More

    ಸಚಿವ ಶಿವಾನಂದ ಪಾಟೀಲ್ ಪಕ್ಷದಿಂದ ವಜಾಗೊಳಿಸಿ: ಕಪ್ಪುಪಟ್ಟಿ ಧರಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರತಿಭಟನೆ

    ಮಂಡ್ಯ: ರೈತ ಸಮುದಾಯವನ್ನು ಅವಮಾನಿಸಿರುವ ಸಚಿವ ಶಿವಾನಂದ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಕಾವೇರಿ ಹೋರಾಟಗಾರರು ಕಣ್ಣು ಮತ್ತು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
    ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ನಗರದ ಸರ್‌ಎಂವಿ ಪ್ರತಿಮೆ ಎದುರು ಕಾವೇರಿ ಹೋರಾಟಗಾರರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಚಿವ ಶಿವಾನಂದ ಪಾಟೀಲ್ ಭಾವಚಿತ್ರ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬರ ಪರಿಹಾರದ ಹಣಕ್ಕಾಗಿ ಬರಗಾಲ ಬರಲಿ ಎಂದು ರೈತರು ಕಾಯುತ್ತಾರೆಂದಿರುವ ಸಚಿವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಒತ್ತಾಯಿಸಿದರು.
    ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಆಳುವ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯು ಇಲ್ಲ. ಕಾವೇರಿ ಹೋರಾಟ ನಿರಂತರವಾಗಿ ನಡೆಯುತ್ತಿದ್ದರೂ ನೀರು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಲೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣ ಪೆದ್ದನ ರೀತಿ ವರ್ತಿಸುತ್ತಿದ್ದಾರೆ. ರೈತರನ್ನ ಅವಮಾನಿಸಿರುವ ಸಚಿವನನ್ನು ಇನ್ನೂ ಸಹ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆಂದು ಕಿಡಿಕಾರಿದರು.
    ಸ್ವಾಭಿಮಾನದಿಂದ ಬದುಕುತ್ತಿರುವ ರೈತರು, ತಮ್ಮ ಶ್ರಮದಿಂದಲೇ ಜೀವನ ಮಾಡುತ್ತಾರೆ. ಯಾವುದೇ ಪಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಭೂಮಿ ನಂಬಿ ಕೃಷಿ ಮಾಡುವ ರೈತರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ಯೋಗ್ಯನಲ್ಲ. ಈತನನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
    ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕೃಷ್ಣಪ್ರಕಾಶ್,ದಸಂಸ ಎಂ.ವಿ.ಕೃಷ್ಣ, ಜೈ ಕರ್ನಾಟಕ ಪರಿಷತ್‌ನ ಎಸ್.ನಾರಾಯಣ್, ಸುಶೀಲಮ್ಮ ಇತರರಿದ್ದರು.
    ಮುಂದುವರೆದ ಉಪವಾಸ: ಕಾವೇರಿ ಕೊಳ್ಳದ ಜಲಾಶಯ ಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 113 ಹಾಗೂ ಸರದಿ ಉಪವಾಸ ಸತ್ಯಾಗ್ರಹ 32ನೇ ದಿನ ಪೂರೈಸಿತು.
    ಸರ್‌ಎಂವಿ ಪ್ರತಿಮೆ ಎದುರು ಸರದಿ ಉಪವಾಸದಲ್ಲಿ ನಿವೃತ್ತ ಇಂಜಿನಿಯರ್ ಕೆಂಪೇಗೌಡ, ಹುಳ್ಳೇನಹಳ್ಳಿ ಎಚ್.ಸಿ.ಚನ್ನೇಗೌಡ, ಕೀಲಾರ ಕೆ.ಬಿ.ಕೆಂಪೇಗೌಡ, ಕೋಣನಹಳ್ಳಿ ಕರಿಯಪ್ಪ, ಸಿದ್ದಯ್ಯನಕೊಪ್ಪಲು ಎಸ್.ಎಲ್.ಸಿದ್ದೇಗೌಡ ಹಾಗೂ ಮಂಡ್ಯ ಕಾವೇರಿ ನಗರದ ಎಸ್.ಪಿ.ನಾರಾಯಣಸ್ವಾಮಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts