More

    ತೆಂಗಿನ ಫಸಲು ಉಳಿಸಿಕೊಳ್ಳಲು ರೈತರ ಹರಸಾಹಸ

    ಮದ್ದೂರು: ತಾಲೂಕಿನಲ್ಲಿ ಬರ ಎದುರಾಗಿರುವ ಹಿನ್ನೆಲೆಯಲ್ಲಿ ತೆಂಗಿನ ಫಸಲು ಉಳಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದು, ಹಣ ನೀಡಿ ಟ್ಯಾಂಕರ್ ಮೂಲಕ ನೀರು ಹಾಕಿಸುವ ದುಸ್ಥಿತಿ ಎದುರಾಗಿದೆ.

    ಪಟ್ಟಣದ ಚನ್ನೇಗೌಡನದೊಡ್ಡಿ, ತಾಲೂಕಿನ ಆಲೂರು, ಗೊರವನಹಳ್ಳಿ, ಕೆ.ಹೊನ್ನಲಗೆರೆ, ಗೊಲ್ಲರದೊಡ್ಡಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸತತವಾಗಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೆಂಗಿನ ಸಸಿಗಳು ಮತ್ತು ಮರಗಳು ನೀರಿಲ್ಲದೆ ಒಣಗುತ್ತಿವೆ. ಒಣಗುತ್ತಿರುವ ಸಸಿಗಳನ್ನು ಮತ್ತು ಮರಗಳನ್ನು ಉಳಿಸಲು ರೈತರು ಕಸರತ್ತು ನಡೆಸುತ್ತಿದ್ದಾರೆ.

    ಕೆ.ಆರ್.ಎಸ್. ಅಣೆಕಟ್ಟೆಯಿಂದ ನಾಲೆಗಳ ಮೂಲಕ ನೀರು ಹರಿಸದ ಪರಿಣಾಮ, ಮಳೆ ಬಂದು ಹಲವು ತಿಂಗಳಾದ ಕಾರಣ ಅಂತರ್ಜಲ ಕುಸಿದಿದೆ. ಕೆಲವು ಕಡೆಗಳಲ್ಲಿ ಬೋರ್‌ವೆಲ್ ಇದ್ದರೂ ನೀರು ಬರುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರು ವುದರಿಂದ ವಿಧಿಯಿಲ್ಲದೆ ಟ್ಯಾಂಕರ್ ಮೂಲಕ ನೀರು ಹಾಕಿಸಲಾಗುತ್ತಿದೆ.

    ತಾಲೂಕಿನಲ್ಲಿ 6400 ಹೆಕ್ಟೇರ್ ಪ್ರದೇಶದಲ್ಲಿ 8 ಲಕ್ಷ ತೆಂಗಿನ ಸಸಿಗಳು ಮತ್ತು ಮರಗಳಿದ್ದು, ಬಿಸಿಲಿಗೆ ಸಸಿಗಳು ನೀರಿಲ್ಲದೆ ಒಣಗುತ್ತಿವೆ. ಅಂತೆಯೇ ಮರಗಳು ಕೀಟಬಾಧೆ ಮತ್ತು ರೋಗದಿಂದ ನಾಶವಾಗಬಹುದು ಎಂಬ ಆತಂಕ ಮನೆ ಮಾಡಿದೆ.

    ಮಳೆ ಬಾರದ ಕಾರಣ ಬೋರ್‌ವೆಲ್‌ಗಳಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ. ಇದರಿಂದ ನೀರಿಲ್ಲದೆ ತೆಂಗಿನ ಸಸಿ ಮತ್ತು ಮರಗಳು ಒಣಗುತ್ತಿವೆ. ರೈತರು ಈ ಸಂಬಂಧ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದರೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
    ಕೆ.ಎಂ.ರೇಖಾ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮದ್ದೂರು

    ಮಳೆಯಿಲ್ಲದ ಕಾರಣ ಹಾಗೂ ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಬಾರದ ಕಾರಣ ತೆಂಗಿನ ಸಸಿಗಳನ್ನು ಉಳಿಸಿಕೊಳ್ಳಲು ಹಣ ನೀಡಿ ಟ್ಯಾಂಕರ್ ಮೂಲಕ ನೀರು ಹಾಕಿಸಲಾಗುತ್ತಿದೆ. ಶೀಘ್ರ ಮಳೆ ಬಾರದೆ ಹೋದರೆ ತೆಂಗಿನ ಸಸಿಗಳು ಒಣಗಿ ಹೋಗಿ ನಷ್ಟ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು.
    ಸಿ.ಎಂ.ಪ್ರಸನ್ನಕುಮಾರ್ ಯುವ ರೈತ, ಚನ್ನೇಗೌಡನದೊಡ್ಡಿ

    ಮದ್ದೂರು ತಾಲೂಕಿನ ಹಲವಾರು ಗ್ರಾಮಗಳಲ್ಲಿ ತೆಂಗಿನ ಮರಗಳು ಹಾಗೂ ಸಸಿಗಳು ನೀರಿಲ್ಲದೆ ಒಣಗುತ್ತಿರುವುದು ಆತಂಕ ಮೂಡಿಸಿದೆ. ಸರ್ಕಾರ ಅಗತ್ಯ ಕ್ರಮ ಕೈಗೊಂಡು ತೆಂಗಿನ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಒಣಗಿರುವ ತೆಂಗಿನ ಮರಗಳಿಗೆ ಹಾಗೂ ಸಸಿಗಳಿಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು.
    ಅಶೋಕ್ ಗೊಲ್ಲರದೊಡ್ಡಿ ರೈತ ಸಂಘದ ಮುಖಂಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts