More

    ಸಿಡ್ನಿಯಲ್ಲಿ ಪಾಕ್‌ಗೆ ಆಸೀಸ್ ತಿರುಗೇಟು: ಕೊನೆಗೂ ಪತ್ತೆಯಾದ ವಾರ್ನರ್ ಕ್ಯಾಪ್

    ಸಿಡ್ನಿ: ವೇಗಿ ಆಮೀರ್ ಜಮಾಲ್ (69ಕ್ಕೆ 6) ಮಾರಕ ಬೌಲಿಂಗ್ ದಾಳಿ ನೆರವಿನಿಂದ ಪ್ರವಾಸಿ ಪಾಕಿಸ್ತಾನ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು ಇನಿಂಗ್ಸ್ ಮುನ್ನಡೆ ಸಾಧಿಸಿದರೂ, 2ನೇ ಇನಿಂಗ್ಸ್‌ನಲ್ಲಿ ಜೋಶ್ ಹ್ಯಾಸಲ್‌ವುಡ್ (9ಕ್ಕೆ4) ತಿರುಗೇಟಿನಿಂದ ತತ್ತರಿಸಿದೆ.

    ಎಸ್‌ಸಿಜಿಯಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನ ಶುಕ್ರವಾರ 2 ವಿಕೆಟ್‌ಗೆ 116 ರನ್‌ಗಳಿಂದ ಆಟ ಮುಂದುವರಿಸಿದ ಆಸೀಸ್, 109.4 ಓವರ್‌ಗಳಲ್ಲಿ 299 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 10 ರನ್ ಅಂತರದಲ್ಲಿ ಕೊನೇ 5 ವಿಕೆಟ್ ಕೈಚೆಲ್ಲಿದ ಆಸೀಸ್ 2020ರ ಬಳಿಕ ತವರಿನಲ್ಲಿ ಇನಿಂಗ್ಸ್ ಹಿನ್ನಡೆ ಕಂಡಿತು. 14 ರನ್‌ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಸರದಿ ಆರಂಭಿಸಿದ ಪಾಕ್ ದಿನದಂತ್ಯಕ್ಕೆ 7 ವಿಕೆಟ್‌ಗೆ 68 ರನ್‌ಗಳಿಸಿ ಸಂಕಷ್ಟದಲ್ಲಿದೆ. ಸದ್ಯ ಪಾಕ್ 85 ರನ್ ಮುನ್ನಡೆಯಲ್ಲಿದೆ.

    ಪಾಕಿಸ್ತಾನ: 313 ಹಾಗೂ 7 ವಿಕೆಟ್‌ಗೆ 68 (ಆಯೂಬ್ 33, ಬಾಬರ್ 23, ಶಕೀಲ್ 2, ರಿಜ್ವಾನ್ 6*, ಹ್ಯಾಜಲ್‌ವುಡ್ 9ಕ್ಕೆ4). ಆಸ್ಟ್ರೇಲಿಯಾ: 109.4 ಓವರ್‌ಗಳಲ್ಲಿ 299 (ಲಬುಶೇನ್ 60, ಸ್ಮಿತ್ 38, ಮಿಚೆಲ್ 54, ಕ್ಯಾರಿ 38, ಜಮಾಲ್ 69ಕ್ಕೆ 6, ಸಲ್ಮಾನ್ 43ಕ್ಕೆ2).

    ಪತ್ತೆಯಾದ ವಾರ್ನರ್ ಕ್ಯಾಪ್: ವಿದಾಯ ಪಂದ್ಯಕ್ಕೂ ಮುನ್ನ ನಾಪತ್ತೆಯಾಗಿದ್ದ ಆಸೀಸ್ ಬ್ಯಾಟರ್ ಡೇವಿಡ್ ವಾರ್ನರ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ತಂಡದ ಹೋಟೆಲ್‌ನಲ್ಲಿ ಪತ್ತೆಯಾಗಿದೆ. ಮೆಲ್ಬೋನ್‌ನಿಂದ ಸಿಡ್ನಿಗೆ ಪ್ರಯಾಣಿಸುವಾಗ ಕಳೆದುಕೊಂಡಿದ್ದ ಬ್ಯಾಗ್ 3ನೇ ಟೆಸ್ಟ್ ಪಂದ್ಯದ 3ನೇ ದಿನ ವಾರ್ನರ್ ತಂಗಿದ್ದ ಹೋಟೆಲ್ ರೂಮ್‌ನಲ್ಲಿ ದೊರೆತಿದೆ. ಸಂಪೂರ್ಣವಾಗಿ ಪ್ಯಾಕ್ ಮಾಡಲಾದ ಬ್ಯಾಗ್ ಎಲ್ಲ ವಸ್ತುಗಳೊಂದಿಗೆ ಸಿಕ್ಕಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. ಆದರೆ ರೂಮ್‌ನಲ್ಲಿ ಬ್ಯಾಗ್ ಹೇಗೆ ಬಂತು? ಯಾರು ಹಿಂದಿರುಗಿಸಿದ್ದಾರೆ ಎಂಬುದು ಇನ್ನೂ ಖಚಿತಗೊಂಡಿಲ್ಲ.

    ‘ಬ್ಯಾಗಿ ಗ್ರೀನ್ ಕ್ಯಾಪ್ ಪತ್ತೆಯಾಗಿದೆ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಯಾವುದೇ ಆಸೀಸ್ ಕ್ರಿಕೆಟಿಗನಿಗೆ ಈ ಕ್ಯಾಪ್ ತುಂಬ ವಿಶೇಷ. ಇದನ್ನು ಪತ್ತೆ ಮಾಡುವಲ್ಲಿ ಸಹಕರಿಸಿದ ಕಂಪನಿ, ಹೋಟೆಲ್, ತಂಡದ ನಿರ್ವಹಣೆ ಸಿಬ್ಬಂದಿಯನ್ನು ಪ್ರಶಂಸಿಸಿರುವ ವಾರ್ನರ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts