More

    ವಿಮಾ ಪ್ರಚಾರ ವಾಹನ ತಡೆದು ರೈತರ ಆಕ್ರೋಶ

    ಲಕ್ಷ್ಮೇಶ್ವರ: ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣ ಪಾವತಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಪ್ರಚಾರ ವಾಹನವನ್ನು ಪಟ್ಟಣದಲ್ಲಿ ಮಂಗಳವಾರ ತಡೆದ ರೈತರು ವಿಮಾ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ‘ರೈತರಿಂದ ಬೆಳೆ ವಿಮೆ ಕಂತು ಮಾತ್ರ ತುಂಬಿಕೊಳ್ಳುವ ಕಂಪನಿಗಳು ರೈತರಿಗೆ ನಷ್ಟವಾದಾಗ ಪರಿಹಾರ ಕೊಡುವುದಿಲ್ಲ. ಕಳೆದ ವರ್ಷದ ವಿಮೆ ಪರಿಹಾರಕ್ಕಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈಗ ಮತ್ತೆ ಬರಿಗೈಯಲ್ಲಿರುವ ರೈತರ ಮನವೊಲಿಸಿ, ಸಾಲಗಾರರನ್ನಾಗಿಸಿ ವಿಮೆ ಪಾವತಿಸಿಕೊಳ್ಳುವ ಕಂಪನಿಗಳ ಬಗ್ಗೆ ಭರವಸೆ ಇಲ್ಲದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪಕ್ಷಾತೀತ ರೈತಪರ ಹೋರಾಟ ವೇದಿಕೆ ತಾಲೂಕು ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿ, ‘ಪ್ರತಿವರ್ಷ ರೈತರಿಂದ ವಿಮೆ ಕಂತು ಪಾವತಿಸಿಕೊಳ್ಳುತ್ತವೆ. ಕಂತು ತುಂಬುವುದಕ್ಕೆ ಮಾತ್ರ ಪ್ರಚಾರ ಮಾಡಿ ರೈತರಿಂದ ಹಣ ತುಂಬಿಸಿಕೊಳ್ಳುತ್ತಾರೆ. ಆದರೆ ಪರಿಹಾರ ಮಾತ್ರ ಮರೀಚಿಕೆಯಾಗುತ್ತಿದೆ. ಕೇಳಿದರೆ ಅಧಿಕಾರಿಗಳು ಇಲ್ಲಸಲ್ಲದ ಕಾರಣ ಹೇಳುತ್ತಾರೆ. ರೈತರು ಈ ಹಿಂದೆ ಪಾವತಿಸಿದ ವಿಮೆಗೆ ಪರಿಹಾರ ನೀಡುವ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

    ವಿಮಾ ಕಂಪನಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಮಾ ಹಣ ಪಾವತಿಸುವವರೆಗೂ ವಾಹನವನ್ನು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.

    ಶ್ರೀಕಾಂತ ವಾಲ್ಮೀಕಿ, ರಾಮಣ್ಣ ಫಲದಡ್ಡಿ, ಹನುಮಂತಪ್ಪ ವಾಲ್ಮೀಕಿ, ಕರೆಯಪ್ಪ ಹುರಕನವರ, ಸುರೇಶ ಕುಂದಳ್ಳಿ, ಮಂಜುನಾಥ ಭಾವಿಕಟ್ಟಿ, ಪರಮೇಶಪ್ಪ ಕಿತ್ತಲಿ, ಟಾಕಪ್ಪ ಸಾತಪೂತೆ, ಖಾನಸಾಬ್ ಸೂರಣಗಿ ಸೇರಿದಂತೆ ಇತರರಿದ್ದರು. ವಿಮಾ ಕಂಪನಿಯ ತಾಲೂಕ ಪ್ರತಿನಿಧಿ ಮಾಂತೇಶ ಪ್ರಭಯನ್ನವರಮಠ, ಕೃಷಿ ಅಧಿಕಾರಿ ಎನ್.ಎಚ್. ಹಣಗಿ ರೈತರಿಗೆ ಮಾಹಿತಿ ನೀಡಿದರು.

    ಈಗಾಗಲೇ ಜಿಲ್ಲೆಯ ಬಹುತೇಕ ರೈತರಿಗೆ ಹಿಂದಿನ ವರ್ಷಗಳ ಬೆಳೆವಿಮೆ, ಬೆಳೆಹಾನಿ ಪರಿಹಾರ ಜಮೆಯಾಗಿದೆ. ವಿಮೆ ಪಾವತಿ ಕಡ್ಡಾಯವಲ್ಲ. ಆದರೆ, ರೈತರ ಹಿತದೃಷ್ಟಿಯಿಂದ ಸೂಕ್ತ ಮಾಹಿತಿ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ವಿಮೆ ಪಾವತಿ ಮತ್ತು ವಿಮೆ ಪರಿಹಾರದ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಕೊರತೆಯಿಂದ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಲಾಗುತ್ತದೆ.
    | ರುದ್ರೇಶಪ್ಪ ಟಿ.ಎಸ್ ಜಂಟಿ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts