More

    ರೈತ ಸಂಘದಿಂದ ಪ್ರತಿಭಟನೆ

    ಹಾನಗಲ್ಲ: ಬೆಳೆ ವಿಮೆ ಹಾಗೂ ಬೆಳೆ ಹಾನಿ ಪರಿಹಾರ ಹಣ ವಿತರಣೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೊಷಿಸಿದಂತೆ ರೈತರ ಸಾಲ ಮನ್ನಾ ಇನ್ನೂ ಪೂರ್ಣಗೊಂಡಿಲ್ಲ. ಹಾಲಿ ಸಿಎಂ ಯಡಿಯೂರಪ್ಪ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಆಗಸ್ಟ್​ನಲ್ಲಾದ ಅತಿವೃಷ್ಟಿಯಿಂದ ಧರ್ವ ಕಾಲುವೆ ಸೇರಿ ತಾಲೂಕಿನ ಹಲವು ಕೆರೆಗಳು ಒಡೆದಿದ್ದು, ಅವುಗಳನ್ನು ಕೂಡಲೆ ದುರಸ್ತಿಗೊಳಿಸಬೇಕು. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಜಿಲ್ಲಾಧಿಕಾರಿ ಹಣ ಬಿಡುಗಡೆಗೊಳಿಸಬೇಕು. ಅಲ್ಲದೆ, ಅತಿವೃಷ್ಟಿಯಿಂದ ಹಾಳಾದ ಬೆಳೆಹಾನಿಗೊಳಗಾದ ಶೇ. 40ರಷ್ಟು ರೈತರಿಗೆ ಮಾತ್ರ ಪರಿಹಾರ ಬಿಡುಗಡೆಗೊಳಿಸಿದೆ. ಇನ್ನೂ ಶೇ. 60ರಷ್ಟು ರೈತರಿಗೆ ಹಣ ಬಂದಿಲ್ಲ. ಕೂಡಲೆ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

    ರೈತ ಮುಖಂಡ ಪ್ರಕಾಶಗೌಡ ಪಾಟೀಲ ಮಾತನಾಡಿ, ಅಧಿಕಾರಿಗಳು ತಪ್ಪು ಮಾಡುವುದರಿಂದ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿವೆ ಎಂದು ಹಲವು ಘಟನೆಗಳಿಂದ ಸಾಬೀತಾಗಿದೆ. ಒಂದು ವಾರದೊಳಗಾಗಿ ಸಮಸ್ಯೆ ಇತ್ಯರ್ಥಗೊಳಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

    ಮಲ್ಲೇಶಪ್ಪ ಪರಪ್ಪನವರ ಮಾತನಾಡಿ, 2016-17ರ ಬೆಳೆ ವಿಮೆಯ ಅಕ್ಕಿ-ಭತ್ತದ ವ್ಯತ್ಯಾಸದ ಲೆಕ್ಕಾಚಾರದಲ್ಲಿ ತಾಲೂಕಿಗೆ 9 ಕೋಟಿ ರೂ. ಬರಬೇಕಿದೆ. 2018-19ರ 2723 ರೈತರಿಗೆ 6.07 ಕೋಟಿ ರೂ. ಬರಬೇಕಿದ್ದು, ತಾಂತ್ರಿಕ ಸಮಸ್ಯೆ ಎದುರಾಗಿದೆ. ಅದನ್ನು ಅಧಿಕಾರಿಗಳು ಕೂಡಲೇ ಸರಿಪಡಿಸಬೇಕು. 2019-20ರ ಅತಿವೃಷ್ಟಿಯಿಂದ ಬೆಳೆ ಹಾನಿಗೆ ಪರಿಹಾರ ಮಂಜೂರಾದ ರೈತರ ಪಟ್ಟಿಯನ್ನು ಎಲ್ಲ ಗ್ರಾಪಂಗಳಲ್ಲಿ ಲಗತ್ತಿಸಬೇಕು. ವಿಮೆ ಕಂಪನಿ ರೈತರಿಗೆ ತಕ್ಷಣದ ಶೇ. 25ರಷ್ಟು ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

    ತಹಸೀಲ್ದಾರ್ ಪಿ.ಎಸ್. ಯರ್ರಿಸ್ವಾಮಿ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ರೈತ ಮುಖಂಡರಾದ ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಣ್ಣನವರ, ಮಹೇಶ ವಿರುಪಣ್ಣನವರ, ಶಂಭುಗೌಡ ಪಾಟೀಲ, ಮಹಲಿಂಗಪ್ಪ ಅಕ್ಕಿವಳ್ಳಿ, ಸೋಮಣ್ಣ ಜಡೆಗೊಂಡರ, ಬಾಬಣ್ಣ ವರ್ದಿ, ಗಿರೀಶಸ್ವಾಮಿ ಹಿರೇಮಠ, ಕರಬಸಪ್ಪ ಮಾಕೊಪ್ಪದ, ಜಗದೀಶ ಭಂಗಿ, ಚನಬಸನಗೌಡ ಪಾಟೀಲ, ಶಿವಪುತ್ರಪ್ಪ ಕರಡಿ, ಪುಟ್ಟಪ್ಪ ಗಂಗೋಜಿ, ರಾಮಣ್ಣ ಕೋಟಿ, ಉಮೇಶ ಮೂಡಿ, ಸುರೇಂದ್ರ ಬಿದರಗಡ್ಡಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts