More

    ಸರ್ಕಾರದ ವಿರುದ್ಧ ರೈತರ ಅಹೋರಾತ್ರಿ ಧರಣಿ ಆರಂಭ

    ಹಾನಗಲ್ಲ: ಶಾಸಕರು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಂದಾಗಿ ಹಾನಗಲ್ಲ ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಘೊಷಣೆಯಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೆ. 30ರೊಳಗಾಗಿ ಘೊಷಣೆಯಾಗಲಿರುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ರೈತ ಸಂಘದ ಶಕ್ತಿ ಪ್ರದರ್ಶನದ ಮೂಲಕ ಸರ್ಕಾರದ ಕಣ್ತೆರೆಸುವವರೆಗೆ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

    ಗುರುವಾರ ತಹಸೀಲ್ದಾರ್ ಕಚೇರಿ ಎದುರು ರೈತ ಸಂಘ ಹಮ್ಮಿಕೊಂಡಿರುವ ಅಹೋರಾತ್ರಿ, ಅನಿರ್ದಿಷ್ಟಾ ವಧಿ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯ ಹಾನಗಲ್ಲ, ಶಿಗ್ಗಾಂವಿ ಹಾಗೂ ಬ್ಯಾಡಗಿ ತಾಲೂಕುಗಳನ್ನು ಬರಗಾಲ ಪಟ್ಟಿಯಿಂದ ಕೈಬಿಡಲಾಗಿದೆ. ಮಳೆ ಪ್ರಮಾಣ ಪರಿಗಣಿಸುವಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಎಡವಿದ್ದಾರೆ. ಜುಲೈ ತಿಂಗಳ 15 ದಿನಗಳಲ್ಲಿ ಮಾತ್ರ ಹೆಚ್ಚು ಮಳೆ ಸುರಿದಿದೆ. ಯಾವುದೇ ಬೆಳೆಯನ್ನೂ 15 ದಿನದಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಬಿತ್ತನೆಯಿಂದ ಕೊಯ್ಲು ಹಂತ ತಲುಪಲು ಕನಿಷ್ಠ 100 ದಿನಗಳು ಬೇಕಾಗುತ್ತದೆ. ಈ ದಿನಗಳಲ್ಲಿ ಕಾಲ-ಕಾಲಕ್ಕೆ ಮಳೆಯಾದರೆ ಮಾತ್ರ ಫಸಲು ರೈತರ ಕೈಗೆ ಬರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳದ ಅಧಿಕಾರಿಗಳು ತಮಗಿಷ್ಟ ಬಂದಂತೆ ಲೆಕ್ಕಾಚಾರ ಹಾಕಿದರೆ ಅದು ಅವೈಜ್ಞಾನಿಕವಾಗುತ್ತದೆ. ಅದನ್ನು ಸರಿಯಾಗಿ ಶಾಸಕರು, ಸಚಿವರು ಮನವರಿಕೆ ಮಾಡಬೇಕಾದ ಜವಾಬ್ದಾರಿ ನಿರ್ವಹಿಸದ್ದರಿಂದ ತಾಲೂಕಿನ ರೈತರಿಗೆ ಸಂಕಷ್ಟ ಎದುರಾಗಿದೆ ಎಂದು ಅಸಮಾಧಾನ ಮರಿಗೌಡ ವ್ಯಕ್ತಪಡಿಸಿದರು.

    ರೈತ ಸಂಘದ ಉಪಾಧ್ಯಕ್ಷ ರುದ್ರಪ್ಪ ಹಣ್ಣಿ ಮಾತನಾಡಿ, ಸಂಸದರೂ ಕೂಡ ಹಾನಗಲ್ಲ ತಾಲೂಕಿನವರೇ ಆಗಿದ್ದರೂ ಅವರು ಮೂರು ತಿಂಗಳಿನಿಂದ ತಾಲೂಕಿನಲ್ಲಿ ಕಾಣಿಸಿಕೊಂಡಿಲ್ಲ. ರೈತರ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ನೀಡುತ್ತಿಲ್ಲ. ಬರಗಾಲ ಘೊಷಣೆಯಲ್ಲಿ ಕೇಂದ್ರದ ಜವಾಬ್ದಾರಿಯಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಬೇಕೆಂದು ಕೇಂದ್ರದ ಮೇಲೆ ಸ್ಥಳೀಯ ಶಾಸಕರು ಆರೋಪಿಸಿ ಜಾರಿಕೊಳ್ಳುತ್ತಾರೆ. ಇನ್ನೊಂದೆಡೆ ಸಂಸದರು ಇದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇವರಿಬ್ಬರ ಮಧ್ಯೆ ರೈತ ಸಮುದಾಯ ಸಂಕಷ್ಠಕ್ಕೀಡಾಗುತ್ತಿದೆ ಎಂದು ಅತ್ರಪ್ತಿ ವ್ಯಕ್ತಪಡಿಸಿದರು.

    ತಹಸೀಲ್ದಾರ್ ಭೇಟಿ :

    ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ರವಿಕುಮಾರ ಕೊರವರ ಮಾತನಾಡಿ, ತಾಲೂಕಿನ ಮಳೆ-ಬೆಳೆಗಳ ವಸ್ತುಸ್ಥಿತಿಯ ಸಂಪೂರ್ಣ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇವೆ. ರೈತರ ಪರವಾದ ವರದಿ ಸಲ್ಲಿಕೆಯಾಗಿದೆ. ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ. ಕಂದಾಯ, ಕೃಷಿ ಇಲಾಖೆಗಳ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಬೆಳೆ ವಿಫಲವಾಗಿರುವ ಪ್ರಮಾಣವನ್ನು ಸಮರ್ಪಕವಾಗಿ ವರದಿ ಮಾಡಿದ್ದಾರೆ. ಜಿಲ್ಲಾಡಳಿತವೂ ರೈತಪರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳುವವರೆಗೆ ಕಾಯಬೇಕಾದ ಅನಿವಾರ್ಯತೆಯಿದೆ ಎಂದರು.

    ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಹಾವೇರಿ ಶಹರ ಅಧ್ಯಕ್ಷ ಸುರೇಶ ಚಲುವಾದಿ, ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ಶಹರ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ, ರಾಜೀವ ದಾನಪ್ಪನವರ, ಶ್ರೀಕಾಂತ ದುಂಡಣ್ಣನವರ, ವಾಸುದೇವ ಕಮಾಟಿ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ನಂದಿಶೆಟ್ಟರ ಇತರರು ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts