More

    ಕುಮ್ಮೂರು ಗ್ರಿಡ್ ಬಳಿ ರೈತರ ಪ್ರತಿಭಟನೆ

    ಬ್ಯಾಡಗಿ: ಕೊಳವೆಬಾವಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ಏಳು ತಾಸು ತ್ರಿಫೇಸ್ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತಾಲೂಕಿನ ಕಾಗಿನೆಲೆ, ಹೆಡಿಗ್ಗೊಂಡ, ನಾಗಲಾಪುರ, ಕುಮ್ಮೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ಕುಮ್ಮೂರು ಕ್ರಾಸ್ ಬಳಿಯ ವಿದ್ಯುತ್ ಗ್ರಿಡ್ ಬಳಿ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.

    ರೈತ ಸದಾನಂದ ಪಾಟೀಲ ಮಾತನಾಡಿ, ಮುಂಗಾರು ಬೆಳೆ ವೈಫಲ್ಯ ಹಾಗೂ ಅತಿವೃಷ್ಟಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈಗ ಮಳೆ ಕೈಕೊಟ್ಟ ಪರಿಣಾಮ ರೈತರು ಇನ್ನಷ್ಟು ಕಂಗಾಲಾಗಿದ್ದಾರೆ. ಮಳೆ ಕೊರತೆಯಿಂದ ಬೆಳೆ ಹಾಳಾಗುತ್ತಿದ್ದು, ವಿದ್ಯುತ್ ಕಣ್ಣುಮುಚ್ಚಾಲೆಯಿಂದ ಬೆಳೆಗಳಿಗೆ ಕೊಳವೆಬಾವಿ ನೀರು ಹಾಯಿಸಲು ಆಗದಂತಾಗಿದೆ. ಹೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೆ, ರೈತರಿಗೆ ತೊಂದರೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹೆಸ್ಕಾಂ ಅಧಿಕಾರಿಗಳು ಕಳೆದ ವಾರದಿಂದ ವಿದ್ಯುತ್ ಸಮಸ್ಯೆ ಮಾಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಸುತ್ತಿಲ್ಲ. ತಾಲೂಕಿನಲ್ಲಿ ಇತ್ತೀಚೆಗೆ ಒಂದು ಗಂಟೆ ವಿದ್ಯುತ್ ಕಡಿಮೆ ಪೂರೈಸಲಾಗುತ್ತಿದೆ. ಈಗ ಬೆಳಗ್ಗೆ, ಸಂಜೆ ಸೇರಿ ಕೇವಲ ಮೂರು ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹೆಸ್ಕಾಂ ಅಧಿಕಾರಿಗಳು ಇಂತಹ ನಿರ್ಲಕ್ಷ್ಯ ಮುಂದುವರಿಸಿದರೆ, ರೈತರು ಬೀದಿಗಿಳಿದು ಹೋರಾಡುತ್ತೇವೆ ಎಂದು ಎಚ್ಚರಿಸಿದರು.

    ಪ್ರತಿಭಟನೆ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂ ಇಂಜಿನಿಯರ್ ಹಾಲೇಶ ಅಂತರವಳ್ಳಿ ಮಾತನಾಡಿ, ಲೋಡ್ ಶೆಡ್ಡಿಂಗ್ ಸಮಸ್ಯೆಯಿಲ್ಲ. ಮೇಲ್ಮಟ್ಟದಲ್ಲಿ ತಾಂತ್ರಿಕತೆ ದುರಸ್ತಿ ಇತ್ಯಾದಿ ಕಾರಣಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ರೈತರಿಗೆ ತೊಂದರೆ ನೀಡುವ ಉದ್ದೇಶವಿಲ್ಲ. ಇವತ್ತು ಸಂಜೆಯಿಂದಲೇ ಸಮರ್ಪಕವಾಗಿ ಪೂರೈಸಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ರೈತರು ಕೈಬಿಟ್ಟರು.

    ರಾಜಣ್ಣ ಕಡಗಿ, ಚನ್ನಬಸಪ್ಪ ಕೋಡಿಹಳ್ಳಿ, ರಾಮು ಪೂಜಾರ, ಮಹಾಂತೇಶ ಕಟ್ಟಿಮನಿ, ಜಿಗಳೆಪ್ಪ ಹೆಡಿಗೊಂಡ, ಚನ್ನಬಸಪ್ಪ ಚಿಕ್ಕಣಜಿ, ಬಸಪ್ಪ ದೊಡ್ಡಮನಿ, ರವಿ ಹೊಸಕೇರಿ, ಪಿ.ಎಸ್. ಸಿದ್ದಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts