More

    ಪಾಳುಬಿದ್ದ ಭೂಮಿಯಲ್ಲೀಗ ಬೇಸಾಯ, ಹಸನಾಗುತ್ತಿವೆ ಕೃಷಿ ಭೂಮಿ, ನಗರದಿಂದ ಮರಳಿ ಬಂದವರು ವ್ಯವಸಾಯಕ್ಕೆ

    ಬೆಂಗಳೂರು ಗ್ರಾಮಾಂತರ: ಕರೊನಾ ಏನೆಲ್ಲಾ ಅವಾಂತರ ಸೃಷ್ಟಿಸಿದೆಯೋ ಹಾಗೆಯೇ ಕೆಲವೊಂದು ಆಶಾದಾಯಕ ಬೆಳವಣಿಗೆಗೂ ಮುನ್ನಡಿ ಬರೆದಿದೆ ಎಂದರೆ ತಪ್ಪಾಗಲಾರದು. ಪಾಳುಬಿದ್ದ ಭೂಮಿಯಲ್ಲಿ ಕೃಷಿ ಚಟುವಟಿಕೆ ಆರಂಭಕ್ಕೆ ಕರೊನಾ ಪರೋಕ್ಷವಾಗಿ ನೆರವಾಗಿದೆ.

    ಕೇಂದ್ರ ಸರ್ಕಾರ ಹೊರಡಿಸಿದ ಸುದೀರ್ಘ ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಂದ ಸ್ವಗ್ರಾಮಗಳತ್ತ ಮುಖಮಾಡಿದ ಅದೆಷ್ಟೋ ಕುಟುಂಬಗಳು ಲಾಕ್‌ಡೌನ್ ತೆರವಿನ ಬಳಿಕವೂ ನಗರಗಳತ್ತ ಮುಖ ಮಾಡಿಲ್ಲ. ಬದಲಾಗಿ ಸ್ವಗ್ರಾಮಗಳಲ್ಲೇ ನೇಗಿಲು ಹಿಡಿಯಲು ಮುಂದಾಗಿವೆ. ಇದರ ಫಲವಾಗಿ ಅದೆಷ್ಟೋ ವರ್ಷಗಳಿಂದ ಕೃಷಿ ಕಾಯಕವನ್ನೇ ಕಾಣದ ಭೂಮಿಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿವೆ.

    ನಗರದಲ್ಲಿ ಉದ್ಯೋಗ ಕಳೆದುಕೊಂಡು ಹತಾಶರಾಗಿದ್ದವರಿಗೆ ಭೂಮಿತಾಯಿ ಆಸರೆಯಾಗಿದ್ದಾಳೆ. ಇದೇ ವೇಳೆ ವರುಣ ದೇವ ಸಹ ಕರುಣೆ ತೋರಿರುವುದರಿಂದ ಮಣ್ಣಿನ ಮಕ್ಕಳು ಭೂಮಿ ತಾಯಿಯ ಋಣ ತೀರಿಸಲು ಸದವಕಾಶ ಮಾಡಿಕೊಟ್ಟಂತಾಗಿದೆ.

    ಪಾಲಕರಲ್ಲೂ ಸಂತಸ: ಹಲವು ವರ್ಷದಿಂದ ಉದ್ಯೋಗ ಅರಸಿ ನಗರ ಪ್ರದೇಶಗಳತ್ತ ಗುಳೆ ಹೊರಟಿದ್ದ ಮಕ್ಕಳು ಮತ್ತೆ ತವರಿಗೆ ಮರಳಿರುವುದು ಪಾಲಕರ ಸಂತಸಕ್ಕೆ ಕಾರಣವಾಗಿದೆ. ಅನಿವಾರ್ಯ ಕಾರಣಗಳಿಂದ ವರ್ಷಗಟ್ಟಲೆ ಮಕ್ಕಳ ಮುಖವನ್ನೇ ಕಾಣದ ಅದೆಷ್ಟೋ ಹಿರಿ ಜೀವಗಳ ಮುಖದಲ್ಲಿ ಮಂದಹಾಸ ಮಿನುಗಿದೆ. ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳಲ್ಲ ಎಂದು ಊರು ತೊರೆದಿದ್ದ ಅನೇಕ ಯುವಕರು ಊರೂರು ಸುತ್ತಿದ ಮೇಲೆ ನಮ್ಮೂರೇ ನಮಗೆ ಮೇಲು ಎಂಬಂತೆ ಸ್ವ ಗ್ರಾಮಗಳಲ್ಲಿ ನೆಲೆಕಂಡುಕೊಳ್ಳಲು ಮುಂದಾಗಿದ್ದಾರೆ.

    ಕೂಲಿ ಕಾರ್ಮಿಕರ ಕೊರತೆ ನೀಗಿಸಿದ ಕರೊನಾ: ಬೆಂಗಳೂರು ಸೇರಿ ವಿವಿಧ ಕಡೆಯ ಪಟ್ಟಣ ಪ್ರದೇಶಗಳು ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿದ್ದರೆ ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ಆ ಕೊರತೆ ನೀಗಿದೆ. ನಗರ ಪ್ರದೇಶಗಳಲ್ಲಿ ಉದ್ಯೋಗವಿಲ್ಲ ಎಂದು ಕೊರಗುತ್ತಿದ್ದ ಜನರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕೈತುಂಬ ಕೆಲಸ ಸಿಗುತ್ತಿದೆ.

    ನರೇಗಾ ವರದಾನ: ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ಭರದಿಂದ ಸಾಗಿದ್ದು ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದೆ. ಕಾಯಕಲ್ಪಗೊಂಡ ಕಲ್ಯಾಣಿ ಕೆರೆ-ಕುಂಟೆಗಳಲ್ಲಿ ನೀರು ಸಂಗ್ರಹವಾಗುತ್ತಿದೆ.

    ನರೇಗಾ ಯೋಜನೆಯಡಿ ಗ್ರಾಮಾಂತರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕಾರ್ಮಿಕರು ಸ್ಥಳೀಯವಾಗಿಯೇ ದುಡಿಮೆ ಮಾಡಬಹುದು. ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು.
    ಎನ್.ಎಂ.ನಾಗರಾಜ್, ಜಿಪಂ ಸಿಇಒ

    ಕರೊನಾ ಮಾರಿ ನಗರದಲ್ಲಿ ಮಕ್ಕಳ ಉದ್ಯೋಗ ಕಸಿದುಕೊಂಡರೂ ಹಳ್ಳಿಗಳಲ್ಲೇ ಉದ್ಯೋಗ ಮಾಡುವ ದಾರಿ ತೋರಿಸಿಕೊಟ್ಟಿದೆ. ಉಳುಮೆಯಿಲ್ಲದೆ ಪಾಳು ಬಿದ್ದಿದ್ದ ಭೂಮಿಯಲ್ಲಿ ಈ ಬಾರಿ ಹಸಿರು ಕಾಣುವ ಸೌಭಾಗ್ಯ ನಮ್ಮದಾಗಿದೆ.
    ರೇವಣ್ಣ, ಸಾಸಲು ಹೋಬಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts