More

    ಬೆಳೆಗೆ ನೀರಿಲ್ಲದೆ ರೈತರು ಹೈರಾಣ

    ಪ್ರತಾಪ್ ಟಿ.ಕೋಡಿನರಸೀಪುರ ನಂಜನಗೂಡು
    ಕಬಿನಿ ಜಲಾಶಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸದೆ ಬೇಸಿಗೆ ಬೆಳೆಗೆ ನೀರಿಗಾಗಿ ರೈತರು ಆಕಾಶ ನೋಡುವಂತಾಗಿದೆ. ಬರಗಾಲ ಹಾಗೂ ಬೇಸಿಗೆಯ ಬಿಸಿಲ ತಾಪದಿಂದ ತತ್ತರಿಸುತ್ತಿರುವ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ.

    ಕಪಿಲಾ ನದಿಗೆ ಹುಲ್ಲಹಳ್ಳಿ ಬಳಿ ತಾಕು ನಿರ್ಮಾಣ ಮಾಡಿ ಅದರಿಂದ ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗಳಿಗೆ ನೀರು ಹರಿಸಲಾಗುತ್ತಿತ್ತು. ಜತೆಗೆ ಕಬಿನಿ ಜಲಾಶಯದಿಂದ ಕಬಿನಿ ಬಲದಂಡೆ, ಕಬಿನಿ ಎಡದಂತೆ, ನುಗು ಜಲಾಶಯದಿಂದ ಬೀಳ್ವಾರು ನಾಲೆಗೆ ನೀರು ಹರಿಸುವುದರಿಂದ ನಂಜನಗೂಡು ಸೇರಿದಂತೆ ಸರಗೂರು, ಎಚ್.ಡಿ.ಕೋಟೆ, ತಿ.ನರಸೀಪುರ ತಾಲೂಕಿನ ಸಾವಿರಾರು ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತಿತ್ತು. ಆದರೆ, ಪ್ರಸಕ್ತ ಬಾರಿ ಕಬಿನಿ ಜಲಾಶಯವೇ ಬರಡಾಗಿರುವುದರಿಂದ ನಾಲೆಗಳಲ್ಲಿ ನೀರು ಕಾಣದಾಗಿದೆ.

    ಕಬಿನಿ ಬಲದಂಡೆ ನಾಲೆಗೆ ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ನೀರು ಹರಿಸಲಾಗಿದ್ದು, ಇದರಿಂದ ರೈತರು ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿಗೆ ಸಿಲುಕಿದ್ದಾರೆ. ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗಳಿಗಂತೂ ನೀರು ಹರಿಸುವುದಿಲ್ಲ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕನಿಷ್ಠ ಜಾನುವಾರುಗಳಿಗೆ ಕುಡಿಯಲು ನೀರು ಬಿಡುತ್ತಾರೆ ಎಂಬ ಆಶಾಭಾವನೆಯಲ್ಲಿ ರೈತರಿದ್ದರು. ಆದರೆ, ಕಡಿಮೆ ಪ್ರಮಾಣದಲ್ಲಿ ನೀರು ಹರಿಸಿದರೆ ನಾಲೆಗಳಲ್ಲಿ ಚರಂಡಿ ತ್ಯಾಜ್ಯವೆಲ್ಲ ಸೇರಿ ಮಲಿನ ನೀರು ಹರಿಯುವುದರಿಂದ ಜಾನುವಾರುಗಳಿಗೂ ಕುಡಿಯಲು ತೊಂದರೆಯಾಗಬಹುದು ಎಂಬ ಕಾರಣಕ್ಕೆ ಅಲ್ಪ ಪ್ರಮಾಣದಲ್ಲೂ ನೀರು ಹರಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುವುದರಿಂದ ಹುಲ್ಲಹಳ್ಳಿ ಹಾಗೂ ರಾಂಪುರ ನಾಲೆಗಳಲ್ಲಿ ನೀರು ಕಾಣುವುದು ದೂರದ ಮಾತಾಗಿದೆ.

    ಕೃಷಿಗೆ ನಾಲೆ ನೀರೇ ಆಧಾರ: ತಾಲೂಕಿನ 21 ಸಾವಿರ ಹೆಕ್ಟೇರ್ ಭೂಪ್ರದೇಶ ನಾಲೆ ನೀರಾವರಿಯನ್ನೇ ಆಶ್ರಯಿಸಿದ್ದು, ರೈತರು ಭತ್ತದ ಬೆಳೆಯನ್ನೇ ಪ್ರಮುಖ ಬೇಸಾಯವನ್ನಾಗಿಸಿಕೊಂಡಿದ್ದಾರೆ. ನುಗು ನಾಲಾ ವ್ಯಾಪ್ತಿಯಲ್ಲಿ 7332 ಹೆಕ್ಟೇರ್, ರಾಂಪುರ ನಾಲೆ 2711, ಹುಲ್ಲಹಳ್ಳಿ ನಾಲೆ 2766 ಹಾಗೂ ಕಬಿನಿ ಬಲದಂಡೆ ನಾಲೆ 8117 ಹೆಕ್ಟೇರ್ ಸೇರಿದಂತೆ ಒಟ್ಟು 20926 ಹೆಕ್ಟೇರ್ ಭೂಪ್ರದೇಶಕ್ಕೆ ನಾಲಾ ನೀರೇ ಆಧಾರವಾಗಿದೆ. ಅಣೆಕಟ್ಟೆ ಭರ್ತಿಯಾಗಿಲ್ಲ ಎಂದು ನುಗು ನಾಲೆ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸಲಿಲ್ಲ. ಜತೆಗೆ ವರುಣ ನಾಲೆಗೆ ಸೇರಿದಂತೆ ತಾಲೂಕಿನಲ್ಲಿ 755 ಹೆಕ್ಟೇರ್ ಭೂಪ್ರದೇಶವಿದ್ದರೂ ವರುಣ ನಾಲೆಯಿಂದಲೂ ಬೆಳೆ ಬೆಳೆಯಲು ನೀರು ಹರಿಸಲಾಗುತ್ತಿಲ್ಲ.

    ಜನವರಿ ಕೊನೆಯಲ್ಲಿ ಅಥವಾ ಫೆಬ್ರವರಿ ತಿಂಗಳಲ್ಲಿ ನೀರು ಹರಿಸುವ ಕುರಿತು ನೀರಾವರಿ ಇಲಾಖೆ ಅಧಿಕಾರಿ ರೈತರಿಗೆ ಮಾಹಿತಿ ನೀಡಬೇಕಿತ್ತು. ನಾಲೆಯಲ್ಲಿ ನೀರು ಬಿಡುವ ಕುರಿತು ಅನಿಶ್ಚಿತತೆ ಮುಂದುವರಿದಿರುವುದರಿಂದ ರೈತರೂ ಭತ್ತದ ಬಿತ್ತನೆಗೆ ಅವಶ್ಯವಾದ ಸಿದ್ಧತೆಯನ್ನು ಕೈಗೊಂಡಿಲ್ಲ. ಹೀಗಾಗಿ ಕೃಷಿ ಇಲಾಖೆ ಈವರೆಗೂ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸುವ ಗೋಜಿಗೆ ಹೋಗಿಲ್ಲ.
    ಈಗಾಗಲೇ ನಂಜನಗೂಡು ತಾಲೂಕನ್ನು ಬರಪೀಡಿತ ಎಂದು ಗುರುತಿಸಲಾಗಿದ್ದು, ತೀವ್ರ ಬರದಿಂದಾಗಿ ತಾಲೂಕಿನಲ್ಲಿ ಜಾನುವಾರುಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಇಳಿದಿದ್ದು ಜಾನುವಾರುಗಳ ಹಿತದೃಷ್ಟಿಯಿಂದಾದರೂ ನಾಲೆಗಳಿಗೆ ನೀರು ಹರಿಸದಿದ್ದಲ್ಲಿ ಮೇವಿನ ಕೊರತೆ ಎದುರಾಗಲಿದೆ. ಜತೆಗೆ ರೈತ ಕುಟುಂಬಗಳ ಆರ್ಥಿಕ ಸಂಕಷ್ಟ ಹೆಚ್ಚಳಗೊಳ್ಳುವ ಆತಂಕವಿದೆ.

    ಕೆಲಸವಿಲ್ಲದೆ ಕಂಗಾಲು: ಕೃಷಿ ಭೂಮಿಯನ್ನೇ ನಂಬಿರುವ ರೈತರು ಕೆಲಸವಿಲ್ಲದೇ ಕೈಕಟ್ಟಿ ಕೂರುವಂತಾಗಿದೆ. ಬೇರೆ ಉದ್ಯೋಗವೂ ಇಲ್ಲದೆ ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ ಎಂಬ ಚಿಂತೆಯಲ್ಲಿ ರೈತರು ಮುಳುಗಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ರೈತರ ಗೋಳು ಕೇಳುವವರಿಲ್ಲದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts