More

    ರೈಲು ತಡೆಗೆ ಯತ್ನಿಸಿದ ರೈತರ ಬಂಧನ ; ತುಮಕೂರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆಗೆ ಯತ್ನ

    ತುಮಕೂರು : ದೆಹಲಿಯಲ್ಲಿ ರೈತರ ಪ್ರತಿಭಟನೆ ಬೆಂಬಲಿಸಿ ತುಮಕೂರಿನಲ್ಲಿ ಗುರುವಾರ ರೈಲು ತಡೆದು ಪ್ರತಿಭಟನೆ ನಡೆಸಲು ಮುಂದಾದ ರೈತ ಸಂಘ ಮತ್ತು ಹಸಿರುಸೇನೆ ಹಾಗೂ ಎಐಕೆಸಿಸಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

    ನಗರದ ರೈಲು ನಿಲ್ದಾಣದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಹಾಗೂ ಎಕೆಐಸಿಸಿಯ ಆರ್.ಕೆ.ಎಸ್.ಸ್ವಾಮಿ ನೇತೃತ್ವದಲ್ಲಿ ರೈಲು ತಡೆಯಲು ಮುಂದಾಗಲಾಯಿತು. ಆಗ ಪೊಲೀಸರು ಮುಖ್ಯದ್ವಾರದಲ್ಲಿಯೇ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

    ಆನಂದ ಪಟೇಲ್ ಮಾತನಾಡಿ, ರೈತರಿಗೆ ಮರಣ ಶಾಸನವಾಗಿರುವ ನಾಲ್ಕು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ 90 ದಿನಗಳಿಂದ ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದನ್ನು ಬೆಂಬಲಿಸಿ ಇಂದು ದೇಶದಾದ್ಯಂತ ರೈತರು, ರೈತ ಸಂಘಟನೆಯ ಕಾರ್ಯಕರ್ತರುಗಳು ರೈಲು ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.

    ರೈತರಿಗೆ ಮಾರಕವಾಗಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ. ಆದರೆ ಸರ್ಕಾರ ಬಂಡತನ ತೋರುತ್ತಿದೆ, ಒಂದೊಂದಾಗಿ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ಬರದಿಂದ ಸಾಗಿದೆ ಎಂದು ದೂರಿದರು. ಸಂತೆ ದಲ್ಲಾಳಿಯಂತೆ ಮನಸ್ಸಿಗೆ ಬಂದಷ್ಟು ಹಣಕ್ಕೆ ಮಾರಾಟ ಮಾಡುತಿದ್ದು, ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ, ಪಂಜಾಬ್‌ನ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗ ಆಗಿದೆ. ಇದೇ ರೀತಿ ಪರಿಸ್ಥಿತಿಯನ್ನು ದೇಶದ ಎಲ್ಲ ರಾಜ್ಯಗಳಲ್ಲಿಯೂ ಮುಂದಿನ ದಿನಗಳಲ್ಲಿ ಬಿಜೆಪಿ ಅನುಭವಿಸಲಿದೆ ಎಂದು ಎಚ್ಚರಿಸಿದರು.

    ಪ್ರಧಾನಿ ನರೇಂದ್ರಮೋದಿ ಚಳವಳಿಗಾರರನ್ನು ಆಂದೋಲನ ಜೀವಿ ಎಂದು ಜರಿಯುವ ಮೂಲಕ ಹಿಯಾಳಿಸುವ ಕೆಲಸ ಮಾಡಿದ್ದಾರೆ. ಆದರೆ, ಅವರು ಮರೆತಿರಬಹುದು, ಅಣ್ಣಾ ಹಜಾರೆಯ ನೇತೃತ್ವದ ಹೋರಾಟದ ಮೂಲಕ ತಾನು ಪ್ರಧಾನಿ ಹುದ್ದೆಗೆ ಬಂದಿದ್ದು, ಇವರ ಭಂಡತನ ಹೀಗೆಯೇ ಮುಂದುವರಿದರೆ ಜನ ತಿರುಗಿ ಬೀಳಲಿದ್ದಾರೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ್ ಆರಾಧ್ಯ, ತಾಲೂಕು ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು, ಅನಿಲ್‌ಕುಮಾರ್, ತಾಳೇಕೆರೆ ನಾಗೇಂದ್ರ, ಲಕ್ಕಣ್ಣ, ಬಸ್ತಿಹಳ್ಳಿ ರಾಜಣ್ಣ, ತಿಮ್ಮಲಾಪುರ ದೇವರಾಜು, ಪ್ರಕಾಶ್, ರುದ್ರೇಗೌಡ, ಮಲ್ಲಿಕಾರ್ಜುನ, ಬಸವರಾಜು, ಶಂಕರಲಿಂಗಣ್ಣ, ಆರ್.ಕೆ.ಎಸ್‌ನ ಕಲ್ಯಾಣಿ, ಆಶ್ವಿನಿ ಮತ್ತಿತರರು ನೇತೃತ್ವ ವಹಿಸಿದ್ದರು.

    ರೈತರ ಹೋರಾಟ ಇಡೀ ವಿಶ್ವದ ಗಮನ ಸಳೆದಿದೆ, ಭಾರತದ ಮಾನ ಹರಾಜಾಗುತ್ತಿದ್ದರೂ ಪ್ರಧಾನ ಮಂತ್ರಿ ದೇಶದ ಸಂಪತ್ತನ್ನು ಮಾರಾಟ ಮಾಡಲು ಮಾಡುತ್ತಿದ್ದಾರೆ. ಕಣ್ಣಿದ್ದು, ಕುರುಡಾಗಿ, ಕಿವಿಯಿದ್ದು ಕಿವುಡಾಗಿರುವ ಈ ಸರ್ಕಾರದ ಜನವಿರೋಧಿ ನೀತಿಗಳೇ ಇವರಿಗೆ ಮುಳುವಾಗಲಿವೆ.
    ಸ್ವಾಮಿ ಆರ್.ಕೆ.ಎಸ್‌ನ ಜಿಲ್ಲಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts