ಎನ್.ರೈ.

    ಹೀಗೆ ಡಿ.3ರಂದು ಅಮೃತಸರದಲ್ಲಿ ಎಂದಿನಂತೆ ಗಡಿ ಕಾಯುತ್ತಿದ್ದಾಗ ಪಾಕಿಸ್ತಾನದ ವಿಮಾನಗಳು ಭಾರತದ ವಿಮಾನ ನೆಲೆಗಳನ್ನು ನಾಶಪಡಿಸುವ ಉದ್ದೇಶದಿಂದ ರಾಡಾರ್ ಗುರಿಯಾಗದಂತೆ ತಪ್ಪಿಸಿ ತೀರಾ ಕೆಳಭಾಗದಲ್ಲಿ ಹಾದುಹೋದವು. ಆದರೆ ನಮ್ಮ ಪೈಲಟ್‌ಗಳು ಸನ್ನದ್ಧರಾಗಿದ್ದರಿಂದ ಶತ್ರು ವಿಮಾನಗಳು ಹಿಂದಿರುಗಬೇಕಾಯಿತು. ಅದೇ ವೇಳೆಗೆ ಶತ್ರುಪಾಳಯದಿಂದ ಆರ್ಟಿಲರಿ ಗನ್‌ಗಳು ಶೆಲ್‌ಗಳನ್ನು ಉಗುಳಿದವು, ನಮ್ಮ ಪೋಸ್ಟ್‌ನ ಆಚೀಚೆ ಶೆಲ್ ಬಿದ್ದು ಸ್ಫೋಟಗೊಂಡವು. ಅದು ನಮ್ಮೆಲ್ಲರ ಕಾಯುವಿಕೆಗೆ ಅಂತ್ಯ ಸಿಕ್ಕಿದ ಕ್ಷಣ. ಎಲ್ಲರೂ ಖುಷಿಗೊಂಡು ಕೊನೆಗೂ ಯುದ್ಧ ಶುರುವಾಗಿದ್ದಕ್ಕೆ ಮೆಸ್‌ಗೆ ತೆರಳಿ ವಿಸ್ಕಿ ಗುಟುಕರಿಸಿದ್ದೆವು ಎಂದು ನೆನಪಿಸಿಕೊಳ್ಳುತ್ತಾರೆ ಐ.ಎನ್.ರೈ!

    ಫತೇಪುರ್ ಪೋಸ್ಟ್ ವಶವಾದ ಕ್ಷಣಗಳು; 1971ರ ಯುದ್ಧದ ನೆನಪು ಬಿಚ್ಚಿಟ್ಟ ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ
    ನಿವೃತ್ತ ಬ್ರಿಗೇಡಿಯರ್ ಐ.ಎನ್. ರೈ

    ಅಲ್ಲಿಂದ ಮುಂದೆ ಯುದ್ಧ ಶುರು. ಭಾರತದ ಗಡಿಭಾಗದ ಕೆಲವೊಂದು ಪೋಸ್ಟ್‌ಗಳನ್ನು ಪಾಕಿಸ್ತಾನದ ಸೇನೆ ವಶಪಡಿಸಿಕೊಂಡಿತ್ತು. ಅವುಗಳಲ್ಲೆಲ್ಲ ಮಹತ್ವದ್ದು ಫತೇಪುರ್ ಎನ್ನುವ ಬಹಳ ವ್ಯೆಹಾತ್ಮಕ ಪೋಸ್ಟ್. ಈ ಪೋಸ್ಟ್ ಎತ್ತರದಲ್ಲಿದ್ದು ಬಹಳ ದೂರದ ವರೆಗಿನ ಸೇನಾ ಚಟುವಟಿಕೆಗಳನ್ನು ನೋಡಲು ಸಾಧ್ಯವಾಗುತ್ತಿತ್ತು. ಈಗ ರೈ ಅವರಿದ್ದ 8ನೇ ಸಿಖ್ ಲೈಟ್ ಇನ್‌ಫೇಂಟ್ರಿಗೆ ಈ ಫತೇಪುರ್ ಪೋಸ್ಟ್ ಬಿಡಿಸಿಕೊಡುವ ಜೊತೆಗೆ ಪಾಕಿಸ್ತಾನದ ಭಾಗದಲ್ಲಿದ್ದ ಇನ್ನೊಂದು ಫತೇಫುರ್ ಪೋಸ್ಟನ್ನೂ ಕೈ ವಶ ಪಡಿಸುವ ಮೂಲಕ ಶತ್ರುಗಳನ್ನು ರಾವಿ ನದಿಯಿಂದಾಚೆಗೆ ಹಿಮ್ಮೆಟ್ಟಿಸಬೇಕು ಎಂಬ ಖಚಿತ ಆದೇಶ ಹಿರಿಯ ಸೇನಾಧಿಕಾರಿಗಳಿಂದ ಬಂತು. ಯುದ್ಧಕ್ಕೆ ಬೇಕಾದ ಸಿದ್ಧತೆ, ವ್ಯೆಹ ರೂಪಿಸಲಾಯಿತು, ಡಿ.11ರ ರಾತ್ರಿ ಫತೇಪುರ್ ಮೇಲೆ ದಾಳಿ ನಡೆಸುವುದಕ್ಕೆ ಸಜ್ಜಾದರು. ಬೇಕಾದ ನೆರವನ್ನು ನೀಡಲು ಆರ್ಟಿಲರಿ ಮತ್ತು ಟ್ಯಾಂಕ್ ರೆಜಿಮೆಂಟ್‌ಗಳಿದ್ದವು.ವಿರೋಧಿಗಳ ಪೋಸ್ಟ್‌ನಲ್ಲಿ ಇರುವ ಶತ್ರುಗಳ ಸಂಖ್ಯೆ ಖಚಿತವಾಗಿ ತಿಳಿದಿರಲಿಲ್ಲ. ಮಾಹಿತಿ ಪ್ರಕಾರ 300ರಷ್ಟು ಸೈನಿಕರರಿಬಹುದು ಎಂಬ ಅಂದಾಜಿನಲ್ಲಿದ್ದೆವು. ಯುದ್ಧಕ್ಕೆ ತೆರಳುವ ಮೊದಲು ಬಿಸಿ ಊಟವನ್ನು ಸೇನೆಯಲ್ಲಿ ನೀಡಲಾಗುತ್ತದೆ, ಅದರಂತೆ ನಾನು ನನ್ನ ಪ್ರಾಣಮಿತ್ರರಾದ ಸೆಕೆಂಡ್ ಲೆಫ್ಟಿನೆಂಟ್ ಎಚ್.ಪಿ.ನಯ್ಯರ್ ಮತ್ತು ಕ್ಯಾಪ್ಟನ್ ಕರಂ ಸಿಂಗ್ ಒಂದೇ ಬೌಲ್‌ನಲ್ಲಿ ದಾಲ್ ಇರಿಸಿಕೊಂಡು ಚಪಾತಿಗಳನ್ನು ತಿಂದೆವು. ಬಳಿಕ ಕೈ ಕುಲುಕಿ ನಮ್ಮ ನಮ್ಮ ತಂಡಗಳನ್ನು ಸೇರಿಕೊಂಡೆವು.

    ರಾತ್ರಿ ಯಾವುದೇ ಲೈಟ್ ಇಲ್ಲದೆ, ಶೆಲ್‌ದಾಳಿಯಿಂದ ಜನರು ಬಿಟ್ಟು ಹೋದ ಹಳ್ಳಿಗಳ ಹೊರವಲಯದಲ್ಲಿ ಮೆಲ್ಲನೆ(ನಾಯಿಗಳಿಗೂ ತಿಳಿಯದಂತೆ) ನಾಲ್ಕು ಕಿ.ಮೀ.ನಷ್ಟು ಸಾಗಿದೆವು. ಆರ್ಟಿಲರಿ ಬೆಂಬಲದೊಂದಿಗೆ ಮುನ್ನುಗ್ಗಿದೆವು, ಅದು ದೂರದಿಂದ ಮಾಡುವ ಯುದ್ಧವಾಗಿರಲಿಲ್ಲ. ಬಂಕರುಗಳಿಗೆ ನುಗ್ಗಿ ಕೈ ಕೈ ಮಿಲಾಯಿಸುವ ಯುದ್ಧವಾಗಿತ್ತು, ನಮ್ಮ ಕಮಾಂಡಿಂಗ್ ಅಧಿಕಾರಿಯವರಿಗೆ ಆರೋಗ್ಯದ ಸಮಸ್ಯೆಯಾಯಿತು. ಅವರು ನೇತೃತ್ವ ವಹಿಸಿದ್ದ ತಂಡಗಳೂ ಹಿನ್ನಡೆ ಅನುಭವಿಸುತ್ತಿದ್ದವು, ನಾನು ಬಳಿಕ ಯುದ್ಧ ಮುಂದುವರಿಸಲು ನಿರ್ಧರಿಸಿದೆ, ಸೈನಿಕರನ್ನು ಒಟ್ಟುಗೂಡಿಸಿಕೊಂಡು ಮುಂದುವರಿದೆ, ಬೆಳಗ್ಗಿನ ಜಾವದ ವರೆಗೂ ಸಮರ ಮುಂದುವರಿಯಿತು. ಕೊನೆಗೂ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದೆವು ಎಂದು ನೆನಪಿಸಿಕೊಳ್ಳುತ್ತಾರೆ.
    ಬೆಳಗ್ಗೆ ನೋಡಿದರೆ ನಾನು ಒಟ್ಟಿಗೆ ಚಪಾತಿ ತಿಂದ ಇಬ್ಬರು ಮಿತ್ರರೂ ಇನ್ನಿಲ್ಲವಾಗಿದ್ದರು, 48 ಮಂದಿ ಮೃತಪಟ್ಟಿದ್ದರು, ಬಹಳಷ್ಟು ಮಂದಿ ಗಾಯಗೊಂಡರು. ಆದರೆ ಫತೇಪುರ್ ನಮ್ಮ ಕೈ ವಶವಾಗಿತ್ತು.

    ನಾವಿಂದು ಹುತಾತ್ಮರು ಎಂದು ಸೈನಿಕನ ಅನಾಮಧೇಯ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತೇವೆ, ಆದರೆ ಸೈನಿಕ ಅನಾಮಧೇಯನಲ್ಲ, ಯಾವುದೋ ಪತ್ನಿಗೆ ಪತಿ, ಮಕ್ಕಳಿಗೆ ತಂದೆ, ರಾಖಿ ಕಟ್ಟಿದ ಸೋದರಿಗೆ ಸೋದರನಾಗಿರುತ್ತಾನೆ. ಆದಷ್ಟು ಸೈನಿಕರನ್ನು ಗೌರವಿಸಬೇಕು ಎನ್ನುತ್ತಾರೆ.

    ಪಾಕ್ ಪರ ನಿಂತ ಅಮೆರಿಕ:

    ಫತೇಪುರ್ ಘಟನೆ ನಡೆದು ಎರಡು ದಿನದಲ್ಲಿ ಯುದ್ಧ ಮುಗಿದಿತ್ತು. ನಮ್ಮ ಯುದ್ಧ ನಡೆಯುತ್ತಿದ್ದ ಇನ್ನೊಂದು ಕಡೆ ಭಾರತ ಢಾಕಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಷ್ಯಾ ಬಿಟ್ಟರೆ ಆಗ ಬೇರಾವ ದೇಶಗಳೂ ನಮಗೆ ಸಹಕಾರ ಕೊಡಲಿಲ್ಲ, ಅಮೆರಿಕಾವಂತೂ ಪಾಕಿಸ್ತಾನದ ಪರವಾಗಿ ಅದರ ಅತಿದೊಡ್ಡ ನೌಕಾಸೇನೆಯ ಫ್ಲೀಟನ್ನೇ ಬಂಗಾಳಕೊಲ್ಲಿಗೆ ಕಳುಹಿಸಿತ್ತು. ಆದರೆ ರಷ್ಯಾದ ಸಬ್‌ಮೇರಿನ್ ದಳ ಭಾರತದ ಪರವಾಗಿ ಆಗಮಿಸಿದ ಕಾರಣ ಅಮೆರಿಕ ಏನೂ ಮಾಡಲಾಗಲಿಲ್ಲ. ಅಂತೂ ಭಾರತದ ನೆರವಲ್ಲಿ ಬಾಂಗ್ಲಾ ಸ್ವತಂತ್ರಗೊಂಡಿತು. ಎಂದು ಬ್ರಿಗೇಡಿಯರ್ ರೈ ನೆನಪಿಸಿಕೊಳ್ಳುತ್ತಾರೆ. ಇದೆಲ್ಲದರ ನೆನಪಿನಲ್ಲಿ ಡಿಸೆಂಬರ್ 16ನ್ನು ವಿಜಯ ದಿವಸ್ ಆಗಿ ಆಚರಿಸಲಾಗುತ್ತದೆ.

    ಬದುಕುಳಿದದ್ದೇ ಅಚ್ಚರಿ!:

    ಬ್ರಿಗೇಡಿಯರ್ ಐ.ಎನ್.ರೈ ಮೂಲತಃ ಗಡಿನಾಡು ಕಾಸರಗೋಡಿನವರು. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗದ ಬಳಿಕ ಮದ್ರಾಸಿನ ಆಫೀಸರ್ಸ್‌ ಟ್ರೇನಿಂಗ್ ಅಕಾಡೆಮಿ ಮೂಲಕ ಸೈನ್ಯಕ್ಕೆ ಸೇರಿದ್ದರು. ಫತೇಪುರ್ ಘಟನೆ ಬಳಿಕ ಕ್ಯಾಪ್ಟನ್ ಆಗಿ ಪದೋನ್ನತಿ ಪಡೆದರು, ಬಳಿಕ ನಾಗಾಲೆಂಡ್, ಲಡಾಖ್, ಶ್ರೀಲಂಕಾ ಶಾಂತಿಪಾಲನಾ ಕಾರ್ಯ, ಕಾರ್ಗಿಲ್ ಮುಂತಾದೆಡೆ ಸೇವೆ ಸಲ್ಲಿಸಿದ್ದಾರೆ. ಬ್ರಿಗೇಡಿಯರ್ ಆದ ಬಳಿಕ ಸಿಕ್ಕಿ-ಚೀನಾ ಗಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಲ್‌ಟಿಟಿಯ ನೆಲಬಾಂಬ್ ದಾಳಿಗೆ ತುತ್ತಾಗಿ ರೈ ಬದುಕುಳಿದಿದ್ದೇ ವಿಶೇಷ. ಈಗ ನಿವೃತ್ತರಾಗಿ ಮಂಗಳೂರಿನಲ್ಲಿ ನೆಲೆಸಿದ್ದಾರೆ.

    ರಾವತ್‌ ಸಾವಿನ ಬಗ್ಗೆ ನವೆಂಬರ್‌ನಲ್ಲಿಯೇ ಮುನ್ಸೂಚನೆ ಕೊಟ್ಟಿದ್ದ ಜ್ಯೋತಿಷಿ- ಪತ್ರಿಕೆಯಲ್ಲಿಯೂ ಪ್ರಕಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts