More

    ರೈತರಿಗೆ ಸಿಗುತ್ತಿಲ್ಲ ‘ಸಬ್ಸಿಡಿ’ ಸೌಲಭ್ಯ!

    ಬೆಳಗಾವಿ: ಸಣ್ಣ ಮತ್ತು ಮಧ್ಯಮ ರೈತರ ಅನುಕೂಲಕ್ಕಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ‘ತುಂತುರು, ಹನಿ ನೀರಾವರಿ’ ಯೋಜನೆಗೆ ಇದೀಗ ಅನುದಾನ ಅಭಾವ ಎದುರಾಗಿದೆ. ಮತ್ತೊಂದೆಡೆ ಅರ್ಜಿ ಸಲ್ಲಿಸಿರುವ ಸಾವಿರಾರು ರೈತರು ಸಬ್ಸಿಡಿ ಅನುದಾನಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ.

    ಮಳೆ ಅಭಾವ, ನೀರಿನ ಅಲಭ್ಯತೆ, ಹೆಚ್ಚು ಖರ್ಚು, ಬೆಳೆಗಳ ಇಳುವರಿ ಕುಂಠಿತ ಇನ್ನಿತರ ಸಮಸ್ಯೆಗಳಿಂದ ತತ್ತರಿಸಿರುವ ರೈತರು ಹನಿ, ತುಂತುರು ನೀರಾವರಿಯತ್ತ ಮುಖ ಮಾಡಿದ್ದಾರೆ. 2019ರಿಂದ 2022ರ ನಡುವಿನ ಅವಧಿಯಲ್ಲಿ ಒಟ್ಟು 67,736 ಅರ್ಜಿಗಳು ಸಲ್ಲಿಕೆಯಾಗಿದ್ದು, 45,125 ಅರ್ಜಿಗಳು ವಿಲೇವಾರಿಯಾಗಿವೆ. ಇನ್ನೂ 22,611 ಅರ್ಜಿಗಳು ಬಾಕಿ ಉಳಿದುಕೊಂಡಿವೆ. ಮತ್ತೊಂದೆಡೆ ಸರ್ಕಾರದ ಸಬ್ಸಿಡಿ ಯೋಜನೆಗಾಗಿ ಅರ್ಜಿ ಸಲ್ಲಿಸಿ ವರ್ಷಗಳು ಉರುಳಿದರೂ ರೈತರಿಗೆ ಸೌಲಭ್ಯಗಳು ಸಿಗುತ್ತಿಲ್ಲ.

    ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದಿರುವ ಹಿನ್ನೆಲೆಯಲ್ಲಿ ರೈತರು ಹನಿ, ತುಂತುರು ನೀರಾವರಿಯತ್ತ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕೆಲ ರೈತರು ಹನಿ, ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 2019ರಿಂದ 2023ರ ಅವಧಿಯಲ್ಲಿ ವರ್ಷದಲ್ಲಿ ಶೇ.24 ತುಂತುರು, ಹನಿ ನೀರಾವರಿ ಪ್ರಮಾಣ ಹೆಚ್ಚಿದೆ.

    ಅದರಲ್ಲಿ ಪ್ರಮುಖವಾಗಿ ಕಬ್ಬು ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಸರ್ಕಾರ ಸಮಯಕ್ಕೆ ಸರಿಯಾಗಿ ಸಬ್ಸಿಡಿ ಬಿಡುಗಡೆ ಮಾಡಬೇಕು ಎಂದು ರೈತರಾದ ವಿಠ್ಠಲ ಆರ್. ಪಾಟೀಲ, ಸೋಮಶೇಖರ ಪೂಜೇರ ಆಗ್ರಹಿಸಿದ್ದಾರೆ.

    ಸರ್ಕಾರವು ತುಂತುರು, ಹನಿ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ.90 ಸಬ್ಸಿಡಿ ನೀಡುತ್ತಿದೆ. ಹಾಗಾಗಿ, ಪ್ರತಿ ವರ್ಷ 10ರಿಂದ 12 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ರೈತ ಸಂಪರ್ಕ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಹನಿ ನೀರಾವರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ರೈತರಲ್ಲಿ ಹಿರಿತನದ ಆಧಾರದ ಮೇಲೆ ಅರ್ಜಿಗಳನ್ನು ವಿಲೇವಾರಿ ಮಾಡಿ ಸಬ್ಸಿಡಿ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಯಡಿ 5 ಎಕರೆ ಒಳಗಿನ ಪ್ರದೇಶಕ್ಕೆ ಶೇ.90 ಸಬ್ಸಿಡಿ, ಅದರ ಮೇಲ್ಪಟ್ಟು 12.5 ಎಕರೆಯವರೆಗೂ ಶೇ.45 ಸಬ್ಸಿಡಿ ಸಿಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    3.5 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ

    ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 3.5 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, ಅದರಲ್ಲಿ 2.10 ಲಕ್ಷ ಹೆಕ್ಟೇರ್ ಕಬ್ಬು ಬೆಳೆಯುವ ಪ್ರದೇಶವಿದೆ. 1 ಲಕ್ಷಕ್ಕೂ ಅಧಿಕ ಕೃಷಿ ಭೂಮಿ ನೀರಾವರಿ ಸೌಲಭ್ಯಕ್ಕೆ ಒಳಪಡುವುದು ಬಾಕಿ ಉಳಿದುಕೊಂಡಿದೆ. ಪ್ರತಿ ಹೆಕ್ಟೇರ್(2.5 ಎಕರೆ) ಗೆ ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳಲು 1.20 ಲಕ್ಷ ರೂ. ವರೆಗೆ ಖರ್ಚಾಗುತ್ತದೆ. ವಾರ್ಷಿಕ ಜಿಲ್ಲೆಯಿಂದ 30ರಿಂದ 35 ಕೋಟಿ ರೂ. ವರೆಗೆ ಸರ್ಕಾರ ಸಬ್ಸಿಡಿ ಪಾವತಿಸುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಇರುವುದರಿಂದ ಹನಿ, ತುಂತುರು ನೀರಾವರಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಪ್ರತಿ ವರ್ಷ ನಿರೀಕ್ಷೆಗೂ ಮೀರಿ ಅರ್ಜಿಗಳು ಬರುತ್ತಿರುವುದರಿಂದ ಅನುದಾನ ಲಭ್ಯತೆ ಆಧಾರದ ಮೇಲೆ ಅರ್ಜಿಗಳು ವಿಲೇವಾರಿ ಆಗುತ್ತಿವೆ. ಹಾಗಾಗಿ ಪ್ರತಿ ವರ್ಷ ಅರ್ಜಿಗಳು ಬಾಕಿ ಉಳಿಯುತ್ತಿವೆ.
    | ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts