More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

    ಹನೂರು: ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಬುಧವಾರ ರೈತ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ರೈತರು ತಾಲೂಕಿನ ನಾಲ್‌ರೋಡ್‌ನಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಈ ವೇಳೆ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳಾಗಿವೆ. ಆದರೆ ಹನೂರು ತಾಲೂಕು ಅಭಿವೃದ್ಧಿ ಕಂಡಿಲ್ಲ. ಇತ್ತ ಕಾಡಂಚಿನ ಬಹುತೇಕ ಗ್ರಾಮಗಳಲ್ಲಿ ಜನರು ಮೂಲಸೌಕರ್ಯದಿಂದ ವಂಚಿತರಾಗಿದ್ದು, ಸಮಸ್ಯೆ ನಡುವೆಯೇ ಜೀವನ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಅಧಿಕ ಭಾರ ಹೊತ್ತ ಲಾರಿಗಳ ಸಂಚಾರದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರದಿಂದ ನಾಲ್‌ರೋಡ್ ರಸ್ತೆಯು ಸಂಪೂರ್ಣ ಹಾಳಾಗಿದೆ. ಇನ್ನು ರಾಮಾಪುರ ಹೋಬಳಿಯ ರೈತರಿಗೆ 1970-72ರಲ್ಲಿ ಸರ್ವೇ ನಂ. 239ರಲ್ಲಿ 2,700 ಎಕರೆ ಹಾಗೂ 18ರಲ್ಲಿ 1,700 ಎಕರೆಗೆ ಆರ್‌ಟಿಸಿ ನೀಡಲಾಗಿದೆ. ಆದರೆ ಪೋಡಿಯಾಗಿಲ್ಲ. ಇದರಿಂದ ರೈತರು ಸರ್ಕಾರದ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

    ಅಲ್ಲದೆ ನಾಲ್‌ರೋಡ್‌ನಿಂದ ಜಲ್ಲಿಪಾಳ್ಯದವರೆಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ತಂತಿ ಕಳಪೆಯಿಂದ ಕೂಡಿದ್ದು, ಆಗ್ಗಾಗ್ಗೆ ದುರಸ್ತಿಗೊಳ್ಳುತ್ತಿದೆ. ಮಾರ್ಟಳ್ಳಿ ಹಾಗೂ ಜಲ್ಲಿಪಾಳ್ಯ ಅರಣ್ಯದಂಚಿನ ಜಮೀನುಗಳಿಗೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಜತೆಗೆ ರೈತರ ಮೇಲೆ ದಾಳಿ ನಡೆಸುತ್ತಿವೆ. ಸುಳವಾಡಿ ಹಾಗೂ ಕೂಡಲೂರು ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಕೊಟ್ಟಿಗೆ ಗೊಬ್ಬರವನ್ನು ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ. ಜತೆ ಮಾರ್ಟಳ್ಳಿ ಗ್ರಾಮದಲ್ಲಿ ಎಸ್‌ಬಿಐ ಬ್ಯಾಂಕ್ ಹಾಗೂ ಎಟಿಎಂ ಇಲ್ಲ. ಇದರಿಂದ ಈ ಭಾಗದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸುದ್ದಿ ತಿಳಿದು ಡಿವೈಎಸ್ಪಿ ಸೋಮೇಗೌಡ ಅವರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರನ್ನು ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ವೇಳೆ ಅರಣ್ಯ, ಸೆಸ್ಕ್, ಕಂದಾಯ, ಆರೋಗ್ಯ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

    ಬಳಿಕ ಗ್ರೇಡ್ 2 ತಹಸೀಲ್ದಾರ್ ಧನಂಜಯ, ಸೆಸ್ಕ್ ಎಇಇ ಶಂಕರ್, ಪಿಡಬ್ಲುೃಡಿ ಇಂಜಿನಿಯರ್ ಮಹೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಮನವಿ ಆಲಿಸಿದರು. ಈ ವೇಳೆ ಅಧಿಕಾರಿಗಳ ಭರವಸೆಯ ಮಾತುಗಳಿಂದ ಸಮಾಧಾನಗೊಳ್ಳದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆ ತೆಗೆದುಕೊಂಡರು. ನಂತರ ಕೂಡಲೇ ಉಪ ವಿಭಾಗಾಧಿಕಾರಿ ಸ್ಥಳಕ್ಕಾಗಮಿಸುವಂತೆ ಒತ್ತಾಯಿಸಿದರು.

    ಸ್ಥಳಕ್ಕಾಗಮಿಸಿದ ಎಸಿ ಮಹೇಶ್ ಅವರು ಮನವಿ ಸ್ವೀಕರಿಸಿ ಮಾತನಾಡಿ, ಈ ಸಂಬಂಧ ಕೂಡಲೇ ಅಧಿಕಾರಿಗಳು ಹಾಗೂ ರೈತರ ಕರೆದು ಸಮಸ್ಯೆ ಬಗೆಹರಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಮಲ್ಲಪ್ಪ, ಕಾರ್ಯದರ್ಶಿ ಭಾಸ್ಕರ್, ಸಂಘಟನಾ ಕಾರ್ಯದರ್ಶಿ ಶಕ್ತಿವೇಲು, ಮಹಿಳಾ ಘಟಕದ ಕಾರ್ಯದರ್ಶಿ ಪೂಂಗುಡಿ, ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್, ಗ್ರಾಮ ಘಟಕದ ಅಧ್ಯಕ್ಷರು ಹಾಗೂ ವಿವಿಧ ಗ್ರಾಮದ ರೈತರು ಭಾಗವಹಿಸಿದ್ದರು.

    ಐದು ಗಂಟೆ ಸಂಚಾರ ಸ್ಥಗಿತ: ಪ್ರತಿಭಟನಾ ಧರಣಿ ಬೆಳಗ್ಗೆ 10.15 ರಿಂದ ಮಧ್ಯಾಹ್ನ 3.15 ರವರೆಗೆ ನಡೆಯಿತು. ಇದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ 5 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮ ಸಾರ್ವಜನಿಕರು ತೊಂದರೆ ಪಟ್ಟರು. ಇತ್ತ ಪ್ರತಿಭಟನಕಾರರು ರಸ್ತೆ ಮಧ್ಯೆಯೇ ಊಟ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts