More

    ಎಕರೆಗೆ 25 ಸಾವಿರ ರೂ. ಪರಿಹಾರ ನೀಡಲು ರೈತರ ಆಗ್ರಹ; ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ

    ಹಾವೇರಿ: ಅನಾವೃಷ್ಟಿಯಿಂದ ಹಾಳಾದ ಬೆಳೆಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಹೊಸ ಪಂಪಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
    ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತ ವಿರೋಧ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಿದ್ದಪ್ಪ ವೃತ್ತದಲ್ಲಿ ವಾಹನ ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೇಡಿಕೆ ಈಡೇರಿಸಲು ಎರಡೂ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
    ರೈತರಿಗೆ ಬೆಂಬಲ ನೀಡಿದ್ದ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಬರಗಾಲದಿಂದಾಗಿ ರೈತರ ಬದುಕು ಕಷ್ಟಕರವಾಗಿದೆ. ಉಪವಾಸ ಕುಳಿತು ಪ್ರತಿಭಟನೆ ಮಾಡುವ ಸ್ಥಿತಿ ರೈತರಿಗೆ ಬರಬಾರದಿತ್ತು. ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸಬೇಕು. ಬೆಳೆವಿಮೆ, ಬರ ಪರಿಹಾರ ಕೊಡಬೇಕು. ಬರಗಾಲದಿಂದ ಹಾನಿಯಾದ ಬೆಳೆಗೆ ಸರ್ಕಾರ ಎಕರೆಗೆ 2 ಸಾವಿರ ರೂ. ನೀಡಿದರೆ ಈ ಹಣ ರೈತರ ಬಸ್ ಚಾರ್ಜ್‌ಗೂ ಸಾಕಾಗಲ್ಲ. ಹಣ ಕೊರತೆಯಿದ್ದರೆ ನಾವೇ 2100 ರೂ. ಕೊಡುತ್ತೇವೆ ಎಂದರು.
    ನಾಡಿನ ಜಿಲ್ಲೆಯ ಎಲ್ಲ ಮಠಾಧೀಶರ ಬೆಂಬಲ ರೈತರಿಗಿದೆ. ಓಟು ಪಡೆದ ನಾಯಕರು ನಾಲಾಯಕರಾಗಬಾರದು. ಅನ್ನರಾಮಯ್ಯ ಎಂದು ಹೆಸರು ಪಡೆದ ಸಿಎಂ ಸಿದ್ದರಾಮಯ್ಯ ರೈತರ ಕಷ್ಟಗಳಿಗೆ ಸ್ಪಂದಿಸಿ, ರೈತ ರಾಮಯ್ಯ ಆಗಬೇಕು ಎಂದು ಒತ್ತಾಯಿಸಿದರು.
    ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಜತೆಯಾಗಿ 28 ಸ್ಥಾನ ಗೆಲ್ಲಲು ಮುಂದಾಗಿದ್ದಾರೆ. ಕಾಂಗ್ರೆಸ್‌ನವರು 20 ಸ್ಥಾನ ಗೆಲ್ಲಲು ತಂತ್ರ ರೂಪಿಸುತ್ತಿದ್ದಾರೆ. ಈ ಚುನಾವಣೆ ಗುಂಗಿನಲ್ಲಿ ರೈತರನ್ನು ಸರ್ಕಾರಗಳು ಮರೆತಿವೆ. ಈ ದೇಶಕ್ಕೆ ಅನ್ನ ನೀಡುವ ರೈತರು ಬಿಸಿಲಿನಲ್ಲಿ ರಸ್ತೆಯಲ್ಲಿ ಕುಳಿತು ಧರಣಿ ಮಾಡಿ, ಬರ ಪರಿಹಾರ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿದರು.
    ಪ್ರಮುಖರಾದ ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ, ದಿಳ್ಳೆಪ್ಪ ಕಂಬಳಿ, ಸುರೇಶ ಚಲವಾದಿ, ಕರಬಸಪ್ಪ ಅಗಸಿಬಾಗಿಲ, ಗಂಗಪ್ಪ ಎಲಿ, ಮರಿಗೌಡ ಪಾಟೀಲ, ಶಂಕ್ರಪ್ಪ ಶಿರಗಂಬಿ, ಪ್ರಭು ಪ್ಯಾಟಿ, ಶಿವಬಸಪ್ಪ ಗೋವಿ, ಸುರೇಶ ಹೊನ್ನಕ್ಕಳವರ, ಬಸವನಗೌಡ ಗಂಗಪ್ಪನವರ, ಸುರೇಶ ದುಳಿಹೊಳಿ, ರಮೇಶ ಕರಬಸಳ್ಳೇರ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.
    ಅಹೋರಾತ್ರಿ ಧರಣಿ ಆರಂಭ…
    ಹೊಸಮನಿ ಸಿದ್ಧಪ್ಪ ವೃತ್ತದಿಂದ ಜಿಲ್ಲಾಡಳಿತ ಕಚೇರಿ ವರೆಗೆ ಪಾದಯಾತ್ರೆ ಮೂಲಕ ತೆರಳಿದ ರೈತರು ಜಿಲ್ಲಾಡಳಿತ ಭವನದ ಎದುರು ಅಹ್ರೋರಾತ್ರಿ ಧರಣಿ ಆರಂಭಿಸಿದರು. ಸರ್ಕಾರ ಕೂಡಲೇ ಬರಪೀಡಿತ ಜಿಲ್ಲೆಯ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಬೆಳೆವಿಮೆ ನೀಡಬೇಕು. ರೈತರ ಹೊಸ ಪಂಪಸೆಟ್‌ಗಳಿಗೆ ಕೂಡಲೇ ವಿದ್ಯುತ್ ನೀಡುವುದು ಸೇರಿ ರೈತರ ವಿವಿಧ ಬೇಡಿಕೆ ಈಡೇರಿಸಬೇಕು. ಸರ್ಕಾರ ರೈತರಿಗೆ ಪರಿಹಾರ ನೀಡುವವರೆಗೂ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಕೈಬಿಡುವುದಿಲ್ಲ ಎಂದು ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts