More

    ಎಕರೆಗೆ 30 ಸಾವಿರ ರೂ. ಪರಿಹಾರಕ್ಕೆ ಆಗ್ರಹ – ಬೀದಿಗಿಳಿದ ಅನ್ನದಾತರು 

    ದಾವಣಗೆರೆ: ಬೆಳೆಹಾನಿ ಸಂಬಂಧ ಎಕರೆಗೆ 30 ಸಾವಿರ ರೂ. ಪರಿಹಾರ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಪದಾಧಿಕಾರಿಗಳು, ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
    ಕೈಗಳಲ್ಲಿ ಹಿಡಿದ ಹಸಿರು ಶಾಲುಗಳನ್ನು ಬೀಸುತ್ತಾ ಜಯದೇವ ವೃತ್ತದಿಂದ ಮೆರವಣಿಗೆ ಆರಂಭಿಸಿದ ರೈತರು ಪಿಬಿ ರಸ್ತೆ ಮೂಲಕ ಎಸಿ ಕಚೇರಿಗೆ ತೆರಳಿ, ಎಸಿ ಎನ್. ದುರ್ಗಾಶ್ರೀ ಅವರಿಗೆ ಮನವಿ ಸಲ್ಲಿಸಿದರು.
    ಎಕರೆ ಭೂಮಿ ಉಳುಮೆ, ಬಿತ್ತನೆಗೆ ಕನಿಷ್ಟ 25 ಸಾವಿರ ರೂ. ವೆಚ್ಚವಾಗಲಿದೆ. ಆದರೆ, ರಾಜ್ಯ ಸರ್ಕಾರ ಎಕರೆಗೆ 2 ಸಾವಿರ ರೂ.ಗಳ ಪರಿಹಾರ ಘೋಷಿಸಿರುವುದು ಅವೈಜ್ಞಾನಿಕವಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಆಗಲಿ, ಎಕರೆಗೆ ನ್ಯಾಯೋಚಿತವಾಗಿ 30 ಸಾವಿರ ರೂ. ನೀಡಬೇಕು ಎಂದು ಒತ್ತಾಯಿಸಿದರು.
    ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಅಕ್ರಮ-ಸಕ್ರಮ ಯೋಜನೆ ಮುಂದುವರಿಸಬೇಕು. ಎಲ್.ಟಿ. ಲೈನ್ 500 ಮೀ. ಒಳಗಿದ್ದರೆ ವಿದ್ಯುತ್ ಪರಿವರ್ತಕ, ಇದಕ್ಕಿಂತ ಹೆಚ್ಚು ದೂರದಲ್ಲಿದ್ದರೆ ಸೋಲಾರ್ ಅಳವಡಿಸುವ ಬೆಸ್ಕಾಂ ನಿರ್ಧಾರ ಸರಿಯಲ್ಲ. ಸೋಲಾರ್ ಅಥವಾ ವಿದ್ಯುತ್ ಸಂಪರ್ಕದ ಆಯ್ಕೆಯನ್ನು ರೈತರಿಗೇ ಬಿಡಬೇಕು ಎಂದು ಆಗ್ರಹಿಸಿದರು.
    ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗ ಉದ್ಘಾಟನೆಗೊಂಡಿದ್ದ ಬಹುಕೋಟಿ ರೂ. ವೆಚ್ಚದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಸ್ಥಗಿತವಾಗಿದೆ. ಮೂವರು ಮುಖ್ಯಮಂತ್ರಿಗಳ ಅವಧಿಯಲ್ಲಿ ಕೆರೆಗಳಿಗೆ ಪೈಪ್‌ಲೈನ್ ಅಳವಡಿಕೆ ನಡೆದರೂ ಪೂರ್ಣಗೊಂಡಿಲ್ಲ. ಸರ್ಕಾರ ಕಾಮಗಾರಿ ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿದರು.
    ಬಗರ್‌ಹುಕುಂ ಸಾಗುವಳಿ ಫಾರಂ ನಂ. 52, 53, 57 ಅರ್ಜಿಗಳನ್ನು ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅಹವಾಲುಗಳನ್ನು ಪರಿಶೀಲಿಸಿ ಹಕ್ಕುಪತ್ರಗಳನ್ನು ನೀಡಬೇಕು. ಫಾರಂ 57ಕ್ಕೆ ತರಲಾದ ಹೊಸ ಕಾಯ್ದೆಯಲ್ಲಿನ ಕಾನೂನನ್ನು ಸಡಿಲಗೊಳಿಸಬೇಕೆಂದು ಒತ್ತಾಯಿಸಿದರು.
    ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ತಾಲೂಕು ಸಮಿತಿ ಮುಖಂಡರಾದ ಯಲೋದಹಳ್ಳಿ ರವಿ, ಪಾಮೇನಹಳ್ಳಿ ಗೌಡ್ರು ಶೇಖರಪ್ಪ, ಕುರ್ಕಿ ಹನುಮಂತ, ನಿಟುವಳ್ಳಿ ಪೂಜಾರ್ ಅಂಜಿನಪ್ಪ, ಆಲೂರು ಪರಶುರಾಂ, ಕೋಲ್ಕುಂಟೆ ಉಚ್ಚೆಂಗಪ್ಪ, ಚಿಕ್ಕಮಲ್ಲನಹಳ್ಳಿ ಚಿರಂಜೀವಿ, ಕೋಲ್ಕುಂಟೆ ಬಸಣ್ಣ, ಗುಮ್ಮನೂರು ಬಸವರಾಜ್, ರಾಜನಹಳ್ಳಿ ರಾಜು, ಹುಚ್ಚವ್ವನಹಳ್ಳಿ ಪ್ರಕಾಶ್, ಸಿದ್ದಪ್ಪನಾಯಕ್, ಸತೀಶ್ ಗೌಡಗೊಂಡನಹಳ್ಳಿ, ಶರಣಮ್ಮ, ಮಂದಾಕಿನಿ, ಇಶಾಂತಿ, ವನಿತಾ, ಗುಣಸುಂದರಿ ಇತರರಿದ್ದರು.
    ———

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts