More

    ಷರತ್ತು ಒಪ್ಪದ ಅನ್ನದಾತರು; ಪ್ರತಿಭಟನಾ ಸ್ಥಳ ಬದಲಾವಣೆಗೆ ವಿರೋಧ

    ನವದೆಹಲಿ: ರೈತರು ಮಾತುಕತೆಗೆ ಬರುವುದಾದರೆ ಬುರಾರಿಯ ಸಂತ ನಿರಂಕಾರಿ ಸಮಾಗಮ ಮೈದಾನಕ್ಕೆ ಪ್ರತಿಭಟನೆಯನ್ನು ಸ್ಥಳಾಂತರಿಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಷರತ್ತನ್ನು 32 ಸಂಘಟನೆಗಳು ತಿರಸ್ಕರಿಸಿವೆ. ಷರತ್ತು ಬದ್ಧವಾದ ಈ ಪ್ರಸ್ತಾವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ನೇತೃತ್ವದ ಏಳು ಸದಸ್ಯರ ಸಮಿತಿ ಹೇಳಿದೆ. ಈ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸುವ ಸುಳಿವನ್ನೂ ನೀಡಿದೆ.

    ಈ ಮಧ್ಯೆ, ರಾಜಧಾನಿ ಹೊರವಲಯದಲ್ಲಿ ನಡೆಯುತ್ತಿರುವ ಧರಣಿ ಕೊರೆಯುವ ಚಳಿಯ ನಡುವೆಯೇ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ರೈತರೊಂದಿಗೆ ಮಾತುಕತೆ ನಡೆಸುವುದಾದರೆ ಅದು ಬೇಷರತ್ತಾಗಿರಬೇಕು. ಈ ಮಾತುಕತೆ ಪ್ರತಿಭಟನೆ ನಡೆಯುತ್ತಿರುವ ದೆಹಲಿ-ಹರಿಯಾಣದ ಸಿಂಘು ಗಡಿಯಲ್ಲೇ ನಡೆಯಬೇಕು ಎಂಬುದು 32 ಸಂಘಟನೆಗಳ ಬೇಡಿಕೆಯಾಗಿದೆ. ಕೃಷಿಗೆ ಸಂಬಂಧಿಸಿದ ಮೂರು ಹೊಸ ಕಾಯ್ದೆಗಳನ್ನು ವಿರೋಧಿಸಿ ‘ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಡಿ. 3ರಂದು ಮಾತುಕತೆಗೆ ಆಹ್ವಾನಿಸಿದ ಅಮಿತ್ ಷಾ, ರೈತರ ಪ್ರತಿಯೊಂದು ಬೇಡಿಕೆ ಮತ್ತು ಸಮಸ್ಯೆಯನ್ನು ಕೂಲಂಕಷವಾಗಿ ರ್ಚಚಿಸಲು ಸಿದ್ಧ. ಇದಕ್ಕೆ ಒಪು್ಪವುದಾದರೆ ಪ್ರತಿಭಟನೆಯನ್ನು ಬುರಾರಿಯಲ್ಲಿನ ಸಂತ ನಿರಂಕಾರಿ ಸಮಾಗಮ ಮೈದಾನಕ್ಕೆ ಸ್ಥಳಾಂತರ ಮಾಡಬೇಕು ಎಂಬ ಷರತ್ತು ಹಾಕಿದ್ದರು. ಸರ್ಕಾರ ಸೂಚಿಸಿರುವ ಜಾಗಕ್ಕೆ ಸ್ಥಳಾಂತರಗೊಂಡರೆ ಅದನ್ನೇ ಜೈಲನ್ನಾಗಿ ಮಾಡಿಬಿಡುವ ಆತಂಕ ರೈತರಿಗಿದೆ. ಹೀಗಾಗಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬಿಡುವುದಿಲ್ಲ ಎಂದಿದ್ದಾರೆ. ಈ ಹಿಂದೆ ಸ್ಟೇಡಿಯಂನನ್ನು ತಾತ್ಕಾಲಿಕ ಬಂದಿಖಾನೆಯನ್ನಾಗಿ ಮಾಡಲು ಪೊಲೀಸರು ಕೋರಿದ್ದ ಅನುಮತಿಯನ್ನು ದೆಹಲಿ ಸರ್ಕಾರ ತಳ್ಳಿಹಾಕಿತ್ತು.

    ಘರ್ಷಣೆ ಮುಂದುವರಿಕೆ

    ಷರತ್ತು ಒಪ್ಪದ ಅನ್ನದಾತರು; ಪ್ರತಿಭಟನಾ ಸ್ಥಳ ಬದಲಾವಣೆಗೆ ವಿರೋಧ

    ಪಂಜಾಬ್, ಹರಿಯಾಣ ಸೇರಿ ಇನ್ನಿತರ ಕಡೆಗಳಿಂದ ಹತ್ತಾರು ಸಾವಿರ ಸಂಖ್ಯೆಯಲ್ಲಿ ರಾಜಧಾನಿಯತ್ತ ಬಂದ ರೈತರು ಮತ್ತು ಪೊಲೀಸರ ಮಧ್ಯೆ ಭಾನುವಾರ ಕೂಡ ಘರ್ಷಣೆ ವರದಿಯಾಗಿದೆ. ದೆಹಲಿ ಗಡಿಯಲ್ಲಿ ಬ್ಯಾರಿಕೇಡ್​ಗಳನ್ನು ರೈತರು ಕಿತ್ತೆಸೆದಿದ್ದಾರೆ. ಹರಿಯಾಣದ ಮೂಲಕ ದೆಹಲಿ ಪ್ರವೇಶಿಸಿದ ಸಾವಿರಾರು ಸಂಖ್ಯೆಯ ರೈತರು ಉತ್ತರ ದೆಹಲಿಯ ಮೈದಾನದಲ್ಲಿ ಧರಣಿ ನಡೆಸುತ್ತಿದ್ದಾರೆ. ಇನ್ನೂ ಹಲವರು ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಇದ್ದಾರೆ. ಎರಡು ದಿನಗಳ ಹಿಂದೆಯೂ ಉದ್ರಿಕ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಬ್ಯಾರಿಕೇಡ್​ಗಳನ್ನು ಕಿತ್ತು ನದಿಗೆ ಎಸೆದು, ಕಲ್ಲುತೂರಾಟ ನಡೆಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಷೆಲ್ ಸಿಡಿತ, ಜಲಫಿರಂಗಿ ಪ್ರಯೋಗಿಸಿದ್ದರು. ಇದರಿಂದ ಹಲವರಿಗೆ ಗಾಯವಾಯಿತು. ಶುಕ್ರವಾರ ಸಂಜೆ ರೈತರಿಗೆ ದೆಹಲಿ ಪ್ರವೇಶಕ್ಕೆ ಅನುಮತಿ ನೀಡಲಾಯಿತು.

    ಷರತ್ತು ಒಪ್ಪದ ಅನ್ನದಾತರು; ಪ್ರತಿಭಟನಾ ಸ್ಥಳ ಬದಲಾವಣೆಗೆ ವಿರೋಧ
    ರೈತಮುಖಂಡರ ಸುದ್ದಿಗೋಷ್ಠಿ

    ರೈತರ ವಾದವೇನು?

    ಹೊಸ ಕಾಯ್ದೆಯಿಂದ ಹಾಲಿ ವ್ಯವಸ್ಥೆ ನಾಶವಾಗುತ್ತದೆ. ಇದರಿಂದ ಬೆಳೆಗಳಿಗೆ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಇಲ್ಲವಾಗುತ್ತದೆ ಮತ್ತು ಕಾರ್ಪೆರೇಟ್ ಕಂಪನಿಗಳ ಪರವಾಗಿರುವ ಈ ಕಾಯ್ದೆಯಿಂದ ಕೃಷಿಕರು ದೊಡ್ಡ ಕಂಪನಿಗಳ ದಾಸ್ಯಕ್ಕೆ ಒಳಗಾಗುತ್ತಾರೆ ಎಂಬುದು ರೈತರ ವಾದವಾಗಿದೆ.

    ಸರ್ಕಾರದ ವಾದಗಳೇನು?

    ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳಿಂದ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ರೈತರು ತಮ್ಮ ಬೆಳೆಯನ್ನು ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಫಸಲು ಖರೀದಿಸಿದ ವರ್ತಕ ಮೂರು ದಿನದಲ್ಲಿ ಪಾವತಿ ಮಾಡದಿದ್ದರೆ ಆತನ ವಿರುದ್ಧ ದಾವೆ ಹೂಡಲು ಅವಕಾಶ ಇರುವ ಈ ಕಾಯ್ದೆ ರೈತರಿಗೆ ಹಾನಿಕಾರಕವಲ್ಲ. ಇದರಿಂದ ಲಾಭವಾಗಲಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

    ಅಮಿತ್ ಷಾರನ್ನು ಭೇಟಿಯಾಗಿದ್ದೆವು. ಆದರೆ, ಅವರ ಆಹ್ವಾನ ಷರತ್ತುಬದ್ಧವಾದ ಕಾರಣ ಅದನ್ನು ಒಪ್ಪಲಾಗದು. ಬೇಷರತ್ತಾದ, ಮುಕ್ತವಾಗಿರುವ ಮಾತುಕತೆಯನ್ನು ಮಾತ್ರ ಒಪ್ಪಲು ಸಾಧ್ಯ.

    | ಜಗ್ಜಿತ್ ಸಿಂಗ್ ಭಾರತೀಯ ಕಿಸಾನ್ ಒಕ್ಕೂಟದ ಪಂಜಾಬ್ ಘಟಕದ ಅಧ್ಯಕ್ಷ

    ಬೇಡಿಕೆ ಈಡೇರದಿದ್ದರೆ ದೆಹಲಿ ಪ್ರವೇಶ ಬಂದ್

    ದೆಹಲಿಯ ಐದು ಪ್ರವೇಶ ದಾರಿಗಳನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿರುವ ರೈತರು, ನಾಲ್ಕು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಿದ್ದಾರೆ. ಜಂತರ್-ಮಂತರ್ ಮುಂದೆ ಪ್ರತಿಭಟನೆಗೆ ಅವಕಾಶ ಕಲ್ಪಿಸಬೇಕು, ರೈತರಿಗೆ ಮಾರಕವಾಗಿರುವ ಮೂರೂ ಕಾಯ್ದೆಗಳನ್ನು ಬದಲಾವಣೆ ಮಾಡಬೇಕು, ಕನಿಷ್ಠ ಬೆಂಬಲ ಬೆಲೆ ಮತ್ತು ಬೆಳೆ ಖರೀದಿಯ ದರವನ್ನು ಖಾತ್ರಿ ಪಡೆಸಬೇಕು, ವಿದ್ಯುತ್ ಸಂಬಂಧಿತ ಸುಗ್ರೀವಾಜ್ಞೆಯನ್ನು ತಡೆಹಿಡಿಯಬೇಕು, ಕೃಷಿ ತ್ಯಾಜ್ಯ (ಕೂಳೆ) ಸುಡುವ ರೈತರಿಗೆ ಹಾಕಲುತ್ತಿರುವ ದಂಡವನ್ನು ಕೈಬಿಡಬೇಕು ಎಂಬ ಬೇಡಿಕೆಯನ್ನು ಇರಿಸಿದ್ದಾರೆ. ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಒಕ್ಕೂಟ (ಕ್ರಾಂತಿಕಾರಿ) ಪಂಜಾಬ್ ಘಟಕದ ಅಧ್ಯಕ್ಷ ಸುರ್ಜಿತ್ ಸಿಂಗ್, ನಾವು ಬುರಾರಿ ಸಂತ ನಿರಂಕಾರಿ ಸಮಾಗಮ ಮೈದಾನಕ್ಕೆ ಹೋಗುವುದಿಲ್ಲ. ಅದನ್ನು ಬಯಲು ಜೈಲಿನಂತೆ ಮಾಡಲಾಗುತ್ತದೆ ಎಂಬುದು ನಮಗೆ ಗೊತ್ತು ಎಂದು ಹೇಳಿದರು. ಈ ಮಧ್ಯೆ, ಕೇಂದ್ರ ಸರ್ಕಾರ ಮತ್ತೊಮ್ಮೆ ರೈತರನ್ನು ಮಾತುಕತೆಗೆ ಆಹ್ವಾನಿಸಿದೆ. ಸಂಪುಟದ ಉನ್ನತಮಟ್ಟದ ತಂಡ ಕೃಷಿಕರೊಂದಿಗೆ ಸಮಗ್ರವಾಗಿ ರ್ಚಚಿಸಲಿದೆ. ಆದ್ದರಿಂದ ಪ್ರತಿಭಟನೆಯನ್ನು ನಿಗದಿತ ಸ್ಥಳಾಂತರಿಸಿ ಮಾತುಕತೆಗೆ ಬನ್ನಿ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ರೈತರ 32 ಒಕ್ಕೂಟಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಬಿಜೆಪಿ-ಪ್ರತಿಪಕ್ಷ ಜಟಾಪಟಿ

    ಪ್ರತಿಭಟನೆಯ ವಿಷಯವಾಗಿ ವಿರೋಧ ಪಕ್ಷಗಳು ಮತ್ತು ಬಿಜೆಪಿ ಮಧ್ಯೆ ಪರಸ್ಪರ ಕೆಸರೆರಚಾಟ ಮುಂದುವರಿದಿದೆ. ಪ್ರಧಾನಿ ನರೇಂದ್ರ ಮೋದಿಗೆ ರೈತರಿಗಿಂತ ತಮ್ಮ ಹಠವೇ ದೊಡ್ಡದಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಕೈಗಾರಿಕೋದ್ಯಮಿಗಳ ಕಾರಣ ಆದಾಯ ಕಳೆದುಕೊಳ್ಳುತ್ತಿರುವ ಜನರ ಬಗ್ಗೆ ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮಾತನಾಡಲಿಲ್ಲ. ರೈತರು ಮತ್ತು ಸಣ್ಣ ವ್ಯಾಪಾರಿಗಳನ್ನು ಮೋದಿ ನೋಯಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ದೂರಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಪ್ರತಿಭಟನೆ ನಡೆಸುತ್ತಿರುವುದು ರೈತರ ಹೆಸರಿನ ಸಮಾಜಘಾತುಕ ಶಕ್ತಿ, ಖಲಿಸ್ತಾನ ಚಳವಳಿಯವರು ಎಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts