More

    ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ

    ಹಳಿಯಾಳ: ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ತಾಲೂಕಿನಲ್ಲಿ ಬೆಳೆದ ಕಬ್ಬು ಸಾಗಿಸಲು ಅನಗತ್ಯ ವಿಳಂಬ ಮಾಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ರೈತರು ಕಾರ್ಖಾನೆಗೆ ತೆರಳುವ ಮಾರ್ಗದಲ್ಲಿ ಗಂಟೆಗಳ ಕಾಲ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ನೇತೃತ್ವ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೊಟ್ನೇಕರ ಮಾತನಾಡಿ, ‘ತಾಲೂಕಿನ ರೈತರ ನ್ಯಾಯೋಚಿತವಾದ ಬೇಡಿಕೆಗಳನ್ನು ಈಡೇರಿಸಲು ಕಾರ್ಖಾನೆ ಆಡಳಿತ ಮಂಡಳಿಯವರಿಗೆ 21 ದಿನಗಳ ಗಡುವು ನೀಡಲಾಗಿತ್ತು. ಕಾರ್ಖಾನೆಯಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ ಹೀಗಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ನಾವು ಪ್ರಸ್ತಾಪಿಸಿದ ಏಳು ಬೇಡಿಕೆ ಈಡೇರಿಕೆಗೆ ಕಾರ್ಖಾನೆಯವರು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುತ್ತದೆ’ ಎಂದರು.

    ತೂಕದಲ್ಲಿ ವ್ಯತ್ಯಾಸ ಮಾಡುವುದು ಮತ್ತು ವೇಸ್ಟೇಜ್ ನೆಪದಲ್ಲಿ ಪ್ರತಿ ಟನ್​ಗೆ ನಿಯಮಕ್ಕಿಂತ ಹೆಚ್ಚು ಭಾರದಾನ ತೆಗೆಯಲಾಗುತ್ತಿದೆ. ಹಾಗೂ ಕಾರ್ಖಾನೆಯಿಂದ ಆಗುತ್ತಿರುವ ಪರಿಸರ ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

    ಕರವೇ, ಕರ್ನಾಟಕ ನವ ನಿರ್ಮಾಣ ಸೇನೆ, ಜೀಜಾಮಾತಾ ಕ್ಷತ್ರೀಯ ಮರಾಠ ಮಹಿಳಾ ಸಂಘ, ಕಬ್ಬು ಬೆಳೆಗಾರರ ಸಂಘ, ಪುರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

    ಪುರಸಭೆ ಅಧ್ಯಕ್ಷ ಅಜರ್ ಬಸರಿಕಟ್ಟಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಸಂಘದ ಉಪಾಧ್ಯಕ್ಷ ಎಂ.ವಿ. ಘಾಡಿ, ರೈತ ಮುಖಂಡ ಸುರೇಶ ಶಿವಣ್ಣನವರ, ಸುರೇಶ ಬೆಣಚೆಕರ, ಬಸವರಾಜ ಬೆಂಡಿಗೇರಿಮಠ, ಕರ್ನಾಟಕ ನವನಿರ್ವಣ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕಮ್ಮಾರ, ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಜಯ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷ ಶಿರಾಜ್ ಸೈಪ್ ಮಾತನಾಡಿದರು.

    ಮಧ್ಯಾಹ್ನ ಹಳಿಯಾಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಪ್ರತಿಭಟನೆ ನಿರತರ ಅಹವಾಲು ಸ್ವೀಕರಿಸಿದರು. ಬೆಳಗ್ಗೆ 11ರಿಂದ ಸಂಜೆ 5 ರವರೆಗೆ ಪ್ರತಿಭಟನೆ ನಡೆದಿದ್ದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸಂಜೆ ಸಿ.ಪಿ.ಐ ಮೋತಿಲಾಲ ಪವಾರ ಅವರಿಗೆ ತಮ್ಮ ಬೇಡಿಕೆಗಳ ಮನವಿಯನ್ನು ಸಲ್ಲಿಸಿ ಪ್ರತಿಭಟನೆ ಹಿಂಪಡೆದರು.

    ಶಿವಪುತ್ರಪ್ಪ ನುಚ್ಛಂಬ್ಲಿ, ಬಾಳಕೃಷ್ಣ ಶಹಾಪುರಕರ, ರವಿ ತೋರಣಗಟ್ಟಿ, ಹನೋರಿಯಾ ಬೃಗಾಂಜಾ, ಎ.ಪಿ.ಎಂ.ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಪುರಸಭೆ ಉಪಾಧ್ಯಕ್ಷೆ ಸುವರ್ಣ ಮಾದರ, ಸದಸ್ಯ ಫಯಾಜ್ ಶೇಖ್, ಶಂಕರ ಬೆಳಗಾಂವಕರ ಇದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts