More

    ರೈತರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಳಂಬ: ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಕುರ್ಕಿ ಆರೋಪ

    ಚಳ್ಳಕೆರೆ: ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಕೇಂದ್ರ ಸರ್ಕಾರದಿಂದ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕೃಷಿಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಕುರ್ಕಿ ಆರೋಪಿಸಿದರು.

    ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಅಖಂಡ ಕರ್ನಾಟಕ ರೈತ ಸಂಘ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದರು.

    ಕೃಷಿ ಬೆಲೆ ಆಯೋಗದ ವರದಿಯಂತೆ ಕೇಂದ್ರ ಸರ್ಕಾರಕ್ಕೆ ಎಣ್ಣೆ ಬೀಜ ಸಂಶೋಧನೆ ಮತ್ತು ಇಳುವರಿದಾಯಕ ಬೆಳೆಗಳ ಪ್ರೋತ್ಸಾಹಧನ ಜಾರಿ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ವಿದೇಶಗಳಿಂದ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದನ್ನು ತಪ್ಪಿಸಲು ಸ್ಥಳೀಯ ರೈತರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು. ಸ್ಥಳೀಯ ಕೃಷಿ ಉತ್ಪನ್ನಗಳನ್ನು ಖರೀದಿಸಿ ನ್ಯಾಯಬೆಲೆ ಅಂಗಡಿ ಮೂಲಕ ಜನರಿಗೆ ವಿತರಿಸಬೇಕು. ರಾಜ್ಯದ ದಕ್ಷಿಣ ಭಾಗದಲ್ಲಿ ರಾಗಿ ಮತ್ತು ಉತ್ತರ ಭಾಗದಲ್ಲಿ ಜೋಳ ವಿತರಿಸಲು ಸರ್ಕಾರ ಆದ್ಯತೆ ನೀಡಬೇಕಾಗಿದೆ ಎಂದರು.

    ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ರೈತರಿಗೆ ಸಕಾಲಕ್ಕೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಮುಂಗಾರು ಆರಂಭವಾಗಿದ್ದರೂ ಗೊಬ್ಬರ ಮತ್ತು ಬೀಜಕ್ಕೆ ಪರದಾಡಬೇಕಾಗಿದೆ. ಬೆಳೆವಿಮೆ ಜಾರಿ ಮಾಡುವಲ್ಲಿ ಸರ್ಕಾರ ಮೋಸ ಮಾಡುತ್ತಿದೆ. ಖಾಸಗಿ ಕಂಪನಿಗಳ ವ್ಯವಹಾರದಲ್ಲಿ ರೈತರನ್ನು ಬಲಿಕೊಡಲಾಗುತ್ತದೆ. ಬೆಳೆವಿಮೆ ಅವೈಜ್ಞಾನಿಕ ಮತ್ತು ರೈತರಿಂದ ಹಣ ಸುಲಿಗೆ ಮಾಡುವ ದಂಧೆ ಆಗಿದೆ. ರೈತ ವಿರೋಧಿ ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

    ಸಂಘದ ತಾಲೂಕು ಅಧ್ಯಕ್ಷ ಗಿರೀಶ್, ಕಾರ್ಯಾಧ್ಯಕ್ಷ ಜುಂಜರಗುಂಟೆ ಹನುಮಂತರಾಯ, ಚಿಕ್ಕಣ್ಣ, ಕೃಷ್ಣಮೂರ್ತಿ, ಶೇಷಾದ್ರಿ, ಜಂಪಣ್ಣ, ಅಣ್ಣಪ್ಪಸ್ವಾಮಿ, ಜಯಣ್ಣ, ಪರಮೇಶ್ವರಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts