More

    ಕೃಷಿಕರ ಬದುಕು ಲಾಕ್: ಜನತಾ ಕರ್ಫ್ಯೂನಿಂದ ಸಾಗಣೆ ಬಂದ್, ಬೆಲೆ ಕುಸಿತದ ಬರೆ

    • ಗಿರೀಶ್ ಗರಗ, ಬೆಂಗಳೂರು

    ಕರೊನಾ ನಿಯಂತ್ರಿಸುವ ಉದ್ದೇಶದಿಂದ ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಜನತಾ ಕರ್ಫ್ಯೂ ರೈತರ ಬದುಕಿಗೆ ಬರೆ ಎಳೆದಿದೆ. ಮಾವು, ಕಲ್ಲಂಗಡಿ, ಬಾಳೆ, ಹೂವು, ತರಕಾರಿಯ ಭರ್ಜರಿ ಫಸಲು ಬಂದಿದ್ದರೂ ಸಾಗಣೆ ವ್ಯವಸ್ಥೆ ಬಂದ್ ಆಗಿರುವ ಪರಿಣಾಮ ಮಾರುಕಟ್ಟೆ ಸಮಸ್ಯೆ, ಬೆಲೆ ಕುಸಿತ, ಖರೀದಿದಾರರ ಕೊರತೆಯಂತಹ ಸರಣಿ ಸಂಕಷ್ಟಗಳು ಎದುರಾಗಿವೆ.

    ಜನತಾ ಕರ್ಫ್ಯೂ ವೇಳೆ ಕೃಷಿ ಹಾಗೂ ಅದಕ್ಕೆ ಸಂಬಂಧಿತ ಚಟುವಟಿಕೆಗಳಿಗೆ ಅನುಮತಿಸಿದ್ದರೂ ರಾಜ್ಯದಲ್ಲಿ ಎಪಿಎಂಸಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರಮುಖ ಮಾರು ಕಟ್ಟೆಗಳಲ್ಲೂ ಅದೇ ಪರಿಸ್ಥಿತಿ ಇದೆ. ಈ ಕಾರಣದಿಂದಾಗಿ ಫಸಲು ಮಾರಾಟ ಸಾಧ್ಯವಾಗದೆ, ರೈತರ ಬೆಳೆಗೂ ಬೆಲೆಯಿಲ್ಲದಂತಾಗಿದೆ. ಪ್ರಮುಖವಾಗಿ ಹಣ್ಣು ಮತ್ತು ತರಕಾರಿಗಳ ಇಳುವರಿ ಹೆಚ್ಚಾಗಿದ್ದರೂ ಖರೀದಿದಾರರು ಸಿಗದೆ, ಮಾರಾಟದ ವ್ಯವಸ್ಥೆಯೂ ಇಲ್ಲದೆ ರೈತರು ಹೈರಾಣಾಗಿದ್ದಾರೆ.

    ಕೃಷಿ ಚಟುವಟಿಕೆ ಆರಂಭ: ಮುಂಗಾರು ಪ್ರವೇಶಕ್ಕೆ ಮೊದಲೇ ಮುಂಗಾರುಪೂರ್ವ ಮಳೆ ಉತ್ತಮವಾಗಿರುವ ಪರಿಣಾಮ ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಮುಂಗಾರು ಹಂಗಾಮಿನಲ್ಲಿ ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು ಸೇರಿ ರಾಜ್ಯದ 74 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ಬಿತ್ತನೆ ಪ್ರಕ್ರಿಯೆ ನಡೆಯಲಿದೆ. ಪ್ರಮುಖವಾಗಿ ಬಿತ್ತನೆ ಬೀಜ, ಗೊಬ್ಬರ ಸಂಗ್ರಹ ಮಾಡುವುದು ಹೀಗೆ ಹಲವು ಚಟುವಟಿಕೆಯಲ್ಲಿ ರೈತರು ತೊಡಗಿಕೊಳ್ಳಬೇಕು.

    ಸರ್ಕಾರ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆಯಿಲ್ಲ ಎಂದರೂ ರಾಜ್ಯದಲ್ಲಿ ಗೊಬ್ಬರ, ಬಿತ್ತನೆ ಬೀಜ ಮಾರಾಟ ಮಳಿಗೆಗಳು ತೆರೆದಿಲ್ಲ. ಇದರಿಂದ ರೈತರು ಮುಂದಿನ ಕೃಷಿ ಚಟುವಟಿಕೆ ಮಾಡಲು ಸಮಸ್ಯೆ ಎದುರಿಸುವಂತಾಗಿದೆ. ಜತೆಗೆ ಹಳ್ಳಿಗಳಲ್ಲೂ ಕರೊನಾ ಸೋಂಕು ಹೆಚ್ಚುತ್ತಿರುವ ಕಾರಣ, ಕೃಷಿಕಾರ್ವಿುಕರ ಕೊರತೆ ಕಾಣುತ್ತಿದೆ.

    ರಫ್ತಿಗೆ ಅವಕಾಶವಿಲ್ಲ: ಮಾವು, ಕಲ್ಲಂಗಡಿ, ಚೆಂಡುಹೂವು, ಗುಲಾಬಿ ಇನ್ನಿತರ ಕೃಷಿ ಉತ್ಪನ್ನಗಳು ರಾಜ್ಯದಿಂದ ವಿದೇಶಗಳಿಗೆ ರಫ್ತಾಗುತ್ತವೆ. ಆದರೆ, ಈ ವರ್ಷ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. 2020ರ ಲಾಕ್​ಡೌನ್ ಪರಿಸ್ಥಿತಿ ಮತ್ತೆ ಮರುಕಳಿಸಿದೆ. ರಫ್ತು ಮಾತ್ರವಲ್ಲದೆ ಇತರ ಜಿಲ್ಲೆಗಳಿಂದ ಬೆಂಗಳೂರು, ಹೈದರಾಬಾದ್ ಸೇರಿ ಇನ್ನಿತರ ನಗರಗಳಿಗೆ ಉತ್ಪನ್ನಗಳ ಸಾಗಣೆಯೂ ಸ್ಥಗಿತಗೊಂಡಿದೆ.

    ರಾಜ್ಯದಲ್ಲಿ ಕಂಡಿದ್ದೇನು?

    ಹೊರ ರಾಜ್ಯ ಹಾಗೂ ಹೊರದೇಶಕ್ಕೆ ಕೃಷಿ ಉತ್ಪನ್ನಗಳ ರಫ್ತು ಪ್ರಕ್ರಿಯೆ ನಿಂತಿದೆ

    ಮಾರುಕಟ್ಟೆ ಕಾರ್ಯನಿರ್ವಹಣೆಗೆ ಮೀಸಲಿರಿಸಿರುವ ಅವಧಿಯಲ್ಲಿ ಕೊಳ್ಳುವವರಿಲ್ಲದ ಸ್ಥಿತಿ ಇದೆ

    ಮಾರುಕಟ್ಟೆಗೆ ಬರುವ ರೈತರು ಕೇಳಿದ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ

     ಕೃಷಿ ಚಟುವಟಿಕೆ ಸಿದ್ಧತೆಗೂ ಜನತಾ ಕರ್ಫ್ಯೂ ಹಿನ್ನಡೆ ಉಂಟುಮಾಡಿದೆ.

    ಗೊಬ್ಬರ, ಬಿತ್ತನೆ ಬೀಜ ಮಾರಾಟ ಮಳಿಗೆ ತೆರೆದಿಲ್ಲ. ಕೃಷಿ ಕಾರ್ವಿುಕರ ಕೊರತೆ, ಯಂತ್ರೋಪಕರಣ ಸಮಸ್ಯೆ

    ಸಮಯದ್ದೇ ಸಮಸ್ಯೆ

    ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಜತೆಗೆ ರೈತರಿಗೆ ಅನುಕೂಲ ಮಾಡಿಕೊಡಲು ಜಿಲ್ಲಾವಾರು ಅಗ್ರಿ ವಾರ್ ರೂಂ ಸ್ಥಾಪಿ ಸಲಾಗಿದೆ. ಎಪಿಎಂಸಿ, ಮಾರುಕಟ್ಟೆ ಗಳನ್ನು ಬೆಳಗ್ಗೆ 7ರಿಂದ 10ರ ವರೆಗೆ ತೆರೆಯಲು ಅನುಮತಿಸಲಾಗಿದೆ. ಹೀಗೆ ಸಮಯ ನಿಗದಿ ಮಾಡಿರುವುದು ಕೃಷಿಕರು ಸಮಸ್ಯೆ ಎದುರಿಸುವಂತಾಗಿದೆ. ಬೆಳಗ್ಗೆಯೇ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ತಂದರೂ, ಅದನ್ನು ಕೊಳ್ಳುವವರಿಲ್ಲದ ಪರಿಸ್ಥಿತಿಯಿದೆ. ಹೀಗಾಗಿ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿದೆ.

    ಮಾವಿನ ಹಣ್ಣಿಗೆ ಬೆಲೆಯಿಲ್ಲ

    ಇದು ಮಾವು ಮಾರುಕಟ್ಟೆಗೆ ಬರುವ ಕಾಲ. ರಾಜ್ಯದ 1.83 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮಾವು ಕೃಷಿ ಮಾಡಲಾಗುತ್ತದೆ. ಈ ವರ್ಷ 14ರಿಂದ 15 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗುವ ನಿರೀಕ್ಷೆ ಹೊಂದಲಾಗಿತ್ತು. ಈಗಾಗಲೇ ಅರ್ಧದಷ್ಟು ಬೆಳೆ ಕಟಾವಿಗೆ ಬಂದಿದೆ. ಆದರೆ ಜನತಾ ಕರ್ಫ್ಯೂನಿಂದಾಗಿ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಕಾರಣ, ಮಾವು ಮರದಲ್ಲಿ ಅಥವಾ ರೈತರ ಮನೆಯಲ್ಲೇ ಕೊಳೆಯುವ ಸ್ಥಿತಿಗೆ ತಲುಪಿದೆ. ಕೆ.ಜಿ. ಮಾವಿನ ಹಣ್ಣಿಗೆ 100ರಿಂದ 200 ರೂ. ಇರಬೇಕಿದ್ದ ಬೆಲೆ 70ರಿಂದ 130ಕ್ಕೆ ಕುಸಿದಿದೆ.

    ತರಕಾರಿ ಕೇಳೋರಿಲ್ಲ

    ಕಲ್ಲಂಗಡಿ, ಬಾಳೆ, ಈರುಳ್ಳಿ ಇನ್ನಿತರ ತರಕಾರಿ, ತೋಟಗಾರಿಕೆ, ಹಣ್ಣಿನ ಬೆಳೆಗಳು ಕಟಾವಿಗೆ ಬಂದಿವೆ. ಆದರೆ ಇವುಗಳಿಗೂ ಬೇಡಿಕೆ ಕಡಿಮೆಯಾಗಿದೆ. ಕೋಲಾರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ರಾಯಚೂರು, ಕಲಬುರಗಿ ಮುಂತಾದ ಜಿಲ್ಲೆಗಳಲ್ಲಿ ತೊಗರಿ, ಜೋಳ, ಕಡಲೆ, ಈರುಳ್ಳಿ, ಕಲ್ಲಂಗಡಿ, ತರಕಾರಿ ಬೆಳೆಗಳ ಇಳುವರಿ ಹೆಚ್ಚಿದೆ. ಈ ಬೆಳೆಗಳಿಗೆ ಖರೀದಿದಾರರಿದ್ದರೂ ಸೂಕ್ತ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ರೂಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ಬೆಳೆಗೆ ಸೂಕ್ತ ಬೆಲೆ ಸಿಗದ ಪರಿಸ್ಥಿತಿ ನಿರ್ವಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts